ನ್ಯಾಯ ವ್ಯವಸ್ಥೆಗೆ ಕಳಂಕ ತರುತ್ತಿರುವ ನಿವೃತ್ತರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಉಂಡ ತಟ್ಟೆಗೆ ಉಗಿಯುವ’ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಗಾದೆಯೊಂದು ರೂಢಿಯಲ್ಲಿದೆ. ಕೃತಘ್ನರಿಗಾಗಿ ಈ ಗಾದೆಯನ್ನು ಬಳಸಲಾಗುತ್ತದೆ. ರಾಜಕೀಯ ಪಕ್ಷಗಳಲ್ಲಿ ಇಂತಹ ಕೃತಘ್ನರ ಸಂಖ್ಯೆ ಹೆಚ್ಚುತ್ತಿವೆ. ಇಂದು ಕಾಂಗ್ರೆಸ್ ಪಕ್ಷ ಈ ಸ್ಥಿತಿಗೆ ಬಂದು ತಲುಪುವಲ್ಲಿ ಇಂತಹ ಕೃತಘ್ನರ ಪಾತ್ರ ಬಹುದೊಡ್ಡದು. ಒಂದು ಕಾಲದಲ್ಲಿ ಜಾತ್ಯತೀತ ಸಿದ್ಧಾಂತದ ಬಗ್ಗೆ ಭಾಷಣಗಳನ್ನು ಬಿಗಿಯುತ್ತಾ ಕಾಂಗ್ರೆಸ್‌ನಲ್ಲಿ ಅತ್ಯುನ್ನತ ಸ್ಥಾನಗಳನ್ನು ಗಿಟ್ಟಿಸಿಕೊಂಡವರು, ವೃದ್ಧಾಪ್ಯ ಕಾಲದಲ್ಲಿ ‘ಕಾಂಗ್ರೆಸ್ ನನಗೆ ವಂಚಿಸಿತು’ ಎಂದು ಹೇಳುತ್ತಾ ಬಿಜೆಪಿಗೆ ಸೇರ್ಪಡೆಗೊಂಡ ಹಲವು ನಾಯಕರನ್ನು ದೇಶ ಕಂಡಿದೆ. ಗುಲಾಂ ನಬಿ ಆಝಾದ್, ಎಸ್. ಎಂ. ಕೃಷ್ಣರಂತಹ ನಾಯಕರು ಕಾಂಗ್ರೆಸ್ ಪಕ್ಷವೆನ್ನುವ ಬಾಳೆ ಎಳೆಯಲ್ಲಿ ಮೃಷ್ಟಾನ್ನ ಭೋಜನವುಂಡು ಬಳಿಕ ಅದನ್ನು ಕಸದತೊಟ್ಟಿಗೆ ಎಸೆದು, ಅದರ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಾ ಹೋದರು. ಸಾಧಾರಣವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ನಾಯಕರು ತಮ್ಮ ಸಿದ್ಧಾಂತದೊಂದಿಗೆ ಪೂರ್ಣ ಪ್ರಮಾಣದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆಳದಲ್ಲಿ ತಮ್ಮನ್ನು ಬೆಳೆಸಿದ ಆರೆಸ್ಸೆಸ್ ಜೊತೆಗೆ ಸಂಬಂಧವನ್ನು ಉಳಿಸಿಕೊಂಡೇ ಇರುತ್ತಾರೆ. ಪಕ್ಷಾಂತರ ಮಾಡಿದ ಬಳಿಕವೂ ‘ಆರೆಸ್ಸೆಸ್‌ನ ಹಾಲುಂಡು ಬೆಳೆದಿದ್ದೇನೆ’ ಎಂಬ ಹೇಳಿಕೆಯನ್ನು ಯಾವ ಮುಜುಗರವೂ ಇಲ್ಲದೆ ನೀಡುತ್ತಾರೆ. ಇತ್ತೀಚೆಗೆ ರಾಜ್ಯದಲ್ಲಿ ಪಕ್ಷಾಂತರಗೊಂಡ ಜಗದೀಶ್ ಶೆಟ್ಟರ್ ಮೊದಲಾದವರ ಬಾಯಿಯಲ್ಲಿ ಆರೆಸ್ಸೆಸ್ ವಿರೋಧಿ ಹೇಳಿಕೆಗಳನ್ನು ಹೊರಡಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಜಾತ್ಯತೀತ ಸಿದ್ಧಾಂತದ ಅಮೃತವುಂಡು ಬೆಳೆದ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೊಂಡಾಕ್ಷಣ, ಜಾತ್ಯತೀತ ಸಿದ್ಧಾಂತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯ ನಾಯಕರೂ ನಾಚುವಂತೆ ಸಮಯ ಸಾಧಕ ಹೇಳಿಕೆ ನೀಡುತ್ತಿರುವ ಕುಮಾರಸ್ವಾಮಿ ಮತ್ತು ಅವರ ಬಳಗದ ವರ್ತನೆ ಅದಕ್ಕೆ ಅತ್ಯುತ್ತಮ ಉದಾಹರಣೆ.
‘ಉಂಡ ತಟ್ಟೆಗೆ ಉಗಿದು’ ಏಳುವ ರೋಗ ಇದೀಗ ರಾಜಕೀಯ ಪಕ್ಷಗಳಲ್ಲಿ ಮಾತ್ರವಲ್ಲ ಇತರ ಕ್ಷೇತ್ರಗಳಿಗೂ ಹರಡುತ್ತಿವೆ. ಈ ದೇಶದ ಪ್ರಜಾಸತ್ತೆಯ ಮೂರು ಕಂಬಗಳಲ್ಲಿ ಪ್ರಮುಖವಾದದ್ದು ಎಂದು ನಾವು ನಂಬಿರುವ ನ್ಯಾಯಾಂಗ ಇದೀಗ ಶಾಸಕಾಂಗದ ಜೊತೆಗೆ ವಿಲೀನಗೊಳ್ಳಲು ತಹತಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಪರೂಪಕ್ಕೆ ಒಮ್ಮೊಮ್ಮೆ ನ್ಯಾಯಾಂಗ ಶಾಸಕಾಂಗದ ವಿರುದ್ಧ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತದೆಯಾದರೂ ಇದರ ಮೇಲೆ ಪೂರ್ಣ ವಿಶ್ವಾಸವನ್ನು ಇಡುವಂತೆ ಇಲ್ಲ. ಇಂದು ನ್ಯಾಯಾಂಗದೊಳಗಿರುವ ಕೆಲವು ವ್ಯಕ್ತಿಗಳಿಂದಾಗಿ ಉಳಿದೆಲ್ಲ ಸಂಸ್ಥೆಗಳಲ್ಲಿ ವಿಶ್ವಾಸ ಕಳೆದುಕೊಂಡಂತೆ ನ್ಯಾಯಾಂಗದ ಬಗ್ಗೆಯೂ ಜನರು ವಿಶ್ವಾಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನ್ಯಾಯಾಧೀಶರು ನಿವೃತ್ತರಾದರು ಎನ್ನುವುದು ಬಹಿರಂಗವಾಗುತ್ತಿದ್ದಂತೆಯೇ ‘ಯಾವ ಪಕ್ಷಕ್ಕೆ ಸೇರಿದರು’ ಎನ್ನುವ ಪ್ರಶ್ನೆಯನ್ನು ಜನರು ಕೇಳತೊಡಗಿದ್ದಾರೆ. ಇದೀಗ ಪಶ್ಚಿಮಬಂಗಾಳದಲ್ಲಿ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರಿ, ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಅಕ್ರಮಗಳ ಬಗ್ಗೆ ತೀರ್ಪು ನೀಡಿದ ಕಾರಣಕ್ಕೆ ಸುದ್ದಿಯಲ್ಲಿದ್ದ ಈ ನ್ಯಾಯಾಧೀಶರು ನಿವೃತ್ತಿಯಾದ ಎರಡು ದಿನಗಳಲ್ಲೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಅವರ ತೀರ್ಪುಗಳ ವಿಶ್ವಾಸಾರ್ಹತೆಯನ್ನು ಅನುಮಾನಿಸುವಂತೆ ಮಾಡಿದೆ.
ಇಂದು ಎಲ್ಲ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಸ್ವತಃ ಸುಪ್ರೀಂಕೋರ್ಟ್ ಈ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸುತ್ತಿದೆ. ಇದೇ ಸಂದರ್ಭದಲ್ಲಿ ನ್ಯಾಯ ವ್ಯವಸ್ಥೆಯನ್ನು ಕೂಡ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕೇಂದ್ರ ಸರಕಾರ ಯತ್ನಿಸುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಇದಕ್ಕಾಗಿ ಕೇಂದ್ರ ಸರಕಾರವನ್ನಷ್ಟೇ ಹೊಣೆ ಮಾಡುವಂತಿಲ್ಲ. ಎರಡು ಕೈಗಳು ಕೂಡಿದರೆ ಮಾತ್ರ ಚಪ್ಪಾಳೆ. ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿರುವವರು ಹೆಚ್ಚಿನ ಅಧಿಕಾರ, ಹಣ ಇತ್ಯಾದಿಗಳ ಬೆನ್ನು ಹತ್ತಿ, ತನ್ನ ವೃತ್ತಿ ಮೌಲ್ಯಗಳಿಗೆ ದ್ರೋಹ ಎಸಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಸಂವಿಧಾನದ ತಳಹದಿಯ ಮೇಲೆ ನಿಂತಿರುವ ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿದ್ದವರು ನಿವೃತ್ತಿಯ ಬಳಿಕ ಸಂವಿಧಾನ ವಿರೋಧಿಗಳ ಜೊತೆಗೆ ಯಾವ ಲಜ್ಜೆ ಯೂ ಇಲ್ಲದೆ ಗುರುತಿಸಿಕೊಳ್ಳುತ್ತಿರುವುದು ಈ ದೇಶ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎನ್ನುವುದನ್ನು ಹೇಳುತ್ತಿದೆ. ನಿವೃತ್ತಿಯ ಬಳಿಕ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರಿದ್ದೇನೋ ಹೌದು. ಬಿಜೆಪಿಯೊಳಗಿದ್ದೂ, ತಾನು ಹಿಂದೆ ಕಾರ್ಯನಿರ್ವಹಿಸಿದ ಅತ್ಯುನ್ನತ ಸಂಸ್ಥೆಗೆ ಧಕ್ಕೆಯಾಗದಂತೆ ವರ್ತಿಸುವ ಅವಕಾಶ ಅವರಿಗಿತ್ತು. ವಿಪರ್ಯಾಸವೆಂದರೆ, ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಅವರು ‘ಉಂಡ ಮನೆಗೆ ಎರಡು ಬಗೆ’ದಿದ್ದಾರೆ. ಈ ನಿವೃತ್ತ ನ್ಯಾಯಾಧೀಶರು ಬಿಜೆಪಿ ಸೇರಿದ ಬಳಿಕ, ಟಿವಿ ನಿರೂಪಕರೊಬ್ಬರು ‘‘ನಾಥೂರಾಂ ಗೋಡ್ಸೆ- ಮಹಾತ್ಮಾ ಗಾಂಧೀಜಿ, ಇವರ ನಡುವೆ ನಿಮ್ಮ ಆಯ್ಕೆಯಾವುದು?’’ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಅವರು, ‘‘ಈ ಬಗ್ಗೆ ಯೋಚಿಸಲು ಸಮಯಾವಕಾಶ ಬೇಕು’’ ಎಂದಿದ್ದಾರೆ. ಈ ದೇಶದ ನ್ಯಾಯಾಲಯ ಮಹಾತ್ಮಾಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಕೊಲೆಗಾರನೆಂದು ಕರೆದು ಆತನನ್ನು ಗಲ್ಲಿಗೇರಿಸಲು ಆದೇಶ ನೀಡಿತ್ತು. ಅತ್ಯುನ್ನತ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವಂತೆ ಈ ನ್ಯಾಯಾಧೀಶರು ‘ಅಭಿಪ್ರಾಯ’ ಹೇಳಲು ಹಿಂದೇಟು ಹಾಕಿದರು. ಈ ಮೂಲಕ ಈ ದೇಶದ ಸಂವಿಧಾನದ ಬಗ್ಗೆ, ಮಹಾತ್ಮಾಗಾಂಧೀಜಿಯ ಬಗ್ಗೆ ತನಗಿರುವ ಗೌರವವೆಷ್ಟು ಎನ್ನುವುದನ್ನು ಹೊರ ಹಾಕಿದರು.
ಇಂತಹ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ದೇಶಕ್ಕೆ ಈತ ಏನನ್ನು ನೀಡಬಹುದು? ಗೋಡ್ಸೆ-ಗಾಂಧಿಯ ನಡುವೆ ಆಯ್ಕೆಯಲ್ಲೇ ಸ್ಪಷ್ಟತೆಯಿಲ್ಲದ ಮನುಷ್ಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಗಳಿಸಿದ್ದಾದರೂ ಏನು? ಗೋಡ್ಸೆ-ಗಾಂಧಿ ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಅರಿವಿಲ್ಲದ ಹೈಕೋರ್ಟ್ ನ್ಯಾಯಾಧೀಶನೊಬ್ಬ ತನ್ನ ಅಧಿಕಾರಾವಧಿಯಲ್ಲಿ ಎಂತಹ ನ್ಯಾಯವನ್ನು ನೀಡಿರಬಹುದು? ಹಲವು ಪ್ರಕರಣಗಳಲ್ಲಿ ಪ್ರಮುಖ ತೀರ್ಪುಗಳನ್ನು ಇವರು ನೀಡಿದ್ದಾರೆ. ಆ ತೀರ್ಪುಗಳೆಲ್ಲವೂ ಇದೀಗ ಪ್ರಶ್ನಾರ್ಹವಾದಂತಾಗಿದೆ. ಇಲ್ಲಿ ನ್ಯಾಯಾಧೀಶ ಯಾವ ರಾಜಕೀಯ ಪಕ್ಷಕ್ಕೇ ಸೇರಿರಲಿ, ಕನಿಷ್ಠ ಸಂವಿಧಾನದ ಕುರಿತಂತೆ ತನಗಿರುವ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳಬಾರದು. ಆದರೆ ಇವರು ಸಂವಿಧಾನದ ಮೇಲೆಯೇ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನಿವೃತ್ತಿಯಾಗುವ ಸಂದರ್ಭದಲ್ಲಿ ‘ಗಂಡು ನವಿಲಿನ ಕಣ್ಣೀರು ಕುಡಿದು ಹೆಣ್ಣು ನವಿಲು ಗರ್ಭ ಧರಿಸುತ್ತದೆ. ಆದುದರಿಂದ ಹಿಂದೂಗಳಿಗೆ ನವಿಲು ಪವಿತ್ರವಾಗಿದೆ’’ ಎಂಬಂತಹ ಹೇಳಿಕೆಗಳನ್ನು ನೀಡಿದ್ದರು. ಸಂವಿಧಾನದ ಬಗ್ಗೆಯಾಗಲಿ, ವಿಜ್ಞಾನದ ಬಗ್ಗೆಯಾಗಲಿ ಅಲ್ಪ ಜ್ಞಾನ ಇರುವ ಮನುಷ್ಯ ಇಂತಹದೊಂದು ಹೇಳಿಕೆಯನ್ನು ನೀಡಲು ಸಾಧ್ಯವೆ? ಇಂತಹ ನ್ಯಾಯಾಧೀಶರು ಹೆಚ್ಚುತ್ತಿರುವ ಈ ದಿನಗಳಲ್ಲಿ ನ್ಯಾಯಾಲಯ ನೀಡುವ ತೀರ್ಪುಗಳನ್ನು ಗೌರವಿಸಬೇಕು ಎಂದು ಒತ್ತಾಯಿಸುವುದರಲ್ಲಿ ಏನು ಅರ್ಥವಿದೆ? ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ದಂಗೆಗೆ ಸಂಬಂಧಿಸಿ ತೀರ್ಪೊಂದನ್ನು ನೀಡುತ್ತಾ ‘‘ಅಧಿಕಾರ ಸ್ಥಾನದಲ್ಲಿರುವವರು ಮುಖ್ಯಮಂತ್ರಿ ಆದಿತ್ಯನಾಥರಂತೆ ಧಾರ್ಮಿಕ ವ್ಯಕ್ತಿಗಳಾಗಿರಬೇಕು’’ ಎಂದು ಹೇಳುತ್ತಾರೆ. ಸ್ವತಃ ಹಲವು ದಂಗೆಗಳ ಮೂಲಕವೇ ರಾಜಕೀಯ ವ್ಯಕ್ತಿಯಾಗಿ ರೂಪುಗೊಂಡಿರುವ ಆದಿತ್ಯನಾಥರಂತಹ ವ್ಯಕ್ತಿಗಳನ್ನು ‘ಧಾರ್ಮಿಕ ವ್ಯಕ್ತಿಗಳು’ ಎಂದು ಘೋಷಿಸುವ ನ್ಯಾಯಾಧೀಶನಿಂದ ದಂಗೆ ಸಂತ್ರಸ್ತರಿಗೆ ಯಾವ ರೀತಿಯ ನ್ಯಾಯ ಸಿಗಬಹುದು? ಸಂವಿಧಾನದ ಕುರಿತಂತೆ ಎಳ್ಳಷ್ಟು ಗೌರವವಿದ್ದಿದ್ದರೆ ಈತ ಈ ಹೇಳಿಕೆಯನ್ನು ನೀಡಲು ಸಾಧ್ಯವಿತ್ತೆ? ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಕೊಲೆ, ಅಕ್ರಮಗಳ ಮೂಲವನ್ನು ಇಂತಹ ನ್ಯಾಯಾಧೀಶರಲ್ಲಿ ಹುಡುಕಬೇಕಾಗಿದೆ. ಮತ್ತು ಇದಕ್ಕೆ ಔಷಧಿಯನ್ನು ಕಂಡು ಹಿಡಿಯದೇ ಇದ್ದಲ್ಲಿ ಅಳಿದುಳಿದ ಭರವಸೆಯಾಗಿರುವ ನ್ಯಾಯಾಂಗವನ್ನು ಸಂವಿಧಾನ ವಿರೋಧಿ ಶಕ್ತಿಗಳು ಬಲಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಸಂವಿಧಾನ ವಿರೋಧಿ ರಾಜಕೀಯ ಶಕ್ತಿಗಳು ಮತ್ತು ನಿವೃತ್ತ ನ್ಯಾಯಾಧೀಶರ ನಡುವಿನ ಅಕ್ರಮ ಸಂಬಂಧ ಈ ಭಾರತವನ್ನು ಇನ್ನಷ್ಟು ಪತನದ ಕಡೆಗೆ ಕೊಂಡೊಯ್ಯುತ್ತಿರುವುದು ಆತಂಕಕಾರಿಯಾಗಿದೆ.