ಕನ್ನಡ ಸಂಭ್ರಮ-50 | ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ : ಸಿದ್ದರಾಮಯ್ಯ ಕರೆ
ರಾಯಚೂರು : ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಎಲ್ಲ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ಧಾರಾಳತನ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಶನಿವಾರ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಂಭ್ರಮ 50ರ ಅಂಗವಾಗಿ ಆಯೋಜಿಸಿದ್ದ ‘ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ’ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ. ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು ಎಂದು ಅವರು ಹೇಳಿದರು.
ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ. ಕನ್ನಡ ಭಾಷಾ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಹೋರಾಟವಾದ ಗೋಕಾಕ್ ಚಳವಳಿಯ ವ್ಯಾಪಕತೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಪರಿಗಣಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಈ ಚಳವಳಿಯನ್ನು ಗೋಕಾಕ್ ಚಳವಳಿ ಎಂದು ಹೆಸರಿಸಿ ಸೀಮಿತವಾಗಿಸುವ ಬದಲು ಕನ್ನಡ ಭಾಷಾ ಚಳವಳಿ ಎಂದು ಮರುನಾಮಕರಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ಗೋಕಾಕ್ ಚಳವಳಿಯಲ್ಲಿ ತಾವು ಸಹ ಪರೋಕ್ಷವಾಗಿ ಭಾಗವಹಿಸಿದ್ದು, ಎಂದೆಂದಿಗೂ ತಮ್ಮ ಮನಸ್ಸು ಕನ್ನಡಕ್ಕಾಗಿ ಮಿಡಿದಿದೆ. ಏಕೀಕರಣದ ನಂತರ 1973ರ ನ.1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅಂದಿನ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷಗಳು ಸಂದಿವೆ ಎಂದು ಅವರು ತಿಳಿಸಿದರು.
ಇಂತಹ ಅಧುನಿಕ ಕಾಲಘಟ್ಟದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಚರ್ಚಿಸಿ ಮುಂದೆ ಯಾವ ರೀತಿಯ ಭಾಷಾ ಪರವಾದ ನಿಲುವುಗಳನ್ನು ತಳೆಯಬಹುದೆನ್ನುವ ಕುರಿತು ಆಲೋಚಿಸಲು ರಾಜ್ಯ ಸರಕಾರವು ಇಂತಹ ಮಹತ್ವದ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಚರ್ಚೆಗಳನ್ನು ನೀತಿ ನಿರೂಪಣೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇಂಗ್ಲಿಷ್ ಟೈಪ್ ರೈಟರ್ ಗಳನ್ನು ಕಿತ್ತುಕೊಂಡಿದ್ದೆ: 1983ರಲ್ಲಿ ನಾನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸೂಚನೆಯಂತೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸರಕಾರಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಆಂಗ್ಲ ಭಾಷೆಗೆ ಒಗ್ಗಿಕೊಂಡಿತ್ತು. ಹಲವಾರು ಕಚೇರಿಗಳಿಗೆ ಭೇಟಿ ನೀಡಿ ಸಿಬ್ಬಂದಿ ಬಳಸುತ್ತಿದ್ದ ಇಂಗ್ಲಿಷ್ ಟೈಪ್ ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಇಂದು ಕನ್ನಡದ ಸವಾಲುಗಳು ವ್ಯಾಪಕವಾಗಿವೆ. ಬಹಳ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಯನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಯಾವುದೇ ಮಾಧ್ಯಮದಲ್ಲಿಯೂ ಕನ್ನಡಕ್ಕೆ ಆಗ್ರ ಸ್ಥಾನವನ್ನು ಕಲ್ಪಿಸಬೇಕಾದ್ದು, ಸರಕಾರದ ಕರ್ತವ್ಯವಾಗಿದ್ದು, ಇದಕ್ಕೆ ನನ್ನ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಕನ್ನಡದಲ್ಲೆ ಸಹಿ: ಸರಕಾರದ ಯಾವುದೇ ಕಡತಗಳ ಟಿಪ್ಪಣಿಗಳಲ್ಲಿ ನಾನು ಯಾವಾಗಲೂ ಕನ್ನಡವನ್ನೇ ಬಳಸುತ್ತೇನೆ. ಪತ್ರಗಳ ಮೇಲೆ, ಟಿಪ್ಪಣಿಗಳ ಮೇಲೆ ನಾನು ಎಂದಿಗೂ ಕನ್ನಡ ಭಾಷೆಯಲ್ಲಿಯೇ ಸಹಿ ಮಾಡುತ್ತೇನೆ. ಕೇಂದ್ರ ಸರಕಾರದ ಪತ್ರ, ಪ್ರಸ್ತಾವನೆಗಳಲ್ಲಿ ಆಂಗ್ಲ ಭಾಷೆಯನ್ನು ಬಳಸುತ್ತೇನೆಯೇ ಹೊರತು ಬೇರೆ ಸಂದರ್ಭಗಳಲ್ಲಿ ಕನ್ನಡಕ್ಕೆ ಆದ್ಯತೆಯನ್ನು ನೀಡುತ್ತೇನೆ. ಅಧಿಕಾರಿಗಳು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಕರೆ ನೀಡಿದರು.
ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ: ವಿಧಾನಸೌಧದ ಆವರಣದಲ್ಲಿ ಇದೇ ನ.1 ರಂದು ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು. ಈ ಕಾರ್ಯವು ನಾಡಿನ ಜನರ ಕನ್ನಡಾಭಿಮಾನದ ಸಂಕೇತವಾಗಿ ಉಳಿಯಲಿದೆ. ಅನ್ಯರಾಜ್ಯಗಳ ಜನರಂತೆ ನಮಗೆ ಭಾಷೆಯ ಕುರಿತಾದ ದುರಾಭಿಮಾನದ ಅವಶ್ಯಕತೆ ಇಲ್ಲ. ಆದರೆ ಭಾಷಾಭಿಮಾನವನ್ನು ನಾವು ಹೊಂದದಿದ್ದಲ್ಲಿ ತಪ್ಪಾಗುತ್ತದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯರನ್ನು ಕನ್ನಡರಾಮಯ್ಯ ಎನ್ನಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ಬಂದಾಗಿನಿಂದಲೂ ಕನ್ನಡದ ಕುರಿತಂತೆ ವಿಶೇಷ ಕಾಳಜಿಯನ್ನು ತೋರಿದ್ದಾರೆ. ಸಿದ್ದರಾಮಯ್ಯರನ್ನು ಕನ್ನಡರಾಮಯ್ಯ ಎಂದು ಕರೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ವಿನೂತನ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ‘ಕರ್ನಾಟಕ ಸಂಭ್ರಮ 50’ ಶೀರ್ಷಿಕೆಯಡಿಯಲ್ಲಿ ರಾಜ್ಯಾದ್ಯಂತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮಾಜದಲ್ಲಿ ಧರ್ಮದ ವಿಷಬೀಜ ಬಿತ್ತುವ ಕೆಲಸಗಳು ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಭಾಷಾಭಿಮಾನದ ಕಾರ್ಯಕ್ರಮಗಳ ಮೂಲಕ ತಮ್ಮ ಸರಕಾರವು ಸಹನಶೀಲ ಸಮಾಜವನ್ನು ನಿರ್ಮಿಸುವಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ಚಳವಳಿಗಾರರನ್ನು, ಗೋಕಾಕ್ ಹೋರಾಟಗಾರರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಡಾ.ಶರಣ ಪ್ರಕಾಶ್ ಪಾಟೀಲ್, ಎನ್.ಎಸ್.ಭೋ ಸರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸೇರಿದಂತೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಕನ್ನಡ ಚಳವಳಿಗಾರರು, ಹೋರಾಟಗಾರರು, ಕನ್ನಡದ ಕಾರ್ಯಕರ್ತರು ಉಪಸ್ಥಿತರಿದ್ದರು.