ರಾಯಚೂರು | ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ
ರಾಯಚೂರು : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕಾ ಆಂದೋಲನದ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮ ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೊರೆ ಅವರು ಉದ್ಘಾಟಿಸಿ ಮಾತನಾಡಿ, ಅಕ್ಷರ ಫೌಂಡೇಷನ್ ಗಣಿತ ಕಲಿಕೆಯಲ್ಲಿ ತನ್ನದೇ ಆದ ಪಾತ್ರ ವಹಿಸಿದ್ದು, ಜಿಲ್ಲಾ ವ್ಯಾಪ್ತಿಯ 178 ಗ್ರಾಮ ಪಂಚಾಯತ್ ಗಳಲ್ಲಿ 4 ರಿಂದ 6ನೇ ತರಗತಿಯ 23 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಗಣಿತ ಪರೀಕ್ಷೆ ನಡೆಸಿದ್ದು, ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ. ಉತ್ತಮ ಸಾಧನೆ ಮಾಡಿದ 25 ಗ್ರಾಮ ಪಂಚಾಯತ್ ಗಳು ಮತ್ತು 25 ಶಾಲೆಗಳಿಗೆ ಸನ್ಮಾನಿಸಿರುವುದು ಹೆಮ್ಮೆ ತಂದಿದೆ ಎಂದು ಅಕ್ಷರ ಫೌಂಡೇಶನ್ ಕಾರ್ಯ ಶ್ಲಾಘಿಸಿದರು.
ಜಿಲ್ಲಾ ಯೋಜನಾಧಿಕಾರಿ ಈರಣ್ಣ ಕೋಸಗಿ ಅವರು ಮಾತನಾಡಿ, ಇಲಾಖೆಯ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಶಾಲೆಗಳಿಗೆ ಭೇಟಿ ನೀಡಿ ಗಣಿತ ಕಿಟ್ ಬಳಕೆಯ ಬಗ್ಗೆ ವೀಕ್ಷಣೆ ನಡೆಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಗಣಿತ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ ಮಕ್ಕಳ ಕಲಿಕಾಮಟ್ಟ ತಿಳಿಯಲು ಸಹಕಾರಿಯಾಗಿದೆ. ಎಲ್ಲಾ ಮಕ್ಕಳು ಗಣಿತ ವಿಷಯವನ್ನು ಆಸಕ್ತಿಯಿಂದ ಕಲಿಯಬೇಕು. ವರದಿ ಆಧಾರದ ಮೇಲೆ ಕ್ರಿಯಾ ಯೋಜನೆ ರೂಪಿಸಿ ಎಲ್ಲಾ ಬಿಆರ್ಸಿ ಮತ್ತು ಸಿಆರ್ಪಿ ಅವರು ಶಾಲೆಗಳಿಗೆ ಭೇಟಿ ನೀಡಿ ಪ್ರತಿದಿನ ಕಿಟ್ ಬಳಕೆ ಮತ್ತು ಪರಿಹಾರ ಬೋಧನೆಯೊಂದಿಗೆ ಸರಿಪಡಿಸಿಕೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕೆ.ಡಿ.ಬಡಿಗೇರ, ಡಯಟ್ ಪ್ರಾಚಾರ್ಯರಾದ ಆರ್ ಇಂದಿರಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪವಾರ್, ದೈಹಿಕ ಶಿಕ್ಷಣ ಅಧಿಕಾರಿ ರಂಗಯ್ಯಸ್ವಾಮಿ, ಗ್ರಾಮ ಪಂಚಾಯಿತಿ ಚಿಕ್ಕಸೂಗೂರುದ ಅಧ್ಯಕ್ಷರಾದ ಮಮತಾ ಅಂಬಯ್ಯಗೌಡ, ವಿಭಾಗೀಯ ಕ್ಷೇತ್ರ ಸಂಯೋಜಕರಾದ ಅಡಿವೇಶ ನೀರಲಕೇರಿ, ಡಯಟ್ ನೋಡಲ್ನ ರಾಜೇಂದ್ರ, ಬಿಆರ್ಪಿಗಳಾದ ಸೋಮನಾಥ್, ನಾಗರಾಜ್ ಜಾವೂರ್ ಇದ್ದರು.
ಸಮಾರಂಭದಲ್ಲಿ 25 ಶಾಲೆಯ ಮುಖ್ಯ ಶಿಕ್ಷಕರು, 25 ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಓ, ಬಿಇಓ, ಬಿಆರ್ಸಿ ಹಾಗೂ ಇತರರು ಭಾಗವಹಿಸಿದ್ದರು.