ರಾಯಚೂರು | ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಿಂದ ಅಭಿಪ್ರಾಯ ಸಂಗ್ರಹ
ರಾಯಚೂರು : ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಹೊರಟಿದ್ದು, ಸ್ಲಂ ಜನಾಂದೋಲನಾ ಸಂಘಟನೆಗಳ ಮುಖಂಡರೊಂದಿಗೆ ಇಂದು ಅಧಿಕಾರಿಗಳು ಸಭೆ ನಡೆಸಿದರು.
ಬೆಂಗಳೂರಿನ ಸ್ಲಂ ಬೋರ್ಡ್ ಕಚೇರಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಡಾ.ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಯಚೂರು ಸ್ಲಂ ಕ್ರಿಯಾ ವೇದಿಕೆ, ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಮುಖಂಡರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಲ್ಲಿಸಿದ ಹಕ್ಕೊತ್ತಾಯಗಳು ಹಾಗು 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಅಭಿಪ್ರಾಯ ಸಂಗ್ರಹವನ್ನು ಮಾಡಲಾಯಿತು.
ಜುಲೈ 2025ಕ್ಕೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು 50 ವರ್ಷಗಳಾಗುತ್ತಿರುವುದರಿಂದ ಸ್ಲಂ ಕಾಯಿದೆ ತಿದ್ದುಪಡಿಯನ್ನು ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸ್ಲಂ ಜನಾಂದೋಲನ ಸಂಘಟನೆ ಮತ್ತು ತಜ್ಞರು ಒಳಗೊಂಡ ಸಮಿತಿಯನ್ನು ರಚಿಸಲಾಗುವುದೆಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಡಾ.ಅಶೋಕ್ ಹೇಳಿದರು.
ಸ್ಲಂ ನೀತಿ ಅನುಷ್ಠಾನ ಸಂಬಂಧ ಕ್ರಮ ತೆಗೆದುಕೊಂಡು ಜಿಲ್ಲಾಡಳಿತ ಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಬಜೆಟ್ ಸಂಬಂಧ ಮುಖ್ಯಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಸಲ್ಲಿಸಲಾಗುವುದು. ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಸ್ಲಂ ಜನಾಂದೋಲನ ಸಂಘಟನೆ ಸಲ್ಲಿಸಿರುವ ಅಭಿಪ್ರಾಯಗಳು ಉಪಯುಕ್ತವಾಗಿವೆ ಎಂದರು.
ಸಭೆಯಲ್ಲಿ ಮಂಡಳಿಯ ಮುಖ್ಯ ಇಂಜಿನಿಯರ್ ಸುಧೀರ್, ರಾಜ್ಯ ಸಂಚಾಲಕರುಗಳಾದ ಇಮ್ತಿಯಾಜ್ ಆರ್.ಮನವಿ, ಚಂದ್ರಮ್ಮ, ಜನಾರ್ಧನ್ ಹಳ್ಳಿಬೆಂಚಿ ಜಿಲ್ಲಾ ಸಂಚಾಲಕರಾದ ಹುಬ್ಬಳ್ಳಿಯ ಶೋಭಾ ಕಮತರ, ಕಲಬುರ್ಗಿಯ ರೇಣುಕಾ ಸರಡಗಿ, ವಿಜಯ್ ನಗರದ ವೆಂಕಮ್ಮ, ತುಮಕೂರು ಅರುಣ್, ಬಳ್ಳಾರಿ ಶೇಖರ್ ಬಾಬು, ದಾವಣಗೆರೆಯ ರೇಣುಕಾ ಯಲ್ಲಮ್ಮ, ಚಿತ್ರದುರ್ಗದ ಸುಧಾ, ಬೆಂಗಳೂರಿನ ಮಂಜುಬಾಯಿ, ಹನುಮಂತ ಕಟ್ಟಿಮನಿ ಭಾಗವಹಿಸಿದ್ದರು.