ರಾಯಚೂರು | ಮಸೀದಿಯೊಳಗೆ ಮದ್ಯದ ಬಾಟಲಿ ಎಸೆದ ಪ್ರಕರಣ : 7 ಮಂದಿ ಬಂಧನ
Update: 2024-07-31 15:16 GMT
ರಾಯಚೂರು : ಇಲ್ಲಿನ ಸಿರವಾರ ಪಟ್ಟಣದ ಬಸ್ ನಿಲ್ದಾಣ ಹಿಂದಿರುವ ಮಸೀದಿಯೊಳಗೆ ಮದ್ಯದ ಬಾಟಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಸಿರವಾರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತ 7 ಮಂದಿ ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದು, ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಸೀದಿ ಒಳಗಡೆ ಯುವಕರು ಮದ್ಯ ಕುಡಿದ ಬಾಟಲಿಗಳನ್ನು ಎಸೆದಿರುವುದನ್ನು ಖಂಡಿಸಿ ಮುಸ್ಲಿಮ್ ಸಮುದಾಯದವರು ಜು.30ರ ಮಂಗಳವಾರ ರಾತ್ರಿ ಮುಖ್ಯರಸ್ತೆ ತಡೆದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಈ ವಿಷಯ ತಿಳಿದ ತಕ್ಷಣವೇ ಪ್ರತಿಭಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಎಎಸ್ಪಿ ಶಿವಕುಮಾರ, ಡಿವೈಎಸ್ಪಿ ಬಿಎಸ್ ತಳವಾರ, ಸಿಪಿಐ ಶಶಿಕಾಂತ, ಪಿಎಸ್‍ಐ ಗುರುಚಂದ್ರ ಯಾದವ್ ಭೇಟಿ ನೀಡಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದ್ದರು.