ರಾಯಚೂರು | ಮಹಾನಗರ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ : ಅಧ್ಯಕ್ಷೆ ನರಸಮ್ಮ ಮಾಡಗಿರಿ ಸೂಚನೆ

Update: 2025-01-08 14:12 GMT

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರವಾಸಿಗಳ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಬೇಕು. ನಗರದ ಸೌಂದರ್ಯೀಕರಣಕ್ಕೆ ಒತ್ತು ಕೊಡಬೇಕು ಎಂದು ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ರಾಯಚೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಜ.08ರಂದು ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಎಲ್ಲಾ ಕಡೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಗಟಾರುಗಳಲ್ಲಿ ಮತ್ತು ತಗ್ಗು ಗುಂಡಿಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಕಸವು ಎಲ್ಲೆಂದರಲ್ಲಿ ಹರಡದಂತೆ ವಾಹನಗಳ ಮೂಲಕ ನಿಯಮಿತವಾಗಿ ಸಾಗಣೆ ಮಾಡಬೇಕು. ಎಲ್ಲಾ ವಾರ್ಡ್ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಅತ್ಯುಪಯುಕ್ತವಾದ ಘನ ತ್ಯಾಜ್ಯ ವಿಲೇವಾರಿ ವಾಹನಗಳು ಮತ್ತು ಯಂತ್ರೋಪಕರಣಗಳ ದುರಸ್ತಿ ನಿರ್ವಹಣೆಯು ಅಚ್ಚುಕಟ್ಟಾಗಿ ಆಗಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪರಣೆ ನಿಯಮಿತವಾಗಿ ನಡೆಯಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರಾಯಚೂರು ಮಹಾನಗರ ಪಾಲಿಕೆಯ ಮೂಲ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲು ಜಿಪಿಎಸ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಸ್ಲಂ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಮತ್ತು ಅವರು ವಾಸಿಸುವ ಪ್ರದೇಶದಲ್ಲಿ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಕುರಿತು ಹಲವಾರು ವರ್ಷಗಳಿಂದ ಚರ್ಚಿಸುತ್ತಿದ್ದರೂ ಟೆಂಡರ್ ನಡೆಸದೇ ಇರಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಆದಾಯ ಬರುವುದನ್ನು ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಎನ್.ಶ್ರೀನಿವಾಸರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಅತಿ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸುವುದಾಗಿ ಪೌರಾಯುಕ್ತರು ಸಭೆಗೆ ಮಾಹಿತಿ ನೀಡಿದರು.

ತರಕಾರಿ ಮಾರುಕಟ್ಟೆ ಚರ್ಚೆ :

ರೇಡಿಯೋ ಸ್ಟೇಷನ್ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಯನ್ನು ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸುವ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದೆ. ರಾಯಚೂರು ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಹೀಗಾಗಿ ಎಲ್ಲ ಪ್ರದೇಶದ ಜನರಿಗೂ ಅನುಕೂಲವಾಗುವಂತೆ ನಗರದ ನಾಲ್ಕು ಕಡೆಗಳಲ್ಲಿ ತರಕಾರಿ ಮಾರುಕಟ್ಟೆಗಳನ್ನು ಪ್ರಾರಂಭಿಸಬೇಕು ಎಂದು ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಸಭೆಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಜೀದ್ ಸಮೀರ್, ಪಾಲಿಕೆಯ ಉಪ ಪೌರಾಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ ಸೇರಿದಂತೆ ಪಾಲಿಕೆಯ ಸದಸ್ಯರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News