ರಾಯಚೂರು | ಸಂವಿಧಾನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ : ನ್ಯಾ.ಜನರಾಳಕರ್
ರಾಯಚೂರು : ಸಂವಿಧಾನದ ಆಶಯಗಳು ಸಂವಿಧಾನವನ್ನು ಜಾರಿಗೊಳಿಸುವವರ ಮೇಲೆ ಅದರ ಮಹತ್ವ ನಿರ್ಧಾರವಾಗುತ್ತದೆ. ಸಂವಿಧಾನ ಕಾಪಾಡುವುದು ಮತ್ತು ಅದರ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಾ.ಬಾಬಾ ಸಾಹೇಬ ಲಗಮಪ್ಪ ಜನರಾಳಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಸಂವಿಧಾನವು ಎಷ್ಟೇ ಬಲಿಷ್ಠವಾಗಿದ್ದರೂ ಅನುಷ್ಠಾನವು ಅನರ್ಹರ ವಶಕ್ಕೆ ಹೋದರೆ ಕೆಟ್ಟ ಸಂವಿಧಾನವಾಗುತ್ತದೆ. ಸಂವಿಧಾನ ಜಾರಿಗೊಳಿಸುವವರು ಸಾಮಾಜಿಕ ಕಾಳಜಿ ಹೊಂದಿದ್ದರೆ, ಅಪಕ್ವ ಸಂವಿಧಾನವು ಬಲಿಷ್ಠವಾಗಿ ಮಾರ್ಪಾಡು ಆಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆ ಉಲ್ಲೇಖಿಸಿದರು.
ಸಂವಿಧಾನದಲ್ಲಿ ನೀಡಿರುವ ಅವಕಾಶಗಳಿಂದಲೇ ದೇಶದ ಜನತೆಗೆ ಇಂದು ಉತ್ತಮರಾಗಿದ್ದಾರೆ. ನಮ್ಮದು ವಿಶ್ವಕ್ಕೆ ಮಾದರಿಯಾಗಿರುವ ಸರ್ವಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಎಲ್ಲದಕ್ಕೂ ಪರಿಹಾರ ಇದೆ. ಆದರೆ ಇಂದಿಗೂ ಕೂಡ ಸಾಮಾಜಿಕ ಅನಿಷ್ಠಗಳು ಮುಂದುವರಿದಿವೆ. ಅನ್ಯ ಜಾತಿಯವರು ಪರಸ್ಪರ ಪ್ರೀತಿಸಿ ಮದುವೆಯಾದರೂ ಮರ್ಯಾದೆ ಹತ್ಯೆ ಸೇರಿದಂತೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಇವು ಸಂವಿಧಾನದ ಆಶಯಕ್ಕೆ ವಿರುದ್ಧವಾದವು. ಸಂವಿಧಾನಕ್ಕೆ ದಕ್ಕೆ ಬಂದಾಗ ವಕೀಲರು ಸೇರಿದಂತೆ ಸಮಾಜದ ಎಲ್ಲಾ ಪ್ರಜ್ಞಾವಂತ ಸಮಾಜ ಧ್ವನಿ ಎತ್ತಬೇಕಿದೆ ಎಂದರು.
ಎರಡನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹತ್ತಿಕಾಳ್ ಪ್ರಭು ಸಿದ್ದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣರಾವ್, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಎಚ್.ಎ.ಸಾತ್ವಿಕ್, ಸುದೀನ್ ಕುಮಾರ್ ಡಿ.ಜೆ., ಶ್ವೇತಾ ಸಿಂಗ್, ಕೃಪಾ, ಅನಿಲ್ ಶೇಖಣ್ಣನವರ್, ಹುಲಗಪ್ಪ ಡಿ., ವಕೀಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರಾದ ನಾಗರಾಜ ಮಸ್ಕಿ, ಶ್ರೀಕಾಂತ್, ರಾಜಾಪಾಂಡು ರಂಗ ನಾಯಕ್, ಭಾನುರಾಜ್, ಎಚ್. ಜಗದೀಶ್, ಎನ್. ಶಿವಶಂಕರ್, ಅಂಬಾಪತಿ ಪಾಟೀಲ್, ಜಿ.ಎಸ್.ವೀರಭದ್ರಪ್ಪ, ಮುನ್ನಾಕುಮಾರ್, ಸುದರ್ಶನ್, ದೊಡ್ಡಪ್ಪ, ಗಿರಿಜಾ, ಈರಮ್ಮ, ಶಿವಕುಮಾರ ಮ್ಯಾಗಳಮನಿ ಸೇರಿದಂತೆ ವಕೀಲರು, ನ್ಯಾಯಲಯದ ಸಿಬ್ಬಂದಿ ಉಪಸ್ಥಿತರಿದ್ದರು.