ಕಾಶ್ಮೀರ: ಸೇನಾಧಿಕಾರಿಗಳೇ ಭಯ ಉತ್ಪಾದಕರಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಮ್ಮು -ಕಾಶ್ಮೀರದ ಕುಪ್ವಾರ ಪೊಲೀಸರು ಎರಡು ದಿನಗಳ ಹಿಂದೆ ಕಾರ್ಯಾಚರಣೆಯೊಂದರಲ್ಲಿ ಮಾದಕದ್ರವ್ಯ ಸಂಗ್ರಹ, ಮಾರಾಟಕ್ಕೆ ಸಂಬಂಧಿಸಿ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದರು. ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಮಾದಕ ದ್ರವ್ಯ ಆರೋಪಿಗಳ ಬೆಂಬಲಿಗರು ತಮ್ಮ ಗುಂಪಿನ ಜೊತೆಗೆ ಪೊಲೀಸ್ ಠಾಣೆಗೆೆ ನುಗ್ಗಿ ಪೊಲೀಸರಿಗೆ ಯದ್ವಾತದ್ವಾ ಥಳಿಸಿದ್ದಲ್ಲದೆ, ಆರೋಪಿಯನ್ನು ಬಿಡುಗಡೆ ಮಾಡಿ ಕೊಂಡೊಯ್ದರು. ಜೊತೆಗೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿರುವ ದುಷ್ಕರ್ಮಿಗಳು ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ. ಉಗ್ರರ ದಾಳಿಗೆ ಕುಖ್ಯಾತವಾಗಿರುವ ಕಾಶ್ಮೀರದಲ್ಲಿ ಈ ಘಟನೆ ಸಾಮಾನ್ಯ. ಇದರಲ್ಲೇನಿದೆ ವಿಶೇಷ? ಎಂದು ಈ ಘಟನೆಯನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ, ಇಲ್ಲಿ ಪೊಲೀಸ್ ಠಾಣೆಯ ಮೇಲೆ ಮಾರಕಾಸ್ತ್ರಗಳ ಜೊತೆಗೆ ದಾಳಿ ನಡೆಸಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವುದು ಸ್ವತಃ ಸೇನಾಧಿಕಾರಿಗಳೇ ಆಗಿದ್ದಾರೆ. ಭಯೋತ್ಪಾದನೆಯನ್ನು ದಮನಿಸಲೆಂದು ಕಾಶ್ಮೀರದಲ್ಲಿ ನೇಮಕವಾಗಿರುವ ಸೇನೆ ತನ್ನ ವಿಶೇಷಾಧಿಕಾರದ ಬಲದಿಂದ ಇತ್ತೀಚೆಗೆ ತಾನೇ ಭಯೋತ್ಪಾದನೆಗಾಗಿ ಸುದ್ದಿಯಾಗುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ.
ಡ್ರಗ್ಸ್ ಸಾಗಣೆಗೆ ಸಂಬಂಧಿಸಿ ಕುಪ್ವಾರ ಪೊಲೀಸರು ಇತ್ತೀಚೆಗೆ ಬಾಟ್‌ಪೋರಾದಲ್ಲಿರುವ ಸ್ಥಳೀಯ ಪ್ರಾದೇಶಿಕ ಸೇನಾಧಿಕಾರಿಯ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಓರ್ವನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು. ಇದು ಸೇನಾ ತಂಡವನ್ನು ಕೆರಳಿಸಿತ್ತು. ತಕ್ಷಣವೇ ಲೆಫ್ಟಿನೆಂಟ್ ಕರ್ನಲ್‌ಗಳಾದ ಅಂಕಿತ್ ಸೂದ್, ರಾಜೀವ್ ಚೌಹಾಣ್ ಹಾಗೂ ನಿಖಿಲ್ ನೇತೃತ್ವದ ಶಸ್ತ್ರಧಾರಿ ತಂಡ ಉಗ್ರ ಸ್ವರೂಪಿಗಳಾಗಿ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ತಂಡದಲ್ಲಿ ಸುಮಾರು 15ಕ್ಕೂ ಅಧಿಕ ಮಂದಿ ಸೇನಾ ಸಿಬ್ಬಂದಿಯಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿ ಅವರನ್ನು ಥಳಿಸಿ, ಸಿಬ್ಬಂದಿಯೊಬ್ಬನನ್ನು ಎಳೆದುಕೊಂಡು ಹೋಗಿದ್ದಾರೆ. ಸೇನಾ ಸಿಬ್ಬಂದಿಯ ಕೃತ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿವೆ. ಆರೋಪಿ ಸೇನಾಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಾದ 186 (ಪೊಲೀಸರ ಕಾರ್ಯನಿರ್ವಹಣೆಗೆ ಅಡ್ಡಿ), 332 (ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆ), 307 (ಕೊಲೆಯತ್ನ), 342 (ಅಪಹರಣ), 147 (ಗಲಭೆ ನಡೆಸಿರುವುದು)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಸೇರಿದಂತೆ ಒಟ್ಟು 16 ಸೇನಾ ಸಿಬ್ಬಂದಿ ಆರೋಪಿಗಳಾಗಿದ್ದಾರೆ. ಸೇನೆ ಮತ್ತು ಪೊಲೀಸರ ನಡುವಿನ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಸೇನಾ ಮುಖ್ಯಸ್ಥರು ಇದೀಗ ತಿಳಿಸಿದ್ದಾರೆ. ಬಹುಶಃ ಇಂತಹದೊಂದು ದಾಳಿ ಪೊಲೀಸರ ಮೇಲೆ ಸ್ಥಳೀಯ ನಾಗರಿಕರೆನಿಸಿಕೊಂಡವರು ನಡೆಸಿದ್ದರೆ ಅವರ ಸ್ಥಿತಿ ಏನಾಗಿರುತ್ತಿತ್ತು? ಒಂದೋ ಪೊಲೀಸರ ಗುಂಡಿಗೆ ಅಥವಾ ಎನ್‌ಕೌಂಟರ್‌ಗೆ ಬಲಿಯಾಗುತ್ತಿದ್ದರು. ಅಥವಾ ಅವರನ್ನು ಉಗ್ರರೆಂದು ಬಿಂಬಿಸಿ ಪೊಲೀಸರು ಬಂಧಿಸುತ್ತಿದ್ದರು. ವಿಚಾರಣೆಯ ಸಂದರ್ಭದಲ್ಲಿ ನಿಗೂಢವಾಗಿ ಲಾಕಪ್‌ಡೆತ್‌ಗೆ ಒಳಗಾಗುತ್ತಿದ್ದರು.
ಮುಖ್ಯವಾಗಿ, ಕಾಶ್ಮೀರವನ್ನು ಉಗ್ರವಾದಿಗಳಿಂದ, ಭಯೋತ್ಪಾದಕರಿಂದ ಮುಕ್ತಗೊಳಿಸುವುದಕ್ಕಾಗಿ ಸೇನೆಯನ್ನು ನಿಯುಕ್ತಿಗೊಳಿಸಲಾಗಿದೆ ಎನ್ನುವ ಕೇಂದ್ರ ಸರಕಾರದ ಹೇಳಿಕೆಯನ್ನು ಅಣಕ ಮಾಡುವಂತಿದೆ ಸೇನಾ ಸಿಬ್ಬಂದಿಯ ಕೃತ್ಯ. ಇಡೀ ಜಮ್ಮು -ಕಾಶ್ಮೀರ ಸೇನಾಧಿಕಾರಿಗಳ ಕೋವಿಯ ತುದಿಯಿಂದ ನಿಯಂತ್ರಿಸಲ್ಪಡುತ್ತಿದೆ. ಸೇನೆ ಉಗ್ರರನ್ನು ದಮನಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ, ಉಗ್ರರು ಸೇನಾ ಸಿಬ್ಬಂದಿಯ ಮೇಲೆ, ಪಂಡಿತರ ಮೇಲೆ ನಡೆಸುತ್ತಿರುವ ದಾಳಿಗಳು ನಿಂತಿಲ್ಲ. ವಿಚಾರಣೆಯ ಹೆಸರಿನಲ್ಲಿ ನಾಗರಿಕರ ಮೇಲೆ ಸೇನೆ ನಡೆಸುತ್ತಿರುವ ದೌರ್ಜನ್ಯಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಯಾಗುತ್ತಿವೆ. ಇದೇ ಹೊತ್ತಿಗೆ, ಸ್ವತಃ ಸೇನಾಧಿಕಾರಿಗಳೇ ಹೇಗೆ ಕಾಶ್ಮೀರದ ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತಿದ್ದಾರೆ ಎನ್ನುವುದನ್ನು ಕುಪ್ವಾರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಬಹಿರಂಗಪಡಿಸಿದೆ. ಮೊದಲನೆಯದಾಗಿ, ಸೇನಾ ಸಿಬ್ಬಂದಿಯೇ ಮಾದಕ ದ್ರವ್ಯ ಪ್ರಕರಣದಲ್ಲಿ ಶಾಮೀಲಾಗುತ್ತಿರುವುದು ಈ ಘಟನೆಯಿಂದ ಗೊತ್ತಾಗಿದೆ. ಇಂತಹ ಸಿಬ್ಬಂದಿ ಕಾಶ್ಮೀರದಲ್ಲಿ ಹೇಗೆ ಶಾಂತಿಯನ್ನು ಸ್ಥಾಪಿಸಬಲ್ಲರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಸೇನಾ ಸಿಬ್ಬಂದಿಯೊಬ್ಬ ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದಾಗ, ಆತನ ವಿಚಾರಣೆಗೆ ಸಹಕರಿಸುವುದು ಸೇನಾಧಿಕಾರಿಗಳ ಕರ್ತವ್ಯವಾಗಿತ್ತು. ಆದರೆ ಬಂಧಿಸಿದ ಪೊಲೀಸರ ಮೇಲೆಯೇ ಅವರು ದಾಳಿ ನಡೆಸಿದ್ದಾರೆ. ಸೇನಾ ಶಿಬಿರದ ಮೇಲೆ ದಾಳಿ ನಡೆಸುವ ಉಗ್ರವಾದಿಗಳಿಗೂ, ಮಾದಕ ದ್ರವ್ಯ ಆರೋಪಿಯ ಪರವಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸರ ಮೇಲೆ ಹಲ್ಲೆ ನಡೆಸುವ ಸೇನಾ ಸಿಬ್ಬಂದಿಯ ನಡುವೆ ವ್ಯತ್ಯಾಸವಾದರೂ ಏನು? ಕಾಶ್ಮೀರದ ಜನರೇ ಕೇಳುವಂತಾಗಿದೆ.
ಕಾಶ್ಮೀರದಲ್ಲಿ ಸೇನೆ ನಡೆಸುತ್ತಿರುವ ದೌರ್ಜನ್ಯಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇತ್ತೀಚೆಗೆ ಪೂಂಚ್ ರಜೌರಿಯಲ್ಲಿ 13 ಮಂದಿ ನಾಗರಿಕರನ್ನು ವಿಚಾರಣೆಯ ನೆಪದಲ್ಲಿ ಹೊತ್ತೊಯ್ದ ಸೇನೆ ಅವರಿಗೆ ಭಯಾನಕ ಚಿತ್ರಹಿಂಸೆಯನ್ನು ನೀಡಿತ್ತು. ಈ ದೌರ್ಜನ್ಯದಲ್ಲಿ ನಾಲ್ಕು ಮಂದಿ ಮೃತರಾಗಿದ್ದರು. ಆ ಬಳಿಕ ಮೃತರಿಗೆ ಉಗ್ರರ ಹಣೆ ಪಟ್ಟಿ ಕಟ್ಟಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿತು. ಆದರೆ ವೀಡಿಯೊವೊಂದರಲ್ಲಿ ಸೇನಾ ಸಿಬ್ಬಂದಿ ನಾಗರಿಕರನ್ನು ಥಳಿಸುತ್ತಿರುವ ದೃಶ್ಯ ದಾಖಲಾಗಿದ್ದು, ತನಿಖೆ ತಿರುವು ಪಡೆಯಲು ಕಾರಣವಾಯಿತು. ಸೇನೆಯ ನಕಲಿ ಎನ್‌ಕೌಂಟರ್‌ಗಳಿಗೆ ನಾಗರಿಕರು ಬಲಿಯಾಗುತ್ತಿರುವುದು ಕಾಶ್ಮೀರಕ್ಕೆ ಹೊಸತೇನೂ ಅಲ್ಲ. ಸರಕಾರದಿಂದ ಭಡ್ತಿ, ಪದಕಗಳನ್ನು ಪಡೆಯುವುದಕ್ಕಾಗಿ ಎನ್‌ಕೌಂಟರ್ ನಾಟಕ ಹೆಣೆದು ಅಮಾಯಕರನ್ನು ಉಗ್ರರೆಂದು ಬಿಂಬಿಸಿ ಕೊಂದು ಹಾಕಿದ ಪ್ರಕರಣಗಳೂ ಬೆಳಕಿ ಬಂದಿವೆ. ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಸೇನಾ ದೌರ್ಜನ್ಯಗಳು ಪರೋಕ್ಷವಾಗಿ ಉಗ್ರವಾದಿಗಳಿಗೆ ನೆರವಾಗುತ್ತಿವೆ. ಈ ಬಗ್ಗೆ ಹಲವು ರಾಜಕೀಯ ನಾಯಕರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಸೇನೆಯ ಮೂಲಕ ಕಾಶ್ಮೀರದಲ್ಲಿ ಶಾಂತಿಯನ್ನು ಸ್ಥಾಪಿಸಲು ಹೊರಟ ಸರಕಾರಕ್ಕೆ ಸೇನೆಯೇ ಕಾಶ್ಮೀರದ ಅಶಾಂತಿಗೆ ಕಾರಣವಾಗುತ್ತಿರುವುದು ಇನ್ನಾದರೂ ಅರಿವಿಗೆ ಬರಬೇಕು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನಗಳು ಹೆಚ್ಚುತ್ತಿವೆ ಎಂದು ಅಂತರ್‌ರಾಷ್ಟ್ರೀಯ ಸಂಘಟನೆಗಳು ತಮ್ಮ ವರದಿಗಳಲ್ಲಿ ತಿಳಿಸಿವೆ. ಜನಸಾಮಾನ್ಯರು ಸೇನೆಯ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದರೆ ಅವರನ್ನು ಪ್ರತ್ಯೇಕತಾವಾದಿಗಳು, ಉಗ್ರವಾದಿಗಳು ಎಂದು ಬಿಂಬಿಸಲಾಗುತ್ತದೆ. ಇದೀಗ ನೋಡಿದರೆ, ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಯನ್ನು ನೆಲೆಗೊಳಿಸಬೇಕಾಗಿದ್ದ ಸೇನಾ ಸಿಬ್ಬಂದಿಯೇ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗಿ ಸುದ್ದಿಯಾಗುತ್ತಿದ್ದಾರೆ. ಕಾಶ್ಮೀರದ ಪೊಲೀಸ್ ಠಾಣೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಒಂದು ಕಡೆಯಿಂದ ಉಗ್ರರ ಬೆದರಿಕೆಯನ್ನು ಎದುರಿಸುತ್ತಿದ್ದರೆ, ಇನ್ನೊಂದು ದಿಕ್ಕಿನಿಂದ ಸೇನಾ ಬೆದರಿಕೆಯನ್ನು ಕೂಡ ಎದುರಿಸಬೇಕಾಗಿದೆ. ಯಾರು ಭಯೋತ್ಪಾದಕರು, ಯಾರು ನಾಗರಿಕರು? ಯಾರೂ ಕಾನೂನು ಸುವ್ಯವಸ್ಥೆಯ ಪಾಲಕರು ಎನ್ನುವುದೇ ಕಾಶ್ಮೀರದಲ್ಲಿ ಗೊಂದಲದಲ್ಲಿದೆ. ಅಲ್ಲಿನ ಪೊಲೀಸರ ಸ್ಥಿತಿಯೇ ಈ ರೀತಿ ಇರಬೇಕಾದರೆ, ನಾಗರಿಕರ ಸ್ಥಿತಿ ಇನ್ನೇನಾಗಬೇಕು? ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಉಗ್ರರ ನಿರ್ನಾಮವಾಗಿದೆ ಎಂದು ಹೇಳುತ್ತಿರುವ ಕೇಂದ್ರ ಸರಕಾರ, ಕಾಶ್ಮೀರದ ಕುಪ್ವಾರ ಪೊಲೀಸ್ ಠಾಣೆಯ ಮೇಲೆ ನಡೆದ ಉಗ್ರ ದಾಳಿಯ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆಯನ್ನು ನೀಡಬೇಕಾಗಿದೆ. ಭಯೋತ್ಪಾದನೆಯನ್ನು ದಮನ ಮಾಡಬೇಕಾದವರೇ ಭಯೋತ್ಪಾದಕರಾಗಿ ಗುರುತಿಸಲ್ಪಡುತ್ತಿರುವುದು ಕಾಶ್ಮೀರದ ಪಾಲಿಗೆ ಮಾತ್ರವಲ್ಲ, ದೇಶದ ಪಾಲಿಗೂ ಆತಂಕಕಾರಿ ವಿಷಯವಾಗಿದೆ.