ರಾಯಚೂರು | ಸ್ಮಶಾನ ಭೂಮಿ ರಕ್ಷಣೆಗೆ ಜಿಲ್ಲಾಡಳಿತದಿಂದ ಕಾಂಪೌಂಡ್ ನಿರ್ಮಾಣ
ರಾಯಚೂರು : ನಗರದ ಚಂದ್ರಬಂಡಾ ರಸ್ತೆಯಿಂದ ಗದ್ವಾಲ್ ರಸ್ತೆಯ ಬಳಿ ಒತ್ತುವರಿಯಾಗಿ ನಂತರ ತೆರವಾಗಿದ್ದ ಕ್ವಾರಿ ಭೂಮಿಯನ್ನು ಸಂರಕ್ಷಣೆ ಮಾಡುವ ಹಿನ್ನೆಲೆ ಜಿಲ್ಲಾಡಳಿತದಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಡೆಯಿತು.
ಸಫಾಯಿ ಕರ್ಮಚಾರಿಗಳ ಜನಾಂಗಕ್ಕಾಗಿ ರುದ್ರಭೂಮಿ ನಿರ್ಮಾಣ ಮಾಡುವ ಸಲುವಾಗಿ ಕಾಯ್ದಿರಿಸಲಾಗಿದ್ದ 1.20 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಶೆಡ್ಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಇತ್ತೀಚೆಗೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿರುವ ಶೆಡ್ಗಳನ್ನು ತೆರವುಗೊಳಿಸಲಾಗಿತ್ತು.
ಮಂಗಳವಾರ ಕ್ಯಾಶುಟೆಕ್ ಸಂಸ್ಥೆಯಿಂದ ಸರ್ವೆ ನಂ.582ರ 102.24 ಎಕರೆಯಲ್ಲಿರುವ ಬೆಟ್ಟ, 1.20 ಎಕರೆಯಲ್ಲಿರುವ ಸಫಾಯಿ ಕರ್ಮಚಾರಿಗಳ ಜನಾಂಗದ ರುದ್ರಭುಮಿಗಾಗಿ ಕಾಯ್ದಿರಿಸಿದ್ದ ಜಮೀನು ಸೇರಿದಂತೆ ಇತರೆ ಜಮೀನುಗಳನ್ನು ರಕ್ಷಿಸಲು ಜಿಲ್ಲಾಡಳಿತ ಮುಂದಾಗಿದ್ದು, ಮೊದಲ ಹಂತದಲ್ಲಿ 160 ಮೀಟರ್ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಟ್ಟ ಸುತ್ತಲೂ ಇರುವ ಜಾಗವನ್ನು ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.