ರಾಯಚೂರು | ದಕ್ಕಲಿಗ ಸಮಾಜದವರಿಗೆ ಉಚಿತ ನಿವೇಶನ ಹಂಚಿಕೆ ಮಾಡಲು ಒತ್ತಾಯ

Update: 2025-01-14 13:29 GMT

ರಾಯಚೂರು : ಲಿಂಗಸೂಗೂರು ತಾಲೂಕಿನ ಮುದಗಲ್ ನಲ್ಲಿರುವ ಪರಿಶಿಷ್ಟ ಜಾತಿ ಅಲೆಮಾರಿ ದಕ್ಕಲಿಗ ಸಮಾಜದವರಿಗೆ ಉಚಿತ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸುವಂತೆ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಮುದಗಲ್ ನಲ್ಲಿ ಅಲೆಮಾರಿ ಸಮುದಾಯದ ದಕ್ಕಲಿಗ, ದಕ್ಕಲ್, ದೊಕ್ಕಲವಾರ್ ಎಂದು ಕರೆಯಲ್ಪಡುವಂಥ ಸಮಾಜಕ್ಕೆ ಸೇರಿದ ಸುಮಾರು 60 ಕುಟುಂಬಗಳು ವಾಸಿಸುತ್ತಿವೆ. ಆದರೆ, ಇವರಿಗೆ ವಾಸಕ್ಕೆ ಯೋಗ್ಯವಾದ ವಸತಿಗಳಿಲ್ಲದೇ ಗುಡಿಸಲು, ಬಟ್ಟೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರು ವಾಸಿಸುತ್ತಿರುವ ಜಾಗದ ಮಾಲಕರು ಸ್ಥಳ ಖಾಲಿ ಮಾಡುವಂತೆ ಹೇಳಿದಾಗ ಬೇರೆ ಕಡೆ ವಲಸೆ ಹೋಗಬೇಕಾದ ದಯನೀಯ ಸ್ಥಿತಿಯಲ್ಲಿ ಈ ಜನಾಂಗವಿದೆ ಎಂದು ವಿವರಿಸಿದರು.

ಇವರು ಭಿಕ್ಷಾಟನೆ ಚರ್ಮಗಾರಿಕೆ, ಚಿಂದಿ ಆಯುವುದು ಸೇರಿದಂತೆ ಇನ್ನಿತರೆ ಕಾಯಕಗಳನ್ನು ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಕೆಲವೊಮ್ಮೆ ವಾಸಕ್ಕೆ ಸ್ಥಳ ಸಿಗದಿದ್ದಾಗ ಸ್ಮಶಾನ, ತಿಪ್ಪೆಗುಂಡಿಗಳ ಪಕ್ಕದಲ್ಲಿಯೇ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ಇಂಥ ಹೀನ ಜೀವನ ನಡೆಸುತ್ತಿರುವ ಈ ಜನರಿಗೆ ಎರಡು ಎಕರೆ ಸರಕಾರಿ ಜಮೀನು ಗುರುತಿಸಿ ವಾಸಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹಕ್ಕುಪತ್ರ ನೀಡುವುದರ ಜತೆಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಮಹಾಸಭಾದ ಅಧ್ಯಕ್ಷ ರಂಗಮುನಿದಾಸ, ಗೌರವಾಧ್ಯಕ್ಷ ಭೀಮರಾಯ, ಸುರೇಶ ಕಟ್ಟಿಮನಿ, ಶ್ರೀನಿವಾಸ ಎಸ್.ಆರ್. ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News