ಮರಗಳನ್ನು ನೋಡುತ್ತ ಕಾಡನ್ನೇ ಮರೆತವರು
ಯಾವುದೇ ಅರ್ಥಶಾಸ್ತ್ರಜ್ಞರು ವಸಾಹತುಶಾಹಿ, ರಾಜ್ಯಸತ್ತೆ ಇಲ್ಲವೇ ಬಂಡವಾಳಶಾಹಿ ತಂದ ಹಾನಿ ಕುರಿತು ಇಲ್ಲವೇ ಪಶ್ಚಿಮದ ಸಂಸ್ಥೆಗಳು ಶ್ರೇಷ್ಠ ಎಂಬ ಅಭಿಪ್ರಾಯವನ್ನು ಪ್ರಶ್ನಿಸುತ್ತಿಲ್ಲ; ಬದಲಾಗಿ ‘ಒಂದು ಸೂಚ್ಯಂಕದಲ್ಲಿ ಆದ ಬದಲಾವಣೆಯಿಂದ ಇನ್ನೊಂದು ಸೂಚ್ಯಂಕದ ಮೇಲೆ ಯಾವ ಪರಿಣಾವುಂಟಾಯಿತು’ ಎಂಬ ಸಂಶೋಧನೆಗೆ ಸೀಮಿತರಾಗಿದ್ದಾರೆ. ಎಜೆಆರ್ ಕೂಡ ಮೂಲಭೂತ ಪ್ರಶ್ನೆಗಳನ್ನು ಕೇಳಿಲ್ಲ ಎನ್ನುವುದು ವಿಷಾದಕರ. ಶೈಕ್ಷಣಿಕ ಕ್ಷೇತ್ರದಲ್ಲಿರುವವರು ಸಾಮಾಜಿಕ ಜವಾಬ್ದಾರಿ ಮರೆತು ಬಹಳ ಕಾಲ ಆಗಿದೆ. ಎಲ್ಲರೂ ಮರಗಳನ್ನು ನೋಡುತ್ತ ಕಾಡನ್ನೇ ಮರೆತಿದ್ದಾರೆ.
2024ರ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರವು ಡರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಜೇಮ್ಸ್ ಎ. ರಾಬಿನ್ಸನ್(ಎಜೆಆರ್) ತ್ರಿವಳಿಗೆ ಸಂದಿದೆ. ಈ ಮೂವರು ನವ ಸಾಂಸ್ಥಿಕ ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಂಸ್ಥೆಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಇವರೆಲ್ಲರೂ ಅಮೆರಿಕದಲ್ಲಿ ನೆಲೆಸಿರುವ ವಲಸಿಗರು. ಅಸೆಮೊಗ್ಲು ಅವರು ಟರ್ಕಿಯ ಇಸ್ತಾಂಬುಲ್‌ನಲ್ಲಿ ಜನಿಸಿ, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಪಿಎಚ್.ಡಿ. ಪಡೆದು, 1993ರಿಂದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೈಮನ್ ಜಾನ್ಸನ್ ಇಂಗ್ಲೆಂಡ್ ಮೂಲದವರು. ಎಂಐಟಿಯಿಂದ ಪಿಎಚ್.ಡಿ. ಪಡೆದು, ಕೆಲಕಾಲ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಲ್ಲಿ ಕಾರ್ಯ ನಿರ್ವಹಿಸಿದ್ದರು. ಜೇಮ್ಸ್ ಎ. ರಾಬಿನ್ಸನ್ ಕೂಡ ಇಂಗ್ಲೆಂಡ್ ಮೂಲದವರು. ಯಾಲೆ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪಡೆದು, ಶಿಕಾಗೋ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ದೇಶಗಳು ಏಕೆ ಶ್ರೀಮಂತವಾಗುತ್ತವೆ ಮತ್ತು ಇನ್ನು ಕೆಲವು ಬಡವಾಗುತ್ತವೆ ಎಂಬುದನ್ನು ವಿವರಿಸುವ ಅಸೆಮೊಗ್ಲು ಮತ್ತು ಜೇಮ್ಸ್ ರಾಬಿನ್ಸನ್ ಅವರ 2012ರ ಪುಸ್ತಕ ‘ವೈ ನೇಷನ್ಸ್ ಫೇಲ್: ದ ಆರಿಜಿನ್ ಆಫ್ ಪವರ್, ಪ್ರಾಸ್ಪರಿಟಿ ಆ್ಯಂಡ್ ಪಾವರ್ಟಿ’ ಅಪಾರ ಪ್ರಭಾವ ಬೀರಿದ ಪುಸ್ತಕ. ಮೂವರೂ ಸೇರಿ ಬರೆದ ‘ಇನ್‌ಸ್ಟಿಟ್ಯೂಷನ್ಸ್ ಆಸ್ ಎ ಫಂಡಮೆಂಟಲ್ ಕಾಸ್ ಆಫ್ ಲಾಂಗ್ ರನ್ ಗ್ರೋಥ್’ ವ್ಯಾಪಕವಾಗಿ ಉಲ್ಲೇಖಗೊಂಡಿರುವ ಹೊತ್ತಗೆ.
ಅವರ ವಾದವೇನು?:
ಪಶ್ಚಿಮ ಮತ್ತು ಪೂರ್ವದ ದೇಶಗಳ ನಡುವಿನ ರಾಜಕೀಯ-ಆರ್ಥಿಕ ಅಭಿವೃದ್ಧಿಯಲ್ಲಿನ ಕಂದರವನ್ನು ವಿವರಿಸಲು ಬಳಸುವ ಪದ ಮಹಾನ್ ದಿಕ್ಚ್ಯುತಿ (ಗ್ರೇಟ್ ಡೈವರ್ಜೆನ್ಸ್). 17 ಮತ್ತು 18ನೇ ಶತಮಾನದಲ್ಲಿ ಕೈಗಾರಿಕೀಕರಣದಿಂದ ಪಶ್ಚಿಮ ಯುರೋಪ್ ರಾಜಕೀಯ ಅಧಿಕಾರ ಮತ್ತು ಆರ್ಥಿಕ ಬಲ ಪಡೆದುಕೊಂಡಿತು. ಕೆಲವು ದೇಶಗಳು ಏಕೆ ಶ್ರೀಮಂತವಾಗುತ್ತವೆ ಮತ್ತು ಇನ್ನು ಕೆಲವು ಬಡವಾಗುತ್ತವೆ? ‘ಒಳಗೊಳ್ಳುವ’ ಮತ್ತು ‘ಹಿಂಡುವ’ ಸಂಸ್ಥೆಗಳ ನಡುವಿನ ವ್ಯತ್ಯಾಸವೇನು? ವಸಾಹತುಶಾಹಿ ಶಕ್ತಿಗಳು ಏಕೆ ಕೆಲವೆಡೆ ‘ಒಳಗೊಳ್ಳುವ’ ಹಾಗೂ ಇನ್ನು ಕೆಲವೆಡೆ ‘ಹಿಂಡುವ’ ವ್ಯವಸ್ಥೆಯನ್ನು ಸ್ಥಾಪಿಸಿದವು? ಎಂಬ ಪ್ರಶ್ನೆಗಳಿಗೆ ಈ ತ್ರಿವಳಿ ಉತ್ತರಕ್ಕೆ ಹುಡುಕಾಟ ನಡೆಸಿದೆ.
ಅವರ ಪ್ರಕಾರ, ದೇಶಗಳಲ್ಲಿನ ಸಂಸ್ಥೆಗಳ ಗುಣಮಟ್ಟವು ಒಂದೋ ಅವುಗಳನ್ನು ಆರ್ಥಿಕ ಸಮೃದ್ಧಿಗೆ ಇಲ್ಲವೇ ದಾರಿದ್ರ್ಯಕ್ಕೆ ಕೊಂಡೊಯ್ಯುತ್ತದೆ; ಒಳಗೊಳ್ಳುವ ಸಂಸ್ಥೆಗಳು ಇರುವ ದೇಶಗಳಲ್ಲಿ ಕಾನೂನು ಆಡಳಿತವಿರಲಿದ್ದು, ಆಸ್ತಿ ಹಕ್ಕು ಜಾರಿಗೊಳಿಸಿರುವುದರಿಂದ ಜನರು ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಹಣ ಉಳಿಸಿ, ಹೂಡಿಕೆ ಮಾಡುತ್ತಾರೆ. ಇನ್ನೊಂದೆಡೆ, ಹಿಂಡುವ ಪ್ರವೃತ್ತಿ(ಎಕ್ಸ್‌ಟ್ರಾಕ್ಟಿವ್)ಯ ಸಂಸ್ಥೆಗಳು ಇರುವ ದೇಶಗಳಲ್ಲಿ ಅಧಿಕಾರ ಕೇಂದ್ರೀಕರಣಗೊಂಡು, ರಾಜಕೀಯ ಸ್ವಾತಂತ್ರ್ಯಕ್ಕೆ ನಿರ್ಬಂಧ ಇರುವುದರಿಂದ, ಇವು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಈ ಸಂಸ್ಥೆಗಳು ನಾನಾ ಕಾನೂನು ಇಲ್ಲವೇ ಸಮಾಜದಲ್ಲಿ ಮನುಷ್ಯರ ಸಂಬಂಧಗಳನ್ನು ನಿರ್ವಹಿಸುವ ಅಂತರ್ಗತ ನೀತಿನಿಯಮ ಆಗಿರಬಹುದು; ಜನರನ್ನು ಸರಕಾರದ ಶೋಷಣೆಯಿಂದ ರಕ್ಷಿಸುವ ಕಾನೂನು ಕೂಡ ಇದರಲ್ಲಿ ಸೇರಿರಬಹುದು. ಇಂತಹ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವವೂ ಒಂದು ಎಂದು ವರ್ಗೀಕರಿಸಿರುವುದು ಗಮನಾರ್ಹ. ರಾಚನಿಕ ಸುಧಾರಣೆಯಾದಂತೆ ಸಂಸ್ಥೆಗಳ ಗುಣಮಟ್ಟ ಹೆಚ್ಚಳಗೊಂಡು, ದೇಶಗಳು ಹೆಚ್ಚು ತಲಾದಾಯ ಇರುವ ಪಶ್ಚಿಮದ ದೇಶಗಳ ಜೀವನಮಟ್ಟವನ್ನು ಸಾಧಿಸುತ್ತವೆ. ಈ ಸಂಸ್ಥೆಗಳು ಮಾನವರ ವರ್ತನೆಗೆ ನಿರ್ಬಂಧ ಒಡ್ಡಲಿದ್ದು, ಕಾನೂನು ಮತ್ತು ಸುರಕ್ಷತೆಯ ಹೆಸರಿನಲ್ಲಿ ಆಟದ ನಿಯಮಗಳನ್ನು ರೂಪಿಸುತ್ತವೆ; ತಮ್ಮನ್ನು ರಕ್ಷಿಸಿಕೊಳ್ಳಲು ಆಗದೆ ಇರುವವರ ಮೇಲೆ ರಾಜ್ಯ ಇಲ್ಲವೇ ಇತರರು ಬಲಪ್ರಯೋಗ ಮಾಡುವುದನ್ನು ತಡೆಯುತ್ತವೆ. ಕಾರ್ಯಾಂಗದ ಅಧಿಕಾರಕ್ಕೆ ಸಾಂವಿಧಾನಿಕ ಮಿತಿ ಹೇರುವ ಮೂಲಕವೂ ಶೋಷಣೆಯನ್ನು ತಡೆಯಬಹುದು.
ಎಜೆಆರ್ ಪ್ರಕಾರ, ವಸಾಹತುಶಾಹಿ ಸಂದರ್ಭದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ದೇಶ ಸ್ವಾತಂತ್ರ್ಯ ಪಡೆದ ನಂತರವೂ ದೃಢ ಪರಿಣಾಮ ಬೀರಿವೆ. ಸಹಾರಾ ಕೆಳಗಿನ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ದೇಶಗಳು ಹಾಗೂ ದಕ್ಷಿಣ ಏಶ್ಯದಲ್ಲಿ ವಸಾಹತು ಶಾಹಿಯು ಹಿಂಡುವ ಸಂಸ್ಥೆಗಳನ್ನು ಸ್ಥಾಪಿಸಿತು. ಆದರೆ, ಅಮೆರಿಕ, ನ್ಯೂಝಿಲೆಂಡ್, ಆಸ್ಟ್ರೇಲಿಯ ಹಾಗೂ ಕೆನಡಾದಲ್ಲಿ ಇಂಥ ಸಂಸ್ಥೆಗಳು ಕಡಿಮೆ ಇದ್ದವು. ಇವು ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಿದವು.
ಅಸೆಮೊಗ್ಲು, ರಾಬಿನ್ಸನ್ ಹಾಗೂ ಜಾನ್ಸನ್ ವಿವಿಧ ವಸಾಹತುಗಳು ಹಾಗೂ ಅವುಗಳ ಆರ್ಥಿಕ ಪರಿಸ್ಥಿತಿ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ವಸಾಹತುಶಾಹಿಯು ತಮ್ಮವರು ನೆಲೆಗೊಳ್ಳದ ದೇಶಗಳಲ್ಲಿ ಹಿಂಡುವ ಸಂಸ್ಥೆಗಳನ್ನು ಸ್ಥಾಪಿಸಿತು. ಉದಾಹರಣೆಗೆ, ಬ್ರಿಟಿಷರು ಭಾರತದಲ್ಲಿ ಸ್ವಾಭಾವಿಕ ಸಂಪನ್ಮೂಲಗಳನ್ನು ಕಡಿಮೆ ಅವಧಿಯಲ್ಲಿ ಬರಿದು ಮಾಡುವಂಥ ಸಂಸ್ಥೆಗಳನ್ನು ಸ್ಥಾಪಿಸಿದರು. ಅದೇ ಬ್ರಿಟಿಷರು ಆಸ್ಟ್ರೇಲಿಯ ಮತ್ತು ಅಮೆರಿಕದಲ್ಲಿ ದೀರ್ಘಕಾಲ ಉಳಿಯುವ, ಆರ್ಥಿಕ ಬೆಳವಣಿಗೆ ಹಾಗೂ ಹೂಡಿಕೆಯನ್ನು ಉತ್ತೇಜಿಸುವಂಥ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ದೇಶಗಳ ವಸಾಹತುಗಳಲ್ಲಿ ಯುರೋಪಿಯನ್ನರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು ಇದಕ್ಕೆ ಕಾರಣ. ಈ ವಸಾಹತುಗಳಲ್ಲಿ ರೋಗಮುಕ್ತ ಪರಿಸರ ಇದ್ದಿತ್ತು. ಆದರೆ, ಉಷ್ಣ ವಲಯದ ದೇಶಗಳಲ್ಲಿ ನೆಲೆಸಿದ್ದ ವಲಸಿಗರು ರೋಗದಿಂದ ನಿರ್ವಂಶರಾದರು. ಎಜೆಆರ್ ತಂಡ ಈ ಸಂಬಂಧ ವಿಸ್ತೃತ ಅಂಕಿಅಂಶಗಳನ್ನು ಸಂಗ್ರಹಿಸಿ, ಹೊಸ ಚರಾಂಶ(ವೇರಿಯಬಲ್, ಬದಲಾಗುವ ಅಂಶಗಳು)ಗಳನ್ನು ಗುರುತಿಸಿದೆ. ಒಳ್ಳೆಯ ಸಂಸ್ಥೆಯೊಂದು ಹೀಗೆಯೇ ಇರಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ಅಧಿಕಾರ ಇರುವ ಗುಂಪುಗಳು ತಮಗೆ ಅನುಕೂಲವಾಗುವಂತೆ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ.
ಕೆಲವು ದೇಶಗಳು ಶ್ರೀಮಂತಿಕೆ ಮತ್ತು ಇನ್ನು ಕೆಲವು ಬಡತನದಿಂದ ಇರಲು, ಅಲ್ಲಿನ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳ ಗುಣಮಟ್ಟ ಕಾರಣ. ಸಂಸ್ಥೆಗಳ ಗುಣಮಟ್ಟ ಏಕೆ ಮುಖ್ಯ ಎಂದರೆ, ಅವು ‘ಆಟದ ನಿಯಮಗಳನ್ನು’ ರೂಪಿಸುತ್ತವೆ. ಉದಾಹರಣೆಗೆ, ಪ್ರಾಮಾಣಿಕರ ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳುವುದನ್ನು ಸಂಸ್ಥೆಗಳು ತಡೆದರೆ, ಜನಸಾಮಾನ್ಯರು ಆಸ್ತಿಯ ಅತಿಕ್ರಮಣದ ಭಯವಿಲ್ಲದೆ ಕಷ್ಟಪಟ್ಟು ದುಡಿಯುತ್ತಾರೆ; ಇದರಿಂದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಹಾಗೂ ಉತ್ತಮ ಜೀವನ ಮಟ್ಟ ಸಾಧ್ಯವಾಗುತ್ತದೆ; ಆದರೆ, ಆಸ್ತಿಯ ಅತಿಕ್ರಮಣವನ್ನು ಶಾಸನಬದ್ಧಗೊಳಿಸಿದರೆ, ಜನಸಾಮಾನ್ಯರು ನಿರುತ್ಸಾಹಗೊಳ್ಳುತ್ತಾರೆ; ಇದರಿಂದ ಆರ್ಥಿಕ ಜಡತೆ ಆವರಿಸಿ, ಬಡತನಕ್ಕೆ ದಾರಿ ಮಾಡಿಕೊಡುತ್ತದೆ.
ಇಂಥ ಒಳಗೊಳ್ಳುವ ಸಂಸ್ಥೆಗಳನ್ನು ಜಗತ್ತಿನ ಹಲವು ದೇಶಗಳು ಏಕೆ ಸ್ಥಾಪಿಸಿಲ್ಲ ಎಂಬ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ. ಇದಕ್ಕೆ ಆಯಾ ದೇಶಗಳ ಆಡಳಿತಗಾರರು ತೆಗೆದುಕೊಳ್ಳುವ ನಿರ್ಧಾರಗಳು ಕಾರಣ. ಅವರು ಹಿಂಡುವ ಸಂಸ್ಥೆಗಳ ಮೂಲಕ ಬೇಕಾದಷ್ಟು ಹಣ ಸಂಗ್ರಹಿಸಿದ ಬಳಿಕ, ಹೆಚ್ಚು ಜನರಿಗೆ ದೀರ್ಘ ಕಾಲದಲ್ಲಿ ಉಪಯುಕ್ತವಾದ ರಾಜಕೀಯ/ಆರ್ಥಿಕ ಸುಧಾರಣೆಗೆ ಮುಂದಾಗುವುದಿಲ್ಲ. ಇದು ಜನ ಬಂಡೇಳುವವರೆಗೆ ಮುಂದುವರಿ ಯುತ್ತದೆ. ಜನಾಕ್ರೋಶಕ್ಕೆ ಬೆದರಿ, ಆರ್ಥಿಕ ಬೆಳವಣಿಗೆಗೆ ಕಾರಣ ವಾಗುವ ಒಳಗೊಳ್ಳುವ ಸಂಸ್ಥೆಗಳನ್ನು ಸ್ಥಾಪಿಸುವ ಸಾಧ್ಯತೆ ಇರುತ್ತದೆ.
ಈ ತ್ರಿವಳಿಯ ವ್ಯಾಖ್ಯಾನವನ್ನು ಆಧರಿಸಿ, ಭಾರತೀಯ ಉಪಖಂಡದಿಂದ ಎರಡು ಪ್ರಮುಖ ಅಧ್ಯಯನಗಳು ನಡೆದಿವೆ; ಅಭಿಜಿತ್ ಬ್ಯಾನರ್ಜಿ ಮತ್ತು ಲಕ್ಷ್ಮೀ ಅಯ್ಯರ್(2005) ಅವರ ವಸಾಹತು ಕಾಲದ ಭೂಮಾಲಕ ಆಧರಿತ ಭೋಗಾವಧಿ ವ್ಯವಸ್ಥೆಗಳಿಂದ ಕಾಲಕ್ರಮೇಣ ಕೃಷಿಯಲ್ಲಿ ಹೂಡಿಕೆ/ಇಳುವರಿ ಕುಸಿತವಾಯಿತು ಎಂಬ ಅಧ್ಯಯನ ಹಾಗೂ ಲಕ್ಷ್ಮೀ ಅಯ್ಯರ್(2010) ಅವರ ವಸಾಹತುಶಾಹಿಯ ನೇರ ಆಡಳಿತದಲ್ಲಿದ್ದ ಪ್ರದೇಶಗಳಲ್ಲಿ ಬೇರೆಡೆಗೆ ಹೋಲಿಸಿದರೆ, ಶಾಲೆ, ರಸ್ತೆ ಹಾಗೂ ಆರೋಗ್ಯ ಕೇಂದ್ರಗಳು ಹೆಚ್ಚು ಸಂಖ್ಯೆಯಲ್ಲಿದ್ದವು ಎಂಬ ಅಧ್ಯಯನ.
ಟೀಕೆಗಳೇನು?:
ಈ ತ್ರಿವಳಿಯ ಸಿದ್ಧಾಂತ ಕುರಿತು ಹಲವು ಆಕ್ಷೇಪಗಳಿವೆ. ಇವರಿಗೆ ವಸಾಹತುಶಾಹಿಯ ಕ್ರೌರ್ಯದ ಬಗ್ಗೆ ಅರಿವಿಲ್ಲ; ಪಾಶ್ಚಿಮಾತ್ಯ ಸಂಸ್ಥೆಗಳ ಪ್ರಗತಿ ಕುರಿತು ಮೇಲ್ನೋಟದ ಸುಂದರ ಚಿತ್ರಣ ನೀಡಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.
ಮೊದಲಿಗೆ, ಒಳಗೊಳ್ಳುವ ಸಂಸ್ಥೆಗಳು ದೀರ್ಘಕಾಲೀನ ಪ್ರಗತಿಗೆ ಕಾರಣವಾಗುತ್ತವೆ ಮತ್ತು ಇವು ಅಧಿಕ ಆದಾಯವಿರುವ ಪಶ್ಚಿಮದ ದೇಶಗಳಲ್ಲಿ ಕಂಡುಬರುತ್ತವೆ. ಬದಲಾಗಿ, ಹಿಂಡುವ ಸಂಸ್ಥೆಗಳಿಂದ ಅಧಿಕಾರ ಮತ್ತು ಸಂಪನ್ಮೂಲ ಕೆಲವೇ ಜನರ ಕೈಯಲ್ಲಿ ಕೇಂದ್ರೀಕರಣಗೊಂಡು, ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬ ವಾದ. ಇದರ ಸಮಸ್ಯೆ ಏನೆಂದರೆ, ಅಭಿವೃದ್ಧಿಗೆ ಇಂಥ ಕೆಲವು ಸಂಸ್ಥೆಗಳು ಇರಲೇಬೇಕು ಎಂಬ ಶರತ್ತು. ಇಂಥ ಸಂಸ್ಥೆಗಳು ಇಲ್ಲದೆಯೇ ತೀವ್ರ ಬೆಳವಣಿಗೆ ದಾಖಲಿಸಿರುವ ದೇಶಗಳಿವೆ; ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ತೈವಾನ್. ಇತ್ತೀಚೆಗೆ ಚೀನಾ.
ಜಾನ್ಸ್ ಹಾಪ್ಕಿನ್ಸ್ ವಿಶ್ಯವಿದ್ಯಾನಿಲಯದ ರಾಜಕೀಯ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಯುಯೆನ್ ಯುಯೆನ್ ಆಂಗ್ ಅವರ ಪ್ರಶಸ್ತಿ ಪುರಸ್ಕೃತ ಪುಸ್ತಕ ‘ಚೀನಾಸ್ ಗಿಲ್ಡೆಡ್ ಏಜ್’, ಚೀನಾದ ಪ್ರಗತಿಯ ಮಾರ್ಗವು ಭ್ರಷ್ಟಾಚಾರದಿಂದ ಕೂಡಿತ್ತು ಎನ್ನುತ್ತದೆ. ‘ಎಜೆಆರ್ ಸಿದ್ಧಾಂತವು ಚೀನಾದ ಬೆಳವಣಿಗೆಯನ್ನು ವಿವರಿಸುವುದಿಲ್ಲ; ಅದು ಪಾಶ್ಚಿಮಾತ್ಯ ದೇಶಗಳಲ್ಲೂ ವಿಫಲವಾಗಿವೆ. ಅಮೆರಿಕದ ಅಭಿವೃದ್ಧಿ ಪಥ ಕೂಡ ಭ್ರಷ್ಟಾಚಾರದಿಂದ ತುಂಬಿದೆ’ ಎಂದು ಲೇಖಕಿ ಹೇಳುತ್ತಾರೆ. ಅವರ ಇನ್ನೊಂದು ಪುಸ್ತಕ ‘ಹೌ ಚೀನಾ ಎಸ್ಕೇಪ್ಡ್ ಪಾವರ್ಟಿ ಟ್ರ್ಯಾಪ್’ ಚೀನಾ ಹೇಗೆ ಬಡತನದ ಸುಳಿಯಿಂದ ತಪ್ಪಿಸಿಕೊಂಡಿತು ಎಂದು ವಿವರಿಸುತ್ತದೆ. ಹಿಂಡುವ ಸಂಸ್ಥೆಗಳಿಂದ ಚೀನಾದ ಬೆಳವಣಿಗೆ ಕುಸಿಯಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಅದು ತೀವ್ರ ಬೆಳವಣಿಗೆ ಸಾಧಿಸಿದೆ.
ಯುಯೆನ್ ಯುಯೆನ್ ಆಂಗ್ ಪ್ರಕಾರ, ಎಜೆಆರ್ ಸಿದ್ಧಾಂತವು ಪಾಶ್ಚಿಮಾತ್ಯ ದೇಶಗಳ ಉದಾರವಾದಿ ಸಂಸ್ಥೆಗಳನ್ನು ವೈಭವೀಕರಿಸುತ್ತದೆ. ಅಮೆರಿಕ ಪ್ರಗತಿ ಹೊಂದುತ್ತಿರುವಾಗ, ಅಲ್ಲಿ ಕೂಡ ಚೀನಾದಂತೆ ಭ್ರಷ್ಟಾಚಾರ ಅಥವಾ ಅಕ್ರಮ ನಡೆದಿತ್ತು. ಪಶ್ಚಿಮ ಯುರೋಪಿನ ಸಂಸ್ಥೆಗಳು ಅಮೆರಿಕದಲ್ಲಿ ಗುಲಾಮರ ಮಾರಾಟ, ಮಹಿಳೆಯರಿಗೆ ಆಸ್ತಿ-ಮತದಾನ ಹಕ್ಕು ನಿರಾಕರಣೆ, ಮೂಲನಿವಾಸಿ ಅಮೆರಿಕನ್ನರ ಮಾರಣಹೋಮ ನಡೆಸಿದವು. ಲಂಡನ್ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರಜ್ಞ ಓನುರ್ ಉಲಾಸ್ ಇನ್ಕ್(2022), ವಸಾಹತುಶಾಹಿ ಹಾಗೂ ಬಂಡವಾಳಶಾಹಿಯ ಸಂಕೀರ್ಣತೆಗಳನ್ನು ವಿಮರ್ಶಾತ್ಮಕವಾಗಿ ನೋಡಲು ಎಜೆಆರ್ ಹಿಂಜರಿಯುತ್ತಾರೆ ಎನ್ನುತ್ತಾರೆ.
ಎರಡನೆಯದಾಗಿ, ವಸಾಹತುಶಾಹಿಯ ಕ್ರೌರ್ಯದ ನಿರಾಕರಣೆ. ಎಜೆಆರ್ ಸಿದ್ಧಾಂತವು ಪಾಶ್ಚಿಮಾತ್ಯ ರಾಷ್ಟ್ರಗಳು ಶ್ರೇಷ್ಠ ಎಂಬ ಅಭಿಪ್ರಾಯವನ್ನು ನ್ಯಾಯಬದ್ಧಗೊಳಿಸುತ್ತದೆ; ಆದರೆ, ವಸಾಹತುಶಾಹಿಯ ದೌರ್ಜನ್ಯ-ಕ್ರೌರ್ಯವನ್ನು ಖಂಡಿಸುವುದಿಲ್ಲ. ಯುರೋಪಿಯನ್ನರು ಸ್ವಯಂ ನೆಲೆಸಿದ್ದ ಅಮೆರಿಕ, ಆಸ್ಟ್ರೇಲಿಯ ಮತ್ತು ಕೆನಡಾದ ವಸಾಹತುಗಳಲ್ಲಿ ಕೂಡ ಹಿಂಸೆ ವ್ಯಾಪಕವಾಗಿತ್ತು-ಮೂಲವಾಸಿಗಳ ಜನಾಂಗೀಯ ಹತ್ಯೆ ನಡೆಯಿತು. ಆಫ್ರಿಕಾದ ಹೆಚ್ಚಿನ ಭಾಗ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಅವರು ಹಿಂಡುವ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ಸಂಸ್ಥೆಗಳ ಧನದಾಹದಿಂದ ಸ್ವಾಭಾವಿಕ ಸಂಪನ್ಮೂಲ ಬರಿದಾಯಿತು. ಇದಕ್ಕೆ ಜನ ಬೆಲೆ ತೆತ್ತರು. ಎಜೆಆರ್ ವಿಶ್ಲೇಷಣೆ ಇದನ್ನೆಲ್ಲ ಪರಿಗಣಿಸುವುದಿಲ್ಲ.
ಗಂಭೀರ ಪ್ರಶ್ನೆಗಳನ್ನು ಎತ್ತುವುದಿಲ್ಲ: ಪ್ರಶಸ್ತಿ ಸ್ವೀಕರಿಸಿದ ಅಸೆಮೊಗ್ಲು, ‘‘ನಾವು ವಸಾಹತೀಕರಣದ ರೂಢಿಗತ ಪ್ರಶ್ನೆಗಳನ್ನು ಪರಿಗಣಿಸಿಲ್ಲ. ವಸಾಹತೀಕರಣ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂದು ಪ್ರಶ್ನಿಸುವ ಬದಲು ವಸಾಹತೀಕರಣದ ವಿವಿಧ ಕಾರ್ಯತಂತ್ರಗಳು ಹೇಗೆ ನಾನಾ ರೀತಿಯ ಸಾಂಸ್ಥಿಕ ರಚನೆಗಳ ಸ್ಥಾಪನೆಗೆ ಕಾರಣವಾದವು ಎಂಬುದನ್ನು ಗುರುತಿಸಿದ್ದೇವೆ’’ ಎನ್ನುತ್ತಾರೆ. ಇದೊಂದು ಆಘಾತಕಾರಿ ಹೇಳಿಕೆ. ಮುಖ್ಯವಾಹಿನಿ ಅರ್ಥಶಾಸ್ತ್ರಜ್ಞರು ಗಂಭೀರ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಎತ್ತುವುದಿಲ್ಲ. ಅರ್ಥಶಾಸ್ತ್ರವು ಬೇರೆ ಸಾಮಾಜಿಕ ವಿಜ್ಞಾನಗಳಿಂದ ದೂರವಾಗಿ, ದ್ವೀಪದಂತಾಗಲು ಇದು ಮುಖ್ಯ ಕಾರಣ.
ಅರ್ಥಶಾಸ್ತ್ರದಲ್ಲಿ ನೊಬೆಲ್ ಅಥವಾ ಸ್ವೆರಿಗ್ಸ್ ರಿಕ್ಸ್‌ಬ್ಯಾಂಕ್ ಪುರಸ್ಕಾರವು ಐದು ಮೂಲ ನೊಬೆಲ್ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ವೈದ್ಯಕೀಯ ಅಥವಾ ದೇಹವಿಜ್ಞಾನ, ಸಾಹಿತ್ಯ ಮತ್ತು ಶಾಂತಿ)ಗಳಲ್ಲಿ ಸೇರಿರಲಿಲ್ಲ. ಬಹುತೇಕ ನೊಬೆಲ್ ಪುರಸ್ಕೃತರು ಅಮೆರಿಕದ ಇಲೈಟ್ ವಿಶ್ವವಿದ್ಯಾನಿಲಯಗಳ ಶಿಕ್ಷಕರು. ಇತ್ತೀಚಿನ ಅಧ್ಯಯನದ ಪ್ರಕಾರ, ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತರಲ್ಲಿ ಹೆಚ್ಚಿನವರು ತಮ್ಮ ವೃತ್ತಿಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಅಮೆರಿಕದ ಪ್ರತಿಷ್ಠಿತ ವಿಶ್ಯವಿದ್ಯಾನಿಲಯಗಳಲ್ಲಿ ಅಧ್ಯಾಪನ ಕೈಗೊಂಡಿರುತ್ತಾರೆ. ಜೊತೆಗೆ, ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ಪ್ರಕಾರ, ಅಮೆರಿಕದಲ್ಲಿ ನೆಲೆಸಿರುವ ವಲಸಿಗರಿಗೆ 117 ರಲ್ಲಿ 45 ನೊಬೆಲ್(ರಸಾಯನಶಾಸ್ತ್ರ, ಭೌತಶಾಸ್ತ್ರ, ವೈದ್ಯಕೀಯ ಕ್ಷೇತ್ರ) ಹಾಗೂ 78ರಲ್ಲಿ 24 ಅರ್ಥಶಾಸ್ತ್ರ ವಿಜ್ಞಾನದ ನೊಬೆಲ್ ಬಂದಿದೆ. ಅಮೆರಿಕ ತನ್ನ ಒಳಗೊಳ್ಳುವಿಕೆ ನೀತಿ ಮೂಲಕ ಸಮೃದ್ಧವಾಗುತ್ತಿದೆ; ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ.
ನೊಬೆಲ್ ಸಮಿತಿ ಪ್ರಕಾರ, ಜಗತ್ತಿನ ಶೇ.20ರಷ್ಟು ರಾಷ್ಟ್ರಗಳು ಶೇ.20ರಷ್ಟು ಅತಿ ಬಡ ದೇಶಗಳಿಗಿಂತ 30 ಪಟ್ಟು ಶ್ರೀಮಂತಿಕೆ ಹೊಂದಿವೆ. ಕೈಗಾರಿಕಾ ಕ್ರಾಂತಿಯಿಂದ ಪೂರ್ವ ಮತ್ತು ಪಶ್ಚಿಮ ದೇಶಗಳ ಜನರ ಜೀವನಶೈಲಿಯಲ್ಲಿ ’ಮಹಾನ್ ದಿಕ್ಚ್ಯುತಿ’ ಉಂಟಾಗಿದೆ. ಇದನ್ನು ವಿವರಿಸಲು ಹಲವು ಸಿದ್ಧಾಂತಿಗಳು ಪ್ರಯತ್ನಿಸಿದ್ದಾರೆ. ಕೆಲವರ ಪ್ರಕಾರ, ಪಶ್ಚಿಮದ ದೇಶಗಳ ವಸಾಹತುಶಾಹಿ ಈ ವ್ಯತ್ಯಾಸಕ್ಕೆ ಕಾರಣ. ಇನ್ನು ಕೆಲವರ ಪ್ರಕಾರ, ಸ್ವಾಭಾವಿಕ ಸಂಪನ್ಮೂಲಗಳ ಲಭ್ಯತೆಯಲ್ಲಿನ ವ್ಯತ್ಯಾಸ ಕಾರಣ. ಮತ್ತೆ ಕೆಲವರ ಪ್ರಕಾರ, ಬುದ್ಧಿವಂತಿಕೆ ಮತ್ತು ಚಾರಿತ್ರಿಕ ಅವಘಡಗಳು ಕಾರಣ ಇರಬಹುದು. ಆದರೆ, ಯಾವುದೇ ಅರ್ಥಶಾಸ್ತ್ರಜ್ಞರು ವಸಾಹತುಶಾಹಿ, ರಾಜ್ಯಸತ್ತೆ ಇಲ್ಲವೇ ಬಂಡವಾಳಶಾಹಿ ತಂದ ಹಾನಿ ಕುರಿತು ಇಲ್ಲವೇ ಪಶ್ಚಿಮದ ಸಂಸ್ಥೆಗಳು ಶ್ರೇಷ್ಠ ಎಂಬ ಅಭಿಪ್ರಾಯವನ್ನು ಪ್ರಶ್ನಿಸುತ್ತಿಲ್ಲ; ಬದಲಾಗಿ ‘ಒಂದು ಸೂಚ್ಯಂಕದಲ್ಲಿ ಆದ ಬದಲಾವಣೆಯಿಂದ ಇನ್ನೊಂದು ಸೂಚ್ಯಂಕದ ಮೇಲೆ ಯಾವ ಪರಿಣಾವುಂಟಾಯಿತು’ ಎಂಬ ಸಂಶೋಧನೆಗೆ ಸೀಮಿತರಾಗಿದ್ದಾರೆ. ಎಜೆಆರ್ ಕೂಡ ಮೂಲಭೂತ ಪ್ರಶ್ನೆಗಳನ್ನು ಕೇಳಿಲ್ಲ ಎನ್ನುವುದು ವಿಷಾದಕರ. ಶೈಕ್ಷಣಿಕ ಕ್ಷೇತ್ರದಲ್ಲಿರುವವರು ಸಾಮಾಜಿಕ ಜವಾಬ್ದಾರಿ ಮರೆತು ಬಹಳ ಕಾಲ ಆಗಿದೆ. ಎಲ್ಲರೂ ಮರಗಳನ್ನು ನೋಡುತ್ತ ಕಾಡನ್ನೇ ಮರೆತಿದ್ದಾರೆ.