ದೇವದುರ್ಗ ತಾಲೂಕಿನಲ್ಲಿ ಮಕ್ಕಳ ರಕ್ಷಣೆ ಕಾರ್ಯಾಚರಣೆ ಬಿರುಸು : 22 ಮಕ್ಕಳ ರಕ್ಷಣೆ

Update: 2025-01-13 13:40 GMT

ರಾಯಚೂರು : ಶಾಲೆ ಬಿಡಿಸಿ ಹೊಲಕ್ಕೆ ಕೆಲಸಗಳಿಗೆ ಕರೆದೊಯ್ಯುವ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಯು ದೇವದುರ್ಗ ತಾಲೂಕಿನಲ್ಲಿ ಬಿರುಸುಗೊಂಡಿದ್ದು, ಜ.13ರಂದು 22 ಮಕ್ಕಳನ್ನು ರಕ್ಷಿಸಲಾಗಿದೆ.

ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದೇವದುರ್ಗ ತಾಲೂಕಿನ ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ಟ್ರಾಫಿಕ್ ಪಿ.ಎಸ್.ಐ ನಾರಾಯಣ, ಶಿಕ್ಷಣ ಇಲಾಖೆಯ ಇ.ಸಿ.ಓ ರಾಜನಗೌಡ, ಬಿ.ಆರ್.ಪಿ ಸುರೇಶ, ಸಿ.ಆರ್.ಪಿ ಗಳಾದ ದಾಕ್ಷಾಯಿಣಿ, ವೀರಭದ್ರಯ್ಯ, ವೆಂಕಟಾಂಜನೇಯ್ಯ, ಅಂಬಣ್ಣ ಮದಾಳೆ, ಮಹಾದೇವ, ರಘು ಎನ್. ದೇವದುರ್ಗ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ವಸಂತಕುಮಾರ್, ಮೋಹನ್, ಸಂಗಪ್ಪ ಬಿ., ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ನಾಗರಾಜ, ಬಸವರಾಜ ಮೇತ್ರಿ ಹಾಗೂ ಹುಸೇನ್ ನಾಯ್ಕ ಅಕೌಂಟೆಂಟ್ ಅವರ ತಂಡವು ಜ.13ರಂದು ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ ವಾಹನಗಳ ಮೇಲೆ ಜ.13ರಂದು ಹಠಾತ್ ದಾಳಿ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯು 7 ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಿ ಮಕ್ಕಳನ್ನು ರಕ್ಷಿಸಿ, ವಾಹನ ಮಾಲಕರು ಮತ್ತು ಚಾಲಕರ ವಿರುದ್ಧ ಪೋಲಿಸ್ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದಾರೆ.

ಪ್ರಕರಣ ದಾಖಲು :

ಜ.10 ರಂದು ನಡೆದ ಕಾರ್ಯಾಚರಣೆಯಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ, ಮೆಣಸಿನ ಕಾಯಿ ಹಾಗೂ ಇನ್ನಿತರೆ ಹೊಲಗಳಲ್ಲಿ ತಪಾಸಣೆ ನಡೆಸಿದಾಗ ಹತ್ತಿ ಹೊಲದಲ್ಲಿ ಐವರು ಬಾಲಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡು ಬಂದಿದ್ದು, ಈ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಶಾಲೆಗೆ ಹೋಗುವಂತೆ ಮನವೊಲಿಸಿ ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.

ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಹೊಲದ ಮಾಲಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋಗಿ ಬಾಲಕಾರ್ಮಿಕತೆಯಲ್ಲಿ ತೊಡಗಿಸುತ್ತಿದ್ದ 3 ವಾಹನಗಳನ್ನು ಜಪ್ತಿ ಮಾಡಿ ವಾಹನ ಮಾಲಕರ, ಚಾಲಕರ ವಿರುದ್ಧ ಪೋಲಿಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News