ಕುಂಭಮೇಳ: ಪ್ರಶ್ನೆಗಳಿಗೆ ನುಣುಚಿಕೊಂಡ ಪ್ರಧಾನಿ

Update: 2025-03-20 08:58 IST
ಕುಂಭಮೇಳ: ಪ್ರಶ್ನೆಗಳಿಗೆ ನುಣುಚಿಕೊಂಡ ಪ್ರಧಾನಿ
  • whatsapp icon

ಕುಂಭಮೇಳ ಮುಗಿದು ಎರಡು ವಾರಗಳು ಕಳೆದಿವೆೆಯಾದರೂ, ಗಂಗೆಯಲ್ಲಿ ತೇಲುತ್ತಿರುವ ಪ್ರಶ್ನೆಗಳಿಗೆ ಇನ್ನೂ ಮೋಕ್ಷ ಸಿಕ್ಕಿಲ್ಲ. ಮಂಗಳವಾರ ಸಂಸತ್‌ನಲ್ಲಿ ಪ್ರಧಾನಿ ಮೋದಿಯವರು ಕುಂಭಮೇಳದ ಕುರಿತಂತೆ ನೀಡಿದ ಹೇಳಿಕೆಯಲ್ಲಿ, ಈ ಪ್ರಶ್ನೆಗಳಿಗೆಲ್ಲ ಮುಕ್ತಿ ಸಿಗಬಹುದು ಎಂದು ಜನರು ಭಾವಿಸಿದ್ದರು. ಪ್ರಧಾನಿ ತನ್ನ 13 ನಿಮಿಷಗಳ ಭಾಷಣದಲ್ಲಿ, ಕುಂಭಮೇಳವನ್ನು, ಸ್ವದೇಶಿ ಚಳವಳಿ, ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣ, 1857ರ ಸ್ವಾತಂತ್ರ್ಯ ಸಂಗ್ರಾಮ, ಭಗತ್ ಸಿಂಗ್ ಪ್ರಾಣತ್ಯಾಗ, ಸುಭಾಶ್‌ಚಂದ್ರ ಬೋಸ್ ಅವರ ದಿಲ್ಲಿ ಚಲೋ, ಮಹಾತ್ಮ್ಮಾಗಾಂಧಿಯವರ ದಂಡಿ ಮೆರವಣಿಗೆಯ ಜೊತೆಗೆ ಸಮೀಕರಿಸಿ ಮಾತನಾಡಿದರು. ಕುಂಭಮೇಳವು ಜಾಗೃತ ರಾಷ್ಟ್ರವೊಂದರ ಚೈತನ್ಯವನ್ನು ಪ್ರತಿಬಿಂಬಿಸುವ ಮೈಲಿಗಲ್ಲು ಎಂದು ಅವರು ಬಣ್ಣಿಸಿದರು. ಪ್ರಯಾಗರಾಜ್ ಸಂಗಮವು ‘ಏಕ ಭಾರತ-ಶ್ರೇಷ್ಠ ಭಾರತ ’ಎಂಬ ನೋಟವನ್ನು ಮುಂದಿಟ್ಟಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ, ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ ಒಂದು ಹನಿ ಕಣ್ಣೀರನ್ನು ಸುರಿಸುವ ಕೃಪೆಯನ್ನು ಅವರು ತೋರಲಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ಕೇಳಲು ಮುಂದಾದ ವಿರೋಧ ಪಕ್ಷಗಳ ನಾಯಕರ ಮಾತುಗಳಿಗೆ ಸಂಸತ್‌ನಲ್ಲಿ ನಿರ್ಬಂಧವನ್ನು ವಿಧಿಸಲಾಯಿತು.

ಪ್ರಯಾಗರಾಜ್ ಕುಂಭಮೇಳದ ಕುರಿತಂತೆ ಪ್ರಧಾನಿ ಮೋದಿಯ ಹೇಳಿಕೆಯನ್ನು ಗಮನಿಸಿದವರಿಗೆ ಒಂದು ಸ್ಪಷ್ಟವಾಗಿ ಬಿಡುತ್ತದೆ. ಪ್ರಧಾನಿಯವರಿಗೆ ಒಂದೋ ಈ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತಂತೆ ಅಜ್ಞಾನವಿದೆ. ಆ ಕಾರಣದಿಂದಾಗಿ ಅವರು ಆ ಹೋರಾಟ, ತ್ಯಾಗ, ಬಲಿದಾನಗಳನ್ನು ಕುಂಭಮೇಳದ ಜೊತೆಗೆ ಸಮೀಕರಿಸಲು ಮುಂದಾದರು. ಎತ್ತಣ ಸ್ವಾತಂತ್ರ್ಯ ಸಂಗ್ರಾಮ? ಎತ್ತಣ ಕುಂಭಮೇಳ? ತಮ್ಮ ಮನೆ ಮಠಗಳನ್ನು ತೊರೆದು ದೇಶಕ್ಕಾಗಿ ಬೀದಿಗಿಳಿದು ಬ್ರಿಟಿಷರಿಂದ ಲಾಠಿಯೇಟು ತಿಂದು, ಪ್ರಾಣ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೂ, ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಸಾಧುಗಳಿಗೂ ಏನು ಸಂಬಂಧ? ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಗುಂಡೇಟಿಗೆ ಪ್ರಾಣತೊರೆದ ಹುತಾತ್ಮರ ಜೊತೆಗೆ, ಸರಕಾರದ ಬೇಜವಾಬ್ದಾರಿಯಿಂದ ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣತೆತ್ತ ಅಮಾಯಕರನ್ನು ಹೋಲಿಸುವುದು ಎಷ್ಟು ಸರಿ? ಎಂದು ಜನತೆ ದೇಶದ ಪ್ರಧಾನಿಯನ್ನು ಕೇಳುತ್ತಿದ್ದಾರೆ.

ಕುಂಭಮೇಳದಲ್ಲಿ ಜಗತ್ತು ‘ಜಾಗೃತ ಭಾರತ’ವನ್ನು ನೋಡಲಿಲ್ಲ. ಬದಲಿಗೆ ವಿಸ್ಮತಿಗೆ ತಳ್ಳಲ್ಪಟ್ಟು, ಗಂಗಾನದಿಯನ್ನು ಮಾಲಿನ್ಯಕ್ಕೆ ತಳ್ಳಿದ ಅಜಾಗೃತ ಭಾರತವನ್ನು ಬೆಕ್ಕಸ ಬೆರಗಾಗಿ ನೋಡಿತು. ಪ್ರಯಾಗರಾಜ್‌ನ ಗಂಗಾನದಿಯು ಭಾರೀ ಪ್ರಮಾಣದ ಮಲದ ಅಂಶಗಳಿಂದ ಕಲುಷಿತಗೊಂಡಿದೆ ಮತ್ತು ಅದು ಸ್ನಾನಕ್ಕೆ ಮತ್ತು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿಯು ಕೂಡ ಸರಕಾರವನ್ನಾಗಲಿ, ಪ್ರಯಾಗ್‌ರಾಜ್‌ನಲ್ಲಿ ಸೇರಿದ ಭಕ್ತರನ್ನಾಗಲಿ ಜಾಗೃತಗೊಳಿಸಲಿಲ್ಲ. ಉತ್ತರ ಪ್ರದೇಶ ಸರಕಾರ ಈ ಅಂಶವನ್ನು ಭಕ್ತರಿಂದ ಮುಚ್ಚಿಟ್ಟು ಅವರನ್ನು ಗಂಗಾ ಸ್ನಾನಕ್ಕೆ ಪ್ರೇರೇಪಿಸಿತು. ವರದಿ ಬಹಿರಂಗವಾದಾಗಲೂ ತನ್ನ ತಪ್ಪು ತಿದ್ದಿಕೊಳ್ಳದ ಸರಕಾರ, ವರದಿಯನ್ನು ನೀಡಿದ ಮಂಡಳಿಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿತು. ‘‘ಕೆಲವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ’’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಹೇಳಿಕೆ ನೀಡಿದರು. ಗಂಗಾನದಿಯ ಶುಚೀಕರಣಕ್ಕಾಗಿ ಸರಕಾರ 30,000 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಪ್ರಧಾನಿ ಮೋದಿಯವರು ಗಂಗಾನದಿಯ ಸ್ಥಿತಿಗತಿಯ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿತ್ತು. ಆದರೆ ಈ ಬಗ್ಗೆ ಅವರು ಯಾವ ಹೇಳಿಕೆಯನ್ನೂ ನೀಡಲಿಲ್ಲ. ಕೇಂದ್ರ ಸರಕಾರದ ವ್ಯಾಪ್ತಿಯೊಳಗೆ ಬರುವ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿ ಸತ್ಯವೋ, ಸುಳ್ಳೋ ಎನ್ನುವ ಗೊಂದಲವನ್ನು ಅವರು ನಿವಾರಿಸಿಲ್ಲ. ಮಹಾತ್ಮ್ಮಾಗಾಂಧೀಜಿಯವರ ದಂಡಿಯಾತ್ರೆಗೆ ಕುಂಭಮೇಳವನ್ನು ಮೋದಿ ಹೋಲಿಸಿದ್ದಾರೆ. ಆದರೆ, ಮಾಲಿನ್ಯಗೊಂಡ ಗಂಗಾನದಿಯನ್ನು ನೋಡಿದ್ದಿದ್ದರೆ ಮಹಾತ್ಮಗಾಂಧಿಯ ಪ್ರತಿಕ್ರಿಯೆ ಏನಿರಬಹುದಿತ್ತು ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಒಂದು ವೇಳೆ ಮಹಾತ್ಮ್ಮಾಗಾಂಧೀಜಿ ಬದುಕಿದ್ದಿದ್ದರೆ ಕಲುಷಿತಗೊಂಡ ಗಂಗಾನದಿಗಾಗಿ ಅವರು ಹೊಸದಾಗಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತಿದ್ದರು. ಗಾಂಧೀಜಿಯವರು ಭಾರತದ ಪುಣ್ಯ ಕ್ಷೇತ್ರಗಳ ಸ್ಥಿತಿಯನ್ನು ನೋಡಿ ‘‘ಇನ್ನೆಂದಿಗೂ ಈ ಕಲುಷಿತ ಪ್ರದೇಶಗಳಿಗೆ ಕಾಲಿಡುವುದಿಲ್ಲ’’ ಎಂದು ಪ್ರತಿಜ್ಞೆ ಮಾಡಿದ್ದರು. ಅವರು ಭಾಗವಹಿಸಿದ ಮೊದಲ ಕಾಂಗ್ರೆಸ್ ಸಮ್ಮೇಳನದಲ್ಲಿ, ಅಲ್ಲಿನ ಶೌಚಾಲಯಗಳ ಸ್ಥಿತಿಗತಿಯನ್ನು ನೋಡಿ ತಾವೇ ಶುಚಿಗೊಳಿಸಲು ಮುಂದಾಗಿದ್ದರು. ಕುಂಭಮೇಳದಲ್ಲಿ ಶೌಚ ವ್ಯವಸ್ಥೆ ಅದೆಷ್ಟು ಅವ್ಯವಸ್ಥೆಯಿಂದ ಕೂಡಿತ್ತು ಎನ್ನುವುದನ್ನು ಅದರಲ್ಲಿ ಭಾಗವಹಿಸಿರುವ ಹಿರಿಯ ಸಾಧುಗಳೇ ಅಸಮಾಧಾನ ಹಂಚಿಕೊಂಡಿದ್ದರು. ಅಲ್ಲಿನ ಪರಿಸರ ಮಾಲಿನ್ಯದಿಂದ ನಾಶವಾಗುತ್ತಿರುವ ನವಭಾರತವನ್ನು ಜಗತ್ತಿನ ಮುಂದಿಟ್ಟಿತು.

ವಿಶ್ವಕ್ಕೆ ಭಾರತೀಯತೆಯ, ಹಿಂದೂಧರ್ಮದ ಹಿರಿಮೆಯನ್ನು ಸಾರಿದವರು ಸ್ವಾಮಿ ವಿವೇಕಾನಂದರು. ಇದೇ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಪುರೋಹಿತರು ನಡೆಸುವ ಮೋಸ, ಶೋಷಣೆಯನ್ನು ಅಷ್ಟೇ ತೀವ್ರವಾಗಿ ಖಂಡಿಸಿದ್ದರು. ನಮ್ಮ ಪರಿಸರವನ್ನು, ನದಿಗಳನ್ನು ಕೆಡಿಸುವ ಮೂಲಕ ಪರೋಕ್ಷವಾಗಿ ಹಿಂದೂ ಧರ್ಮಕ್ಕೆ ದ್ರೋಹ ಬಗೆಯುತ್ತಿದ್ದೇವೆ ಎನ್ನುವ ಸತ್ಯವನ್ನು ಅವರು ಆ ಕಾಲದಲ್ಲೇ ದೊಡ್ಡ ಧ್ವನಿಯಲ್ಲಿ ಹೇಳಿದ್ದರು. ಇದೀಗ ಪ್ರಧಾನಿ ಮೋದಿಯವರು ಕುಂಭಮೇಳವನ್ನು ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣಕ್ಕೆ ಹೋಲಿಸಿದ್ದಾರೆ. ಕುಂಭಮೇಳದಲ್ಲಿ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಅಣಕಿಸಲಾಯಿತು. ಹಾಗೆಯೇ ‘ಏಕ ಭಾರತ’ವನ್ನು ಕುಂಭಮೇಳ ಪ್ರತಿನಿಧಿಸಿತು ಎಂದು ಮೋದಿಯವರು ಹೇಳಿದ್ದಾರೆ. ಕುಂಭಮೇಳದಲ್ಲಿ ಜನಸಾಮಾನ್ಯರಿಗೊಂದು ವ್ಯವಸ್ಥೆ, ವಿಐಪಿಗಳಿಗೆ ಇನ್ನೊಂದು ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸನ್ಯಾಸಿಯೊಬ್ಬರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವ್ಯವಸ್ಥೆಯೇ ಅಂತಿಮವಾಗಿ ಕಾಲ್ತುಳಿತದಂತಹ ದುರಂತಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗುತ್ತಿದೆ. ಸ್ನಾನಕ್ಕೆ ಅಂಬಾನಿಗಳಿಗೊಂದು ವ್ಯವಸ್ಥೆ, ಶ್ರೀಸಾಮಾನ್ಯನಿಗೆ ಇನ್ನೊಂದು ವ್ಯವಸ್ಥೆ ಮಾಡುವುದು ‘ಏಕ ಭಾರತ’ದ ಲಕ್ಷಣವೆ? ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ.

ಅಂತಿಮವಾಗಿ ಪ್ರಧಾನಿಯವರು ಕಾಲ್ತುಳಿತದಲ್ಲಿ ಎಷ್ಟು ಮಂದಿ ಮೃತರಾಗಿದ್ದಾರೆ ಮತ್ತು ಅವರಿಗೆ ಎಷ್ಟು ಪರಿಹಾರವನ್ನು ವಿತರಿಸಲಾಗಿದೆ ಎನ್ನುವುದನ್ನು ಸಂಸತ್‌ನಲ್ಲಿ ಬಹಿರಂಗಪಡಿಸಬೇಕಾಗಿತ್ತು. ‘ಕುಂಭಮೇಳ’ ಜಾಗೃತ ರಾಷ್ಟ್ರದ ಸಂಕೇತ ಎಂದು ಬಣ್ಣಿಸಿದ ಪ್ರಧಾನಿ ಮೋದಿಯವರು ಮೃತರ ಅಂಕಿ ಸಂಖ್ಯೆ ಬಹಿರಂಗಪಡಿಸಿ ಎಂದು ಒತ್ತಾಯಿಸಿದಾಗ ‘‘ಅದು ನನಗೆ ಸಂಬಂಧಿಸಿದ್ದಲ್ಲ. ಉತ್ತರ ಪ್ರದೇಶ ಸರಕಾರಕ್ಕೆ ಸಂಬಂಧಪಟ್ಟದ್ದು’’ ಎಂದು ಹೆಗಲು ಜಾರಿಸಿಕೊಂಡಿದ್ದಾರೆ. ಕುಂಭಮೇಳದಲ್ಲಿ ಸುಮಾರು 900 ಯಾತ್ರಿಗಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಇವರೆಲ್ಲ ಏನಾದರು? ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ಸ್ವಾತಂತ್ರ್ಯಹೋರಾಟಗಾರರ ಲೆಕ್ಕವನ್ನು ಅಂದಿನ ಬ್ರಿಟಿಷರು ನೀಡಿತ್ತು. ದೇಶವನ್ನು ಜಾಗೃತಗೊಳಿಸುವ ಮಹಾನ್ ಕಾರ್ಯದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ತನ್ನದೇ ದೇಶದ ಅಮಾಯಕ ಭಕ್ತಾದಿಗಳ ಅಂಕಿಸಂಖ್ಯೆಗಳನ್ನು ಬಹಿರಂಗಪಡಿಸಲು ಕೇಂದ್ರ ಸರಕಾರಕ್ಕೆ ಇರುವ ಅಡ್ಡಿಯೇನು? ಜನರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕಾದರೆ ಇನ್ನೊಂದು ‘ದಂಡಿ ಯಾತ್ರೆ’ ನಡೆಯಬೇಕೇ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News