ತಮಿಳುನಾಡಿನ ಅವಕಾಶವಾದಿ ಮೈತ್ರಿ ಅತಂತ್ರ

Update: 2025-04-22 08:15 IST
ತಮಿಳುನಾಡಿನ ಅವಕಾಶವಾದಿ ಮೈತ್ರಿ ಅತಂತ್ರ

PC: X/AmitShah

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಕ್ಷಿಣ ಭಾರತದಲ್ಲಿ ಹೇಗಾದರೂ ಕಾಲೂರಬೇಕೆಂದು ಬಿಜೆಪಿ ಹಿಂದಿನ ಜನಸಂಘದ ಕಾಲದಿಂದಲೂ ಪ್ರಯತ್ನಿಸುತ್ತಲೇ ಇದೆ. ಈ ಪಕ್ಷದ ಸೈದ್ಧಾಂತಿಕ ಮೂಲವಾದ ಆರೆಸ್ಸೆಸ್‌ನ ಸಾವಿರಾರು ಕಾರ್ಯಕರ್ತರು ಹಲವಾರು ವರ್ಷಗಳಿಂದ ದಕ್ಷಿಣದ ಕೇರಳ, ಕರ್ನಾಟಕ, ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ ಹಾಗೂ ಪಾಂಡೀಚೇರಿಗಳಲ್ಲಿ ಪರಿಶ್ರಮ ಪಡುತ್ತಲೇ ಇದ್ದಾರೆ. ಮಠಾಧೀಶರು, ವ್ಯಾಪಾರಿಗಳು, ಕೆಲವು ಸಮುದಾಯಗಳು ಒಳ ಬೆಂಬಲ ನೀಡಿದರೂ ದಕ್ಷಿಣದ ಒಂದೇ ಒಂದು ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಕರ್ನಾಟಕದಲ್ಲಿ ಒಂದೆರಡು ಸಲ ಅಧಿಕಾರಕ್ಕೆ ಬಂದರೂ ಅದು ಬಹುಮತದಿಂದ ಅಲ್ಲ. ಆಪರೇಶನ್ ಕಮಲದಂತಹ ಅನೈತಿಕ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದರೂ ಹಗರಣಗಳಲ್ಲಿ ಮುಳುಗಿ ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ. ಕೇರಳದಲ್ಲಿ ಸಂಘಟನಾತ್ಮಕವಾಗಿ ಒಂದಿಷ್ಟು ನೆಲೆ ವಿಸ್ತರಿಸಿಕೊಂಡರೂ ಚುನಾವಣಾ ರಾಜಕೀಯದಲ್ಲಿ ಅದು ಸಂಪೂರ್ಣ ವಿಫಲಗೊಂಡಿದೆ. ಕೇರಳವನ್ನು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾಡದ ಕುತಂತ್ರಗಳಿಲ್ಲ. ಅದೇ ರೀತಿ ತಮಿಳುನಾಡು ಕೂಡ ಬಿಜೆಪಿಗೆ ನುಂಗಲಾಗದ ತುತ್ತಾಗಿದೆ.

ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ದಕ್ಷಿಣ ಭಾರತದ ರಾಜ್ಯಗಳು ಅಡ್ಡಿಯಾಗಿವೆ. ‘ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ’ ಎಂಬ ಹೆಸರಿನಲ್ಲಿ ಹಿಂದಿಯನ್ನು ಹೇಗಾದರೂ ಮಾಡಿ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹೇರಲೇಬೇಕೆಂಬ ನಾಗಪುರದ ಗುರುಗಳ ಗುಪ್ತ ಆದೇಶವನ್ನು ಜಾರಿಗೆ ತರಲು ಕೇಂದ್ರದ ಬಿಜೆಪಿ ಸರಕಾರ ಮಸಲತ್ತು ನಡೆಸುತ್ತಲೇ ಇದೆ. ಆದರೆ ತಮಿಳುನಾಡಿನಲ್ಲಂತೂ ಹಿಂದಿ ಹೇರಿಕೆಗೆ ತೀವ್ರ ಪ್ರತಿರೋಧ ಬರುತ್ತಲೇ ಇದೆ. ಅಲ್ಲಿ ಹಿಂದಿ ಹೇರಿಕೆಗೆ ಪ್ರತಿರೋಧ ಹೇಗಿದೆಯೆಂದರೆ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮಿಳುನಾಡಿಗೆ ಹೋದರೂ ಹಿಂದಿಯಲ್ಲಿ ಮಾತಾಡುತ್ತಿರಲಿಲ್ಲ. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಹೋದರೂ ಹಿಂದಿಯಲ್ಲಿ ಭಾಷಣ ಮಾಡುವುದಿಲ್ಲ. ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟುತ್ತೇನೆಂದು ಹೋಗಿದ್ದ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾ ಮಲೈ ನಡುರಸ್ತೆಯಲ್ಲಿ ಚಾವಟಿಯಿಂದ ಬಾಸುಂಡೆ ಬರುವಂತೆ ಹೊಡೆದುಕೊಂಡರೂ ಬರಿಗೈಯಲ್ಲಿ ವಾಪಸಾದರು. ಅಣ್ಣಾ ಮಲೈ ಕಡೆಯಿಂದ ಕೆಲಸ ಆಗುವುದಿಲ್ಲ ಎಂದು ಗೊತ್ತಾದಾಗ ಅಮಿತ್ ಶಾ ಎಐಎಡಿಎಂಕೆ ಜೊತೆಗೆ ಮೈತ್ರಿಗೆ ಮುಂದಾದರು. ಇದರಿಂದ ಬೇಸರಗೊಂಡ ಅಣ್ಣಾ ಮಲೈ ಪಕ್ಷದ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕೆಲವಾದರೂ ಸ್ಥಾನಗಳನ್ನು ಗೆದ್ದುಕೊಳ್ಳಲು ಅಮಿತ್ ಶಾ ತಂತ್ರ ರೂಪಿಸಿ ಚೆನ್ನೈಗೆ ಧಾವಿಸಿ ಬಂದರು. ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಅವರ ಜೊತೆಗೆ ಮಾತುಕತೆಯನ್ನು ನಡೆಸಿದರು. ನಂತರ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಚುನಾವಣೆಯ ನಂತರ ಎಐಎಡಿಎಂಕೆ ಜೊತೆಗೆ ಸರಕಾರವನ್ನು ರಚಿಸುವುದಾಗಿ ಪ್ರಕಟಿಸಿದರು. ಆದರೆ ಎಐಎಡಿಎಂಕೆ ಇದನ್ನು ಒಪ್ಪಲಿಲ್ಲ. ಅದರ ನಾಯಕ ಪಳನಿಸ್ವಾಮಿ ಅವರು ನಂತರ ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿ ಬಿಜೆಪಿ ಜೊತೆಗಿನ ಹೊಂದಾಣಿಕೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಚುನಾವಣೆಯ ನಂತರ ಬಿಜೆಪಿ ಜೊತೆಗೆ ಸೇರಿ ಸರಕಾರವನ್ನು ರಚಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದರು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹೊಂದಾಣಿಕೆಗಳು ಸಹಜವಾಗಿ ನಡೆಯುತ್ತವೆ. ಬಹುತೇಕ ಹೊಂದಾಣಿಕೆ ಹಾಗೂ ಮೈತ್ರಿಗಳು ಸಮಾನ ಮನಸ್ಕ ಪಕ್ಷಗಳ ನಡುವೆ ನಡೆಯುತ್ತವೆ. ಆದರೆ ಪ್ರಜಾಪ್ರಭುತ್ವ ವಿರೋಧಿಯಾದ ಹಾಗೂ ಕೋಮುವಾದಿ ಹಿನ್ನೆಲೆಯ ಬಿಜೆಪಿ ಜೊತೆಗೆ ಸಮಾನ ಮನಸ್ಕ ಪಕ್ಷಗಳನ್ನು ಹುಡುಕಿದರೂ ಸಿಗುವುದಿಲ್ಲ. ಈಗ ಕೇಂದ್ರದಲ್ಲಿ ಸರಕಾರ ರಚಿಸಿರುವುದು ಕೂಡ ಸಂದರ್ಭ ಸಾಧಕ ಹೊಂದಾಣಿಕೆ ಮೂಲಕ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಯಾವ ದ್ರಾವಿಡ ಪಕ್ಷವೂ ಮನುವಾದಿ, ಕೋಮುವಾದಿ ಸೈದ್ಧಾಂತಿಕ ನಿಲುವಿನ ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕೂಡ ಒಲ್ಲದ ಮನಸ್ಸಿನಿಂದ. ಬಿಜೆಪಿ ಮತ್ತು ಎಐಎಡಿಎಂಕೆ ಸಮಾನವಾದ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳಲ್ಲ. ವೈಚಾರಿಕ ನಿಲುವುಗಳೂ ಕೂಡ ಭಿನ್ನವಾಗಿವೆ. ಕೆಲವು ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದರೂ ಅದು ಅವಕಾಶವಾದಿ ಹೊಂದಾಣಿಕೆ ಅಂದರೆ ಅತಿಶಯೋಕ್ತಿಯಲ್ಲ.

ಕೆಲವೇ ದಿನಗಳ ಹಿಂದೆ ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾದಾಗ ಎಐಎಡಿಎಂಕೆ ಅದರ ವಿರುದ್ಧ ಮತ ಚಲಾವಣೆ ಮಾಡಿತು. ಇದೊಂದೇ ಪ್ರಶ್ನೆಯಲ್ಲ, ಭಾಷಾ ಧೋರಣೆ, ರಾಜ್ಯಗಳ ಸ್ವಾಯತ್ತತೆ, ಹೀಗೆ ಹಲವಾರು ವಿಷಯಗಳಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅವುಗಳ ನಡುವೆ ಹೊಂದಾಣಿಕೆಗೆ ಕಾರಣವಾದ ಏಕ ಮಾತ್ರ ಅಂಶವೆಂದರೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿ ಇರುವ ಡಿಎಂಕೆಯನ್ನು ವಿರೋಧಿಸುವುದಾಗಿದೆ. ಎಲ್ಲಾ ದ್ರಾವಿಡ ಪಕ್ಷಗಳಿಗೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಆದರ್ಶ. ಆದರೆ ಸಂಘ ಪರಿವಾರ ಪೆರಿಯಾರ್‌ರನ್ನು ಒಪ್ಪುವುದಿಲ್ಲ. ಅವಕಾಶವಾದಿ ಮೈತ್ರಿ ಮಾಡಿಕೊಂಡಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಬಿಜೆಪಿಯಂತೂ ಹೀನಾಯವಾಗಿ ಪರಾಭವಗೊಂಡಿತು.

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವವನ್ನಾದರೂ ಉಳಿಸಿಕೊಳ್ಳಬೇಕೆಂದು ಎಐಎಡಿಎಂಕೆ ಹಾಗೂ ಬಿಜೆಪಿ ಕೆಲವು ಸ್ಥಾನಗಳಿಗಾಗಿ ಹೊಂದಾಣಿಕೆ ಮಾಡಿಕೊಳ್ಳಲು ಈಗ ಮುಂದಾಗಿದ್ದರೂ ಅದು ಇನ್ನೂ ನಿರ್ದಿಷ್ಟ ಸ್ವರೂಪವನ್ನು ಪಡೆದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹೊಂದಾಣಿಕೆ ಮೂಲಕ ತಮಿಳುನಾಡಿನಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದಿದ್ದರೂ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಈ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸುಲಭವಲ್ಲ.

ಕೇರಳದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿ ಶೇ. 45ರಷ್ಟು ಮುಸ್ಲಿಮ್ ಮತ್ತು ಕ್ರೈಸ್ತ ಮತದಾರರಿದ್ದಾರೆ. ಹಿಂದುಳಿದ ವರ್ಗಗಳ ಅದರಲ್ಲೂ ಈಳವ ಸಮುದಾಯದ ನಡುವೆ ಕಮ್ಯುನಿಸ್ಟ್ ಪಕ್ಷಗಳು ಭದ್ರವಾಗಿ ಬೇರೂರಿವೆ. ಅಲ್ಲಿ ಚುನಾವಣೆಯ ಹಣಾಹಣಿ ನಡೆಯುವುದು ಕಮ್ಯುನಿಸ್ಟ್ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ. ಇಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ಬಿಜೆಪಿ ಗೋಮಾಂಸದ ಬಗ್ಗೆ ತನ್ನ ನಿಲುವನ್ನು ಬದಲಿಸಿಕೊಂಡಿದೆ. ದೇಶದ ಉಳಿದೆಡೆ ಗೋಮಾಂಸ ಮಾರಾಟ ಮತ್ತು ಸಾಗಾಟವನ್ನು ವಿರೋಧಿಸುವ ಬಿಜೆಪಿ ಕೇರಳ ಮತ್ತು ಗೋವಾಗಳಲ್ಲಿ ಮಾತ್ರ ಗೋಮಾಂಸ ಮಾರಾಟ ಮತ್ತು ಸಾಗಾಟವನ್ನು ವಿರೋಧಿಸುವುದಿಲ್ಲ. ಆದರೂ ಕೇರಳದ ವಿದ್ಯಾವಂತ ಮತದಾರರು ಬಿಜೆಪಿಯನ್ನು ಒಪ್ಪುವುದಿಲ್ಲ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಎಷ್ಟೇ ಕಸರತ್ತು ಮಾಡಿದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅದು ಭರವಸೆಯನ್ನು ಹೊಂದಿದ್ದರೂ ಕರ್ನಾಟಕ ರಾಜ್ಯ ಘಟಕದ ಒಳಗಿನ ಬಿರುಕನ್ನು ಮುಚ್ಚುವುದು ಅಷ್ಟು ಸುಲಭವಲ್ಲ. ಇಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನ ಒಳಗೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಬಿಜೆಪಿಯಂತೆ ಬೀದಿಗೆ ಬಂದಿಲ್ಲ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ನೆಲೆಯೂರುವುದು ಅಸಾಧ್ಯ ಎಂದರೆ ತಪ್ಪಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News