ಮುಂದಿನ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯುತ್ತದೆ : ಸಚಿವ ಬೋಸರಾಜು

Update: 2024-12-08 15:01 GMT

ಎನ್.ಎಸ್.ಬೋಸರಾಜು

ರಾಯಚೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿಲ್ಲ. ಈಗಾಗಲೇ ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಂತಹ ಯಾವುದೇ ಪ್ರಸಂಗ ಬಂದಿಲ್ಲ, ಯಾವುದೇ ಸಮಸ್ಯೆಯಿಲ್ಲ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ರವಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜಕೀಯ ಬಿಡಲ್ಲ. 78 ವರ್ಷ ವಯಸ್ಸಾಗುತ್ತಿದೆ ಎನ್ನುವ ಕಾರಣಕ್ಕೆ ರಾಜಕೀಯ ಕೊನೇ ಹಂತ ತಲುಪಿದ್ದೇನೆ ಎಂದು ಹೇಳಿದ್ದಾರೆ ಅಷ್ಟೇ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯುತ್ತದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಅಧ್ಯಕ್ಷರ ಸ್ಥಾನವನ್ನು ಮೊದಲು ಸರಿ ಮಾಡಿಕೊಳ್ಳಲಿ. ನಾಲಾಯಕ್ ವಿಜಯೇಂದ್ರ ಎಂದು ಸ್ವತಃ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಸವನಗೌಡ ಪಾಟೀಲ್ ಯತ್ನಾಳ್ ಹೇಳುತ್ತಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿಯವರಿಗೆ ವಕ್ಫ್, ಉಪಚುನಾವಣೆ ಎಲ್ಲವೂ ಮುಗಿದಿದೆ. ಅವರ ಪಕ್ಷದ ಗೊಂದಲವೇ ಬಗೆಹರಿದಿಲ್ಲ. ಆರು ಬಾಗಿಲು ಮಾಡಿಕೊಂಡಿದ್ದಾರೆ. ಅಧಿವೇಶನದಲ್ಲಿ ರಾಜ್ಯದ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಡೆಯುತ್ತವೆ. ಇಷ್ಟು ದಿನ ಮಾಡಿದ ಸುಳ್ಳು ಆರೋಪಗಳನ್ನೇ ಮಾಡುತ್ತಿದ್ದರೆ ಸುಮ್ಮನೆ ಕಾಲಹರಣ ಆಗುತ್ತದೆ. ಅವರು ಸಹಕಾರ ನೀಡಿದರೆ ಕಲಾಪ ಸುಗಮವಾಗಿ ನಡೆಯುತ್ತೆ ಎಂದು ಸಚಿವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News