ಸಿಂಧನೂರು | ಭಗತ್ ಸಿಂಗ್ ಹುತಾತ್ಮ ದಿನಾಚರಣೆ ನಿಮಿತ್ತ ಅಟೋ ಮೆರವಣಿಗೆ

Update: 2025-03-23 16:42 IST
ಸಿಂಧನೂರು | ಭಗತ್ ಸಿಂಗ್ ಹುತಾತ್ಮ ದಿನಾಚರಣೆ ನಿಮಿತ್ತ ಅಟೋ ಮೆರವಣಿಗೆ
  • whatsapp icon

ಸಿಂಧನೂರು : ಭಗತ್ ಸಿಂಗ್ ಹುತಾತ್ಮ ದಿನಾಚರಣೆ ನಿಮಿತ್ತ ನಗರದ್ಯಾಂತ ಬೃಹತ್ ಲಾಲ್ ಸಲಾಂ ಅಟೋ ಮೆರವಣಿಗೆ ಜನರನ್ನು ಆಕರ್ಷಿಸಿತು. ಎಪಿಎಂಸಿಯಿಂದ ಆರಂಭವಾದ ಲಾಲ್ ಸಲಾಂ ಅಟೋ ಮೂಲಕ ಮೆರವಣಿಗೆ ಬಸವವೃತ್ತ, ಗಾಂಧಿವೃತ್ತ, ಕನಕದಾಸ ವೃತ್ತ ಮೂಲಕ ಸಂಚರಿಸಿ ಕೆಇಬಿ ಮುಂದುಗಡೆ ತಲುಪಿತು. ನಗರದ ಅಟೋ ಚಾಲಕರು ಭಾಗಿಯಾಗಿ ಮೆರವಣಿಗೆ ಯುದ್ದಕ್ಕೂ ಭಗತ್ ಸಿಂಗ್ ಪರವಾಗಿ ಘೋಷಣೆ ಕೂಗಿದರು.

ವಿಶೇಷವಾಗಿ ಆಟೋ ಚಾಲಕರು ನೂರಾರು ಸಂಖ್ಯೆಯಲ್ಲಿ ಆಟೋಗಳ ತಮ್ಮ ತಮ್ಮ ಆಟೋಗಳಿಗೆ ಕೆಂಪು ಬಾವುಟ ಭಗತ್ ಸಿಂಗ್ ಭಾವಚಿತ್ರಗಳನ್ನು ಕಟ್ಟುವ ಮೂಲಕ ಜಾಥಾಕ್ಕೆ ಮೆರಗು ನೀಡಿದರು.

ಪರಕೀಯರಿಂದ ನಲುಗಿದ ದೇಶದ ಜನರ ವಿಮೋಚನೆಗೆ ಧೀರೋದಾತ್ತ ಹೋರಾಟ ನಡೆಸುವ ಮೂಲಕ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಸೇನಾನಿ ಭಗತ್ಸಿಂಗ್, ಶಾಹೀದ್ ಭಗತ್ ಸಿಂಗ್ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಆಟೊ ಚಾಲಕರ ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.

ಅವರು ಭಾನುವಾರ ನಗರದ ಕೆಇಬಿ ಮುಂದುಗಡೆ ಭಗತ್ ಸಿಂಗ್ ಆಟೋ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಭಗತ್ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗತ್ ಸಿಂಗ್ ಚಂದ್ರಶೇಖರ್ ಆಝಾದ್, ಸುಖದೇವ್ ಹಾಗೂ ರಾಜಗುರು ಅವರಂಥ ದಿಟ್ಟ ಯುವಕರ ಕೆಚ್ಚೆದೆಯ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ಗೊಡ್ಡು ಬೆದರಿಕೆಗಳಿಗೆ ಹೆದರದೇ, ಯಾವುದೇ ರಾಜಿಗಳಿಗೆ ಒಳಗಾಗದೇ ಬ್ರಿಟಿಷರಿಗೆ ಸಡ್ಡು ಹೊಡೆದ ಭಗತ್ ಸಿಂಗ್ ಮತ್ತವರ ಸ್ನೇಹಿತರ ಧೈರ್ಯ ಯುವಜನತೆಗೆ ಮಾದರಿಯಾಗಿದೆ. ಇಡೀ ದೇಶವನ್ನೇ ಆವರಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆದರೆ ನೈಜ ಇತಿಹಾಸವನ್ನು ಮರೆಮಾಚಲಾಗಿದೆ ಎಂದರು.

ದೇಶದ ದುಡಿಯುವ ಜನರ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದ ಭಗತ್ ಮತ್ತು ಸಹಗೆಳೆಯರು ದೇಶದ ಜನರನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವುದಷ್ಟೇ ಅಲ್ಲದೇ ಭವಿಷ್ಯದ ಭಾರತವನ್ನು ಕಟ್ಟುವ ಮುನ್ನೋಟವನ್ನು ಹೊಂದಿದ್ದರು. ಹಾಗಾಗಿ ಇಂದಿನ ಯುವಕರು ಭಗತ್ ಸಿಂಗ್ ಮತ್ತವರ ಸಹಚರರ ಆಶಯಗಳನ್ನು ಈಡೇರಿಸುವ ಮೂಲಕ ಪ್ರಜಾಸತ್ತಾತ್ಮಕ ಅಂಶಗಳಡಿ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.

ಆಟೊ ಚಾಲಕರ ಸಂಘದ ಅಧ್ಯಕ್ಷರಾದ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟದ ಕುಲುಮೆಗೆ ತಳ್ಳಿದೆ. ಇಡೀ ದೇಶದ ಸಂಪತ್ತನ್ನು ಅಂದಾನಿ, ಅಂಬಾನಿಯಂತಹ ಕಾರ್ಪೋರೇಟ್ ಉದ್ಯಮ ಶಕ್ತಿಗಳು ಕೊಳ್ಳೆ ಹೊಡೆಯುತ್ತಿವೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ಮಾರಾಟ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದರೂ ಆಡಳಿತಾರೂಢ ಸರಕಾರಗಳು ಜನರ ನೆರವಿಗೆ ಬರುತ್ತಿಲ್ಲ. ಸರಕಾರಗಳ ಜನವಿರೋಧಿ ಕ್ರಮಗಳನ್ನು ಬೀದಿಯಲ್ಲಿ ನಿಂತು ವಿರೋಧಿಸುವುದೇ ನಾವು ಹುತಾತ್ಮ ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡುವ ನಿಜವಾದ ಗೌರವ ಎಂದರು.

ಹೋರಾಟಗಾರದ ಬಸವರಾಜ ಎಕ್ಕಿ ಮಾತನಾಡಿದರು

ಈ ಸಂದರ್ಭದಲ್ಲಿ ಆರ್.ಎಚ್ ಕಲಮಂಗಿ, ಬಸವರಾಜ ಬೇಳಗುರ್ಕಿ ತಾಲೂಕು ಕಾರ್ಯದರ್ಶಿ ಸಿಪಿಐಎಂಎಲ್ ಲಿಬರೇಶನ್ ,ಶೇಕ್ಷಾವಲಿ ಕಾರ್ಯದರ್ಶಿ ,ನಾಗಪ್ಪ ಬಿಂಗಿ ಉಪಾಧ್ಯಕ್ಷರು, ಹನುಮಂತ ಬಾಲಿ, ಚಂದಾ ಹುಸೇನ್, ರಶೀದ್, ಶೌಕತ್ ಅಲಿ, ಶಿವರಾಜ್ , ಗೊವಿಂದ್ ಉಪ್ಪಾರ, ಶಿವು ಗಿರಿಜಾಲಿ, ಮಾಳಪ್ಪ, ಮಹಿಬೂಬ್,ಶಿವರಾಜ್, ಮುರುಗೇಶ್, ಶಿವು ಬಜೆಂತ್ರಿ, ವೆಂಕಟೇಶ್ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News