ರಾಯಚೂರು | ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ
ರಾಯಚೂರು : ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲರ ಜೀವ ರಕ್ಷಣೆಗೆ ಸರಕಾರ ಮುಂದಾಗಬೇಕು ಹಾಗೂ ಕೂಡಲೇ ಅವರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಕಳೆದ ವರ್ಷ ನ.26ರಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಹಿರಿಯ ರೈತ ನಾಯಕ 70 ವರ್ಷದ ಜಗಜಿತ್ ಸಿಂಗ್ ದಲ್ಲೇವಾಲ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ದೇಹ ನಿತ್ರಾಣಗೊಂಡು, ತೂಕವನ್ನು ಕಳೆದುಕೊಂಡಿದ್ದಾರೆ. ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು, ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ಉಂಟಾಗಿದೆ. ಇಂತಹ ಸ್ಥಿತಿಗೆ ಕೇಂದ್ರ ಸರಕಾರವೇ ನೇರ ಕಾರಣವಾಗಿದೆ ಎಂದು ದೂರಿದರು.
ಎನ್ಡಿಎ ಸರಕಾರ ಅಧಿಕಾರಕ್ಕೆ ಮರಳಿದ ನಂತರ ದೇಶದ ಎಲ್ಲ ಸಂಸದರಿಗೆ ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ನೆನಪಿಸುವಂತೆ ಒತ್ತಾಯಿಸಲಾಗಿತ್ತು. ರಾಷ್ಟ್ರಪತಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ 500ಕ್ಕೂ ಹೆಚ್ಚು ಜಿಲ್ಲೆಗಳಿಂದ ಮನವಿ ಸಲ್ಲಿಸಿ ಆಗ್ರಹಿಸಲಾಗಿತ್ತು. ಮೂರು ವರ್ಷಗಳ ನಂತರವೂ ರೈತರ ಹಕ್ಕೋತ್ತಾಯಗಳನ್ನು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ.
ಲಕ್ಷಾಂತರ ರೈತರು ವರ್ಷಾನುಗಟ್ಟಲೇ ಹೋರಾಟ ನಡೆಸಿ ರದ್ದುಪಡಿಸಿಕೊಂಡ ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ. ಕರಾಳ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆಯನ್ನು ಜಾರಿ ಮಾಡುವ ಪ್ರಯತ್ನ ನಡೆಸುತ್ತದೆ ಎಂದು ದೂರಿದರು.
ಎಲ್ಲಾ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು, ರೈತರ ಎಲ್ಲ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು. ವಿವಿಧೆಡೆ ನಡೆಯುತ್ತಿರುವ ಖಾಸಗೀಕರಣ ಹಾಗೂ ಪಂಪ್ ಸೆಟ್ ಮೀಟರೀಕರಣದ ಪ್ರಯತ್ನ ಕೂಡಲೇ ನಿಲ್ಲಿಸಬೇಕು.
60 ವರ್ಷ ದಾಟಿರುವ ಎಲ್ಲ ಕೃಷಿಕರಿಗೆ 5,000 ಮಾಸಿಕ ಪಿಂಚಣಿ ನೀಡಬೇಕು, ಐತಿಹಾಸಿಕ ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲ ಹಕ್ಕೋತ್ತಾಯಗಳನ್ನು ಈಡೇರಿಸಬೇಕು, ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಚಾಮರಸ ಮಾಲಿಪಾಟೀಲ್, ಯು.ಬಸವರಾಜ, ಕೆ.ಜಿ.ವೀರೇಶ, ಪ್ರಭಾಕರ ಪಾಟೀಲ್, ಖಾಜಾ ಅಸ್ಲಂ, ಕರಿಯಮ್ಮ ಅಚ್ಚೊಳ್ಳಿ, ಮಾರೆಪ್ಪ ಹರವಿ, ರಂಗನಾಥ, ಬಸವಂತರಾಯ ಗೌಡ, ಬಡೇಸಾಬ್, ರಂಗನಾಥ ಕೊತ್ತದೊಡ್ಡಿ, ನರಸಣ್ಣ ನಾಯಕ, ಶಿವಾರ್ಜುನ ನಾಯಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.