ರಂಗ ರಸಾನುಭೂತಿ: ಎರಡು ನಾಟಕಗಳು

Update: 2024-12-19 06:47 GMT

ತಾ. 29-11-24 ಮತ್ತು 30-11-24ರಂದು ಹೈದರಾಬಾದಿನ ಕನ್ನಡ ನಾಟ್ಯ ರಂಗದ ಆಯೋಜನೆಯಲ್ಲಿ ಅವ್ವ ನನ್ನವ್ವ(ರಚನೆ, ನಿರ್ದೇಶನ, ವಿನ್ಯಾಸ ಸಂಗೀತ: ಗುರುರಾಜ್ ಮಾರ್ಪಳ್ಳಿ) ಮತ್ತು ಅಂಬೆ (ರಚನೆ: ಸರಜೂ ಕಾಟ್ಕರ್, ವಿನ್ಯಾಸ ಮತ್ತು ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ) ಪ್ರದರ್ಶನಗೊಂಡವು.

ಹೆಣ್ಣು-ಗಂಡು, ಭೂಮಿ-ಮಾನವರ ಸಂಬಂಧಗಳ ಮೇಲೆ ತಂತ್ರಜ್ಞಾನ ಮತ್ತು ಜಾಗತೀಕರಣದ ಪ್ರಭಾವವನ್ನು ತಾಯಿ-ಮಗಳ ಸಂಬಂಧದ ರಂಗರೂಪಕದ ಮೂಲಕ ಕಟ್ಟಿಕೊಟ್ಟ ‘ಅವ್ವ ನನ್ನವ್ವ’ದಲ್ಲಿ - ಅಮ್ಮ (ಸುಗಂಧಿ ಕಲ್ಮಾಡಿ) ಮತ್ತು ಮಗಳು(ವಾಣಿ ಸುಕುಮಾರ್)- ಎರಡೇ ಪಾತ್ರಗಳಲ್ಲಿ ಒಂದು ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದಲ್ಲದೇ ಕಣ್ಣಲ್ಲಿ ನೀರು ಒಸರುವಂತೆ ಮಾಡಿದ ‘ನಾಟ್ಕಾ ಮುದ್ರಾಡಿ’ಯವರ ರಂಗ ಪ್ರಯತ್ನ ಅತ್ಯಂತ ಪ್ರಶಂಸಾರ್ಹ.

ಮಹಾಭಾರತದ ಜನಜನಿತ ಅಂಬೆಯ ಬಂಡಾಯದ ಪ್ರಸಂಗ:

ಖಾಲಿ ರಂಗಸ್ಥಳದಲ್ಲಿ ಮೇಲೆ ಕೇಂದ್ರ ಸ್ಥಾನದಲ್ಲಿ ಕಟ್ಟಲ್ಪಟ್ಟ ಅಮಾನುಷ ಗಾತ್ರದ ಕೈ. ಐದು ಬೆರಳುಗಳಲ್ಲಿ ದಾರ/ಸೂತ್ರಗಳು- ಅವುಗಳಿಂದ ನಿಯಂತ್ರಿಸಲ್ಪಡುವ ಒಂದು ಹೆಣ್ಣು ಗೊಂಬೆ - ನಾಟಕದ ಮೊದಲ ದೃಶ್ಯ - ಇಡೀ ನಾಟಕದ ಆಶಯವನ್ನು ಒಂದೇ ಸಂಕೇತದಲ್ಲಿ ಹೇಳುವ, ನಿರ್ದೇಶಿಸುವ ಪ್ರಬಲ ರಂಗ ಪರಿಕರ. ಇಲ್ಲಿ ಹೆಣ್ಣು ಮಾತ್ರ ಪುರುಷಪ್ರಧಾನ ವ್ಯವಸ್ಥೆಯ ಕೈಗೊಂಬೆಯೇ? ಭೀಷ್ಮ, ಸಾಲ್ವ, ಕಾಶೀರಾಜರೂ ಪರಿಸ್ಥಿತಿ/ವಿಧಿ ಆಡಿಸುವ ತೊಗಲುಗೊಂಬೆಗಳೇ ಅಲ್ಲವೇ?

ಪೀಠಿಕೆಯಾಗಿ- ಹೆಣ್ಣು ಮಕ್ಕಳ ಮದುವೆಯ ಕುರಿತು ಸಂಭಾಷಣೆ ನಡೆಸುವ ಸೂತ್ರಧಾರಿ ದಂಪತಿ- ತಮ್ಮ ಲಘು ಹಾಸ್ಯದ ಮೂಲಕ ವರ್ತಮಾನದಿಂದ ಮಹಾಭಾರತದ ಸಂದರ್ಭಕ್ಕೆ ಪ್ರೇಕ್ಷಕರನ್ನು ಸಾಗಿಸುವ ಕೊಂಡಿಗಳು.

ಮತ್ತೆ ಬರುವರು- ರಂಗಸ್ಥಳವನ್ನೆಲ್ಲ ಆಕ್ರಮಿಸಿ ಬಿಡುವ ದೈತ್ಯ ಪ್ರತಿಭೆಯ ಅಂಬೆ ಪಾತ್ರಧಾರಿ (ವಾಣಿ ಸುಕುಮಾರ್). ಸಖಿಯೊಂದಿಗೆ ತನ್ನ ಅಳಲು -ತಂದೆ ಕಾಶಿ ರಾಜ ತನ್ನ ಹೆಣ್ಣು ಮಕ್ಕಳ ಸ್ವಯಂವರದ ಸಮಯದಲ್ಲಿ ಅವರಿಗಿಂತಲೂ ಚಿಕ್ಕವಳಾದ ನಾಗ ರಾಜಕುಮಾರಿಯನ್ನು ಸ್ವಯಂವರದಲ್ಲಿ ಗೆದ್ದು ಬರುವ ಸನ್ನಿವೇಶದ ವಿಪರ್ಯಾಸ...

ಸ್ವಯಂವರವೆಂದರೆ ಬೇಕಾದ ವರನನ್ನು ಆರಿಸುವುದಲ್ಲ, ಅದು ರಾಜಕುಮಾರಿಯರ ಹರಾಜು. ರಾಜಕೀಯ ಚದುರಂಗದಲ್ಲಿ ಅವರು ಬರಿಯ ದಾಳಗಳು ಎನ್ನುತ್ತ ಸ್ವಯಂವರದ ಬಗೆಗಿನ ರಮ್ಯ ಕಲ್ಪನೆಯನ್ನು ಹೊಡೆದೋಡಿಸುವ ಕಾಶಿ ರಾಜಕುಮಾರಿ.

ತಾಯಿಯ ಆಜ್ಞೆ ಪಾಲಿಸಲು ವಧುಗಳನ್ನು ಗೆಲ್ಲಲು ಬಂದಿರುವ ಭೀಷ್ಮನ ಪಾತ್ರದಲ್ಲಿ ರಂಗಸ್ಥಳವನ್ನು ತುಂಬಿ ಬಿಡುವ ಸುಕುಮಾರ್ ಮೋಹನ್‌ರ ಗಂಭೀರ ನಿಲುವು, ಕಂಠಸಿರಿ, ಅಚ್ಚುಕಟ್ಟಾಗಿ ಮೂಡಿದ ಸಾಲ್ವ(ಸಂದೇಶ್ ಕೋಟ್ಯಾನ್) ಮತ್ತು ಅಸಹಾಯಕ ತಂದೆ ಕಾಶಿರಾಜನ ಪಾತ್ರ (ಮಿಥುನ್ ಕುಮಾರ್ ಸೋನ)ಗಳು; ಅಬ್ಬರದ ವೇಷಭೂಷಣ ಮತ್ತು ಚಲನ ವಲನಗಳಲ್ಲಿ ಅಸಾಧ್ಯ ಲಾಘವದಿಂದ ಪ್ರೇಕ್ಷಕರ ಉಸಿರು ಒಮ್ಮೆ ಕಟ್ಟುವಂತೆ ಮಾಡಿದ ಪರಶುರಾಮ ಪಾತ್ರಧಾರಿ (ಪುಷ್ಪರಾಜ್ ಏನೇಕಲ್)

ಸತ್ಯವತಿ, ಸಖಿ- ಹೀಗೆ ಬೇರೆ ಬೇರೆ ಪಾತ್ರೆಗಳಲ್ಲಿ ಮಿಂಚಿದ ಸುಗಂಧಿ ಕಲ್ಮಾಡಿ ಮತ್ತು ಉಮೇಶ್ ಕಲ್ಮಾಡಿ

ಅತ್ಯುತ್ತಮ ಪಾತ್ರ ನಿರ್ವಹಣೆ, ಮಿತವಾದ ಆದರೆ ಅರ್ಥಪೂರ್ಣ ರಂಗಸಜ್ಜಿಕೆ ಮತ್ತು ಪ್ರಸಾದನ, ಸೂತ್ರದ ಗೊಂಬೆಗಳು, ಯಕ್ಷಗಾನದ ತೆರೆ, ಚಲನೆಗಳ ಸೀಮಿತ ಉಪಯೋಗ, ಒಮ್ಮೆಯೂ ತಡವರಿಸದ ಸಂಭಾಷಣೆ, ಪರಿಣಾಮಕಾರಿ ಹಿನ್ನೆಲೆ ಸಂಗೀತ .. ವಸ್ತ್ರ ವಿನ್ಯಾಸ- ಅಂಬೆ -ಬೂದಿ, ಕೆಂಪು ಬಣ್ಣದ ಬಟ್ಟೆಗಳೊಂದಿಗೆ ಆಡುವ ದೃಶ್ಯ - ಅವಳ ಚಿತೆಯ ಬೆಂಕಿ ಮತ್ತು ಬೂದಿ ಮಾತ್ರವಲ್ಲದೆ ಅವಳ ರೋಷ, ಅಸಹಾಯಕತೆ, ಸೇಡಿನ ಪರಿಣಾಮಗಳನ್ನು ಪ್ರತಿಬಿಂಬಿಸಿದ್ದು...

ಒಟ್ಟಿನಲ್ಲಿ ಒಂದೂವರೆ ಗಂಟೆ ದ್ವಾಪರ ಯುಗದಲ್ಲೇ ಇದ್ದಂತೆ ಭಾಸವಾಯಿತು. ಹಾಗೆಯೇ ಹೆಣ್ಣಿನ ಅಂತರಂಗಕ್ಕೂ, ಪ್ರೀತಿ, ದ್ವೇಷದ ತೀವ್ರ ಏರುಪೇರುಗಳಿಗೂ ಇಣುಕು ನೋಟ. ಒಬ್ಬ ಸ್ವಂತಿಕೆ ಇರುವ ಹೆಣ್ಣಿನ ನೋವು, ಚಡಪಡಿಕೆ, ಸೇಡಿನ ಸಂಕಲ್ಪ (ಇಲ್ಲಿ ಅಂಬಿಕೆ, ಅಂಬಾಲಿಕೆಯರನ್ನು ಮಾತ್ರ ಗೊಂಬೆಗಳನ್ನಾಗಿ ಮಾಡಿದ್ದು ಬಹಳ ಔಚಿತ್ಯ ಪೂರ್ಣ) ಎಲ್ಲವೂ- ಯುಗಗಳ ಹಿಂದಿನ ದಂತಕತೆ/ಚರಿತ್ರೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲೂ ಪ್ರಸ್ತುತವೆನಿಸುವಂತೆ ಮಾಡಿತು.

ಕೊನೆಯಲ್ಲಿ ರಂಗದ ಮೇಲಿನ ಕೈಯಿಂದ ತೂಗಾಡುತ್ತಿದ್ದ ಗೊಂಬೆ ದಾರ ಮುರಿದು ಕೆಳಗೆ ಬಿದ್ದಿದ್ದು ಅತ್ಯಂತ ಪ್ರಭಾವಶಾಲಿ ಸಂಕೇತವಾಗಿ ಮೂಡಿ - ಹೆಣ್ಣು ಅಬಲೆಯೆನ್ನುವ sಣeಡಿeo ಣಥಿಠಿe/ಮಾದರಿ ಮುರಿದು ಬಿದ್ದಿತು ಎನ್ನುವುದರ ಕಾವ್ಯಾತ್ಮಕ ರಂಗರೂಪಕವಾಗಿ- ವೀಕ್ಷಕರ ಮನಸ್ಸಿನಲ್ಲಿ ಪ್ರಶ್ನೆಯ ಅಲೆಗಳನ್ನು ಎಬ್ಬಿಸಿತು.

ಕೊನೆಗೂ ಅಂಬೆ ಗೆದ್ದಳೇ? ಅಥವಾ ವ್ಯವಸ್ಥೆಗೆ ಬಲಿಯಾದಳೇ? ತಾಯಿ ತಂದೆ ಗುರು ಸಮಾಜ - ಎಲ್ಲರೂ ಕೈ ಬಿಟ್ಟಾಗ ತನ್ನದೇ ದಾರಿಯಿಂದ, ಲಿಂಗಮಿತಿಯನ್ನೂ ಮೀರಿ ಸಶಕ್ತಳಾಗಿ ತನ್ನ ಗುರಿ ಸಾಧಿಸಿದಳೇ? ಸೇಡಿನ ಉರಿಯಲ್ಲಿ ತಾನೂ ಸುಟ್ಟು ಭಸ್ಮವಾದಳೆ?

ನಮ್ಮ ಉತ್ತರಗಳನ್ನು ನಾವೇ ಕಂಡುಕೊಳ್ಳಬೇಕು, ನಮ್ಮ ಸಾಧನೆಗೆ ನಾವೇ ಶ್ರಮಿಸಬೇಕು, ಸಿದ್ಧಿ ಪಡೆದುಕೊಳ್ಳಬೇಕು- ಹೆಣ್ಣೋ, ಗಂಡೋ, ತೃತೀಯ ಲಿಂಗಿಗಳೋ- ನಾವೇ ಸಬಲರಾಗಬೇಕು ಎನ್ನುವ ಸಂದೇಶ ತಲುಪಿತು.

ಇಂತಹ ಅಮೋಘ ಕತೆಗಳನ್ನು ತನ್ನಲ್ಲಿ ಹುದುಗಿಸಿ ಕೊಂಡಿರುವ ಮಹಾಭಾರತವನ್ನು ಇನ್ನೊಮ್ಮೆ ಓದಬೇಕು ಎನ್ನುವ ಆಸೆಯನ್ನು ಮೂಡಿಸಿತು.

ಮಹಾಭಾರತದ ಈ ಮನ ಕಲಕುವ ಕತೆಯನ್ನು ಅದ್ಭುತವಾಗಿ ಮತ್ತೆ ಕಟ್ಟಿಕೊಟ್ಟ ‘ನಾಟ್ಕಾ ಮುದ್ರಾಡಿ’ಯವರ ರಂಗ ದಿಗ್ವಿಜಯ ಅಭಿನಂದನಾರ್ಹ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಮತಿ ನಿರಂಜನ, ಹೈದರಾಬಾದ್

contributor

Similar News