ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ | ರಾಯಚೂರು ಕಾಂಗ್ರೆಸ್ ಮುಖಂಡ ಬಶೀರುದ್ದೀನ್ ಅಮಾನತು
Update: 2024-05-04 16:32 GMT
ಬೆಂಗಳೂರು : ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಬಶೀರುದ್ದೀನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಡಾ.ಕೆ.ರಹ್ಮಾನ್ ಖಾನ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೇ?: ಅತೀ ಸೂಕ್ಷ್ಮವಾದ ವಿಷಯಗಳ ಬಗ್ಗೆ ಮಾತನಾಡಬಾರದೆಂದು ಕೆಪಿಸಿಸಿಯ ಸೂಚನೆಯ ನಡುವೆಯೂ ಚುನಾವಣೆ ಸಂದರ್ಭದಲ್ಲಿ ಪಕ್ಷ ಮತ್ತು ಪಕ್ಷದ ನಾಯಕರಿಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿರುವ ವಿಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತಮ್ಮ ಇಂತಹ ಅನಗತ್ಯ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು, ಈ ಕಾರಣಕ್ಕಾಗಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ ಎಂದು ರಹ್ಮಾನ್ ಖಾನ್ ಹೇಳಿದ್ದಾರೆ.
ತಾವು 7 ದಿನಗಳೊಳಗಾಗಿ ಈ ಹೇಳಿಕೆಗಳ ಬಗ್ಗೆ ತಮ್ಮ ವಿವರಣೆಯನ್ನು ಕೆಪಿಸಿಸಿಗೆ ಕಳುಹಿಸಿಕೊಡಬೇಕೆಂದು ಈ ಮೂಲಕ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರಹ್ಮಾನ್ ಖಾನ್ ತಿಳಿಸಿದ್ದಾರೆ.