ರಾಯಚೂರು | ಡಿ.18 ರಂದು ಕಾಂತರಾಜು ವರದಿ ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ : ಕೆ.ಶಾಂತಪ್ಪ

Update: 2024-12-16 11:07 GMT

ರಾಯಚೂರು : ಕಾಂತರಾಜು ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಡಿ.18 ರಂದು ಬೆಳಗಾವಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ತಿಳಿಸಿದ್ದಾರೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಆಶಯದಂತೆ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಘೋಷ ವಾಕ್ಯದಂತೆ ಅನುದಾನ ಹಂಚಿಕೆಯಾಗಬೇಕಾದರೆ ಕಾಂತರಾಜು ವರದಿ ಜಾರಿಯಾಗಲೇಬೇಕು. ಆದರೆ ಕಳೆದ ಎರೆಡು ವರ್ಷಗಳಿಂದ ರಾಜ್ಯ ಸರಕಾರ ಕೇವಲ ಭರವಸೆ ನೀಡಿ ಕಾಲಾಹರಣ ಮಾಡುತ್ತಿದೆ ಎಂದು ದೂರಿದರು.

ವಿಧಾನಸಭೆ ಚುನಾವಣೆಗೂ ಮುಂಚೆ ನೀಡಿದ ಭರವಸೆಯಂತೆ ಕಾಂತರಾಜು ವರದಿ ಜಾರಿಗೊಳಿಸಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್, ಬಿಜೆಪಿ ಸರಕಾರಗಳಲ್ಲಿ ಹಿಂದುಳಿದ ಜಾತಿಗಳಿಗೆ ಸಮುದಾಯ ಭವನ, ವಿದ್ಯಾರ್ಥಿನಿಲಯ ಕಟ್ಟಿಕೊಳ್ಳಲು ಅನುದಾನ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದು ಸುಮಾರು 2-ವರ್ಷಗಳು ಕಳೆದರೂ ಹಿಂದುಳಿದ ಜಾತಿಗಳ ಸಂಘ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿಲ್ಲ. ಹಿಂದುಳಿದ ಜಾತಿಗಳಿಗೆ ಸೇರಿದ ಅಭಿವೃದ್ಧಿ ನಿಗಮಗಳಿಗೂ ನಿರೀಕ್ಷೆಯಂತೆ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರಕಾರದಿಂದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದು ಅಹಿಂದ ಜನ ಕಾಂಗ್ರೆಸ್ ಪ್ರಕ್ಷಕ್ಕೆ ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್ ಕೊಟ್ಟ ಮಾತಿನಂತೆ, ಕಾಂತರಾಜು ವರದಿ ಬಹಿರಂಗಗೊಳಿಸಿ, ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಹಿಂದುಳಿದ ಜಾತಿಗಳಿಗೆ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದ ಜಾತಿಗಳ ಬೆಂಬಲ ಕಾಂಗ್ರೆಸ್ಗೆ ತಪ್ಪುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ ಯಾದವ್, ವಿಜಯ ಭಾಸ್ಕರ್ ಇಟಗಿ, ಜಿ.ಸುರೇಶ್, ಜಂಬಣ್ಣ ಯಾಕ್ಲಾಸಪುರ, ಉದಯ, ಈರಪ್ಪಗೌಡ, ಅಂಜಿನೇಯ್ಯ ಯಾದವ್, ಸುರೇಖಾ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News