ರಾಯಚೂರು | ರಾಜ್ಯದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆ ನಿರ್ಬಂಧ ಸಡಿಲಗೊಳಿಸಲು ರೈತ ಸಂಘ ಒತ್ತಾಯ
ರಾಯಚೂರು : ಕರ್ನಾಟಕ ರಾಜ್ಯದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆ ನಿರ್ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ನಿತಿಶ್ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಭತ್ತದ ವ್ಯಾಪಾರಿಗಳು ತೆಲಂಗಾಣ ರಾಜ್ಯಕ್ಕೆ ಹೋಗುವಾಗ ಶಕ್ತಿನಗರ ಚೆಕ್ಪೋಸ್ಟ್ ನಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಜಲಾಲ್ಪೂರ ಚೆಕ್ ಪೋಸ್ಟ್ ನಲ್ಲಿ ಭತ್ತದ ಲಾರಿಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ ಎಂದು ದೂರಿದರು. ಈಗಾಗಲೇ ಎರಡು ದಿನಗಳ ಹಿಂದೆ ಸುಮಾರು 5ರಿಂದ 6ಲಾರಿಗಳನ್ನು ಕೃಷ್ಣ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ ಹಿನ್ನೆಲೆಯಲ್ಲಿ ರೈತರಿಗೆ ಭತ್ತದ ಸಾಗಾಣಿಕೆಗೆ ಸಮಸ್ಯೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಿಸಲು ಹಾಕಿರುವ ನಿರ್ಬಂಧನೆಯನ್ನು ತೆರವುಗೊಳಿಸಬೇಕು, ಈ ಬಗ್ಗೆ ವಿಳಂಬ ನೀತಿ ಅನುಸರಿಸಿದರೆ, ಕೃಷ್ಣ ಸೇತುವೆ ಮೇಲೆ ರಸ್ತೆ ತಡೆ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘದ ರಾಜ್ಯ ಗೌರಾಧ್ಯಕ್ಷ ಚಾಮರಸ ಮಾಲಿಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ, ಪದಾಧಿಕಾರಿಗಳಾದ ಮಲ್ಲಣ್ಣ ಗೌಡ, ಮಲ್ಲಿಕಾರ್ಜುನರಾವ್, ವ್ಯಾಪಾರಿ ವೆಂಕಟೇಶ ಉಪಸ್ಥಿತರಿದ್ದರು.