ರಾಯಚೂರು | ಭಗತ್‍ಸಿಂಗ್, ಸುಖದೇವ್, ರಾಜಗುರು ಅವರ ಹುತಾತ್ಮ ದಿನಾಚರಣೆ

ರಾಯಚೂರು : ನಗರದ ಭಗತ್‍ಸಿಂಗ್ ವೃತ್ತದಲ್ಲಿ ಭಾನುವಾರ ಎಐಡಿಎಸ್‍ಒ, ಎಐಡಿವೈಒ, ಎಐಎಂಎಸ್‍ಎಸ್ ಸಂಘಟನೆಗಳಿಂದ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು.
ಎಐಡಿವೈಒ ರಾಜ್ಯ ಅಧ್ಯಕ್ಷರು ಶರಣಪ್ಪ ಉದ್ಭಾಳ್ ಅವರು ಮೊದಲಿಗೆ ಭಾವಚಿತ್ರಕ್ಕೆ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು.
ಎಐಎಂಎಸ್‍ಎಸ್ ಜಿಲ್ಲಾ ಸಂಘಟನಾಕಾರರಾದ ಸರೋಜ ಗೊನವಾರ್ ಅವರು ಮಾತನಾಡಿ, ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಎರಡು ಪಂಥಗಳಿತ್ತು. ಒಂದು ಗಾಂಧೀಜಿ ನೇತೃತ್ವದ ಕಾಂಗ್ರೆಸ್, ಇದು ರಾಜಿ ಪಂಥ. ಇನ್ನೊಂದು ನೇತಾಜಿ ಮತ್ತು ಭಗತ್ ಸಿಂಗ್ ಅವರ ನೇತೃತ್ವದ ಕ್ರಾಂತಿಕಾರಿಗಳ ಗುಂಪು. ಕ್ರಾಂತಿಕಾರಿಗಳು ಜಾತಿ ಪದ್ಧತಿ, ಕೋಮುವಾದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿರಹಿತವಾಗಿ ಹೋರಾಟ ನಡೆಸಿದರು ಎಂದು ಹೇಳಿದರು.
ಕೇವಲ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತದ ಶ್ರೀಮಂತರಿಗೆ ಅಧಿಕಾರ ಹಸ್ತಾಂತರವನ್ನು ಬಯಸಲಿಲ್ಲ. ಬದಲಿಗೆ ಅವರು ಬಯಸಿದ್ದು ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆ. ದೇಶದ ರೈತ-ಕಾರ್ಮಿಕರ ನೇತೃತ್ವದಲ್ಲಿ ಹೋರಾಟ ನಡೆಯಬೇಕು ಮಾನವನಿಂದ ಮಾನವನಿಗೆ ಯಾವುದೇ ಶೋಷಣೆ ಇಲ್ಲದ ಸಮಾಜ ಸ್ಥಾಪಿಸುವುದು ಅವರ ಗುರಿಯಾಗಿತ್ತು ಎಂದು ತಿಳಿಸಿದರು.
ಎಐಡಿಎಸ್‍ಒ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಯ್ಯಾಳಪ್ಪ ಮಾತನಾಡಿ, ಭಗತ್ ಸಿಂಗ್ ಅವರು ಯಾವತ್ತೂ ಜೀವನದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಂಬಿದ ತತ್ವಕ್ಕಾಗಿ ಜೀವವನ್ನೇ ಕೊಟ್ಟರು. ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ನಗುನಗುತ್ತಾ ಗಲ್ಲಿಗೆ ಹೋದರು. ಆದರೆ ಇಂದು ದೇಶವು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಿಕ್ಕಟ್ಟಿನಲ್ಲಿದೆ. ಶಿಕ್ಷಣ ಮತ್ತು ಆರೋಗ್ಯವು ಸಂಪೂರ್ಣವಾಗಿ ಖಾಸಗಿಕರಣವಾಗುತ್ತಿದ್ದು, ಹಣ ಇದ್ದವರಿಗೆ ಮಾತ್ರ ಶಿಕ್ಷಣ, ಆರೋಗ್ಯ ಸಿಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ರಾಜ್ಯ ಬಿಜೆಪಿ ಸರ್ಕಾರವು 13,800 ಶಾಲೆ ಮುಚ್ಚಲು ಹೊರಟ್ಟಿತ್ತು ಆ ಕರಾಳ ನೀತಿಯನ್ನು ನಮ್ಮ ಸಂಘಟನೆ 2ವರ್ಷಗಳ ಹೋರಾಟ ನಡೆಸಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಲಿಲ್ಲ. ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರವು ವಿಲೀನ ಹೆಸರಲ್ಲಿ 6,000 ಶಾಲೆಗಳನ್ನು ಮುಚ್ಚಲು ಹೊರಟಿದೆ ಇದನ್ನು ನಾವು ಪ್ರತಿರೋಧಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದಕುಮಾರ್ ವಹಿಸಿದ್ದರು.
ಎಐಡಿವೈಒ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್, ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಎಐಡಿಎಸ್‍ಒನ ಉಪಾಧ್ಯಕ್ಷ ಪೀರ್ ಸಾಬ್, ಕಾರ್ಮಿಕ ಮುಖಂಡರಾದ ಮಹೇಶ್ ಚೀಕಲಪರ್ವಿ ಮತ್ತು ಅಣ್ಣಪ್ಪ, ನಂದಗೋಪಾಲ್, ಅರವಿಂದ್, ಅಂಬಿಕಾ, ನಾಗವೇಣಿ, ಮೌನೇಶ್, ಸಂದೀಪ್, ಪವನ್, ಬಸವರಾಜ ಹಾಗೂ ಮತ್ತಿತರರಿದ್ದರು.