ಆಧಾರ್ ಹೆಸರಿನಲ್ಲಿ ಕಾರ್ಮಿಕರು ಆಧಾರ ಕಳೆದುಕೊಳ್ಳದಿರಲಿ

Update: 2024-01-03 04:20 GMT

Photo: digitalindiagov.in/aadhar-card

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹೊಸ ವರ್ಷದಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗ)ಯಡಿ ಎಲ್ಲ ವೇತನಗಳನ್ನು ಆಧಾರ್ ಆಧರಿತ ಪಾವತಿ ವ್ಯವಸ್ಥೆಯ(ಎಬಿಪಿಎಸ್) ಮೂಲಕವೇ ಪಡೆಯಲು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಅವರ ಜಾಬ್ ಕಾರ್ಡ್‌ಗಳ ಜೊತೆಗೆ ಆಧಾರ್ ಕಾರ್ಡ್ ವಿವರಗಳನ್ನು ಜೋಡಿಸುವುದು ಅತ್ಯಗತ್ಯವಾಗಿದೆ. ಎಬಿಪಿಎಸ್ ಜಾರಿ ಮಾಡುವ ಸರಕಾರದ ಬೆದರಿಕೆ ಇಂದು ನಿನ್ನೆಯದಲ್ಲ. ಇದು ಕಳೆದ ಒಂದು ವರ್ಷದಿಂದ ನರೇಗಾ ಕಾರ್ಮಿಕರ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಿತ್ತು. ಜಾಬ್‌ಕಾರ್ಡ್ ಗಳನ್ನು ಹೊಂದಿರುವ ಶೇ. 34.8ರಷ್ಟು ಕಾರ್ಮಿಕರು ಈಗಲೂ ಈ ಪಾವತಿ ವಿಧಾನಕ್ಕೆ ಅನರ್ಹರಾಗಿದ್ದಾರೆ. ಅಂದರೆ, ಈ ಕಡ್ಡಾಯ ಆದೇಶ ಜಾರಿಗೊಂಡ ಬಳಿಕ ಇವರು ತಮ್ಮ ವೇತನವನ್ನು ಪಡೆದುಕೊಳ್ಳಲು ವಿಫಲರಾಗುತ್ತಾರೆ ಮತ್ತು ನರೇಗಾ ಯೋಜನೆಯಿಂದಲೇ ಹೊರದಬ್ಬಲ್ಪಡುತ್ತಾರೆ. ನರೇಗಾ ಜಾಬ್ ಕಾರ್ಡ್‌ಗಳನ್ನು ಇಳಿಕೆ ಮಾಡುವ ಅಥವಾ ಯೋಜನೆಯಿಂದ ಕಾರ್ಮಿಕರನ್ನು ಹೊರದಬ್ಬುವ ದುರುದ್ದೇಶದ ಭಾಗವಾಗಿ ಎಬಿಪಿಎಸ್‌ನ್ನು ಕಡ್ಡಾಯಗೊಳಿಸಲಾಗಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತರ ಗಂಭೀರ ಆರೋಪವಾಗಿದೆ.

ಈ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಈ ಹಿಂದೆ ಆಧಾರ್ ಕಾರ್ಡ್ ಇಲ್ಲದೆ ಇರುವ ಕಾರಣಕ್ಕಾಗಿ ಬಡವರಿಗೆ ರೇಷನ್ ನಿರಾಕರಿಸಿದ ಪ್ರಕರಣಗಳು ಸುದ್ದಿಯಾಗಿದ್ದವು. ಆ ನಿರಾಕರಣೆಯ ಪರಿಣಾಮ ಏನಾಯಿತು ಎನ್ನುವುದನ್ನೂ ನಾವು ನೋಡಿದ್ದೇವೆ. ದೇಶಾದ್ಯಂತ ಹಲವೆಡೆ ಹಸಿವಿನಿಂದ ಸತ್ತ ಘಟನೆಗಳು ಬಹಿರಂಗವಾದವು. ಬಳಿಕ ಎಚ್ಚೆತ್ತ ಸರಕಾರ ಬಿಪಿಎಲ್ ಕಾರ್ಡ್‌ದಾರರು ಅಕ್ಕಿ, ಬೇಳೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿಕೆ ನೀಡಿತು. ಇದಾದ ಬಳಿಕವೂ ಈ ದೇಶದ ಬಹುತೇಕ ರೇಷನ್ ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ರೇಷನ್ ನಿರಾಕರಿಸಲಾಗಿದೆ. ಆಧಾರ್ ಲಿಂಕ್ ಹೆಸರಿನಲ್ಲಿ ಸಿಲಿಂಡರ್ ಸಬ್ಸಿಡಿ ಹಣವನ್ನು ಹಂತಹಂತವಾಗಿ ಸರಕಾರ ಇಲ್ಲವಾಗಿಸಿದ್ದನ್ನು ನಾವು ಅನುಭವಿಸಿದ್ದೇವೆ. ಸಬ್ಸಿಡಿಯನ್ನು ನಿರಾಕರಿಸುವುದಕ್ಕಾಗಿಯೇ ಆಧಾರ್ ಲಿಂಕ್ ಕಡ್ಡಾಯ ಮಾಡಿತು. ಮೊದಲು ಆಧಾರ್ ಲಿಂಕ್ ಮಾಡದವರಿಗೆ ಸಬ್ಸಿಡಿ ನಿಂತಿತು. ಆ ಬಳಿಕ ಬ್ಯಾಂಕ್‌ಗಳಿಗೆ ಸಬ್ಸಿಡಿ ವರ್ಗಾವಣೆಯಲ್ಲೇ ಗೊಂದಲಗಳು ಸೃಷ್ಟಿಯಾದವು. ಕಟ್ಟ ಕಡೆಗೆ ಸಬ್ಸಿಡಿ ಹಣ ಬೀಳುವುದು ಶಾಶ್ವತವಾಗಿ ನಿಂತು ಹೋಯಿತು. ನರೇಗಾ ಕಾರ್ಡ್‌ಧಾರರನ್ನು ಹಂತ ಹಂತವಾಗಿ ಯೋಜನೆಗಳಿಂದ ಹೊರ ಹಾಕುವುದಕ್ಕಾಗಿಯೇ ಈ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎನ್ನುವ ಆರೋಪಗಳು ಕೇಳಿ ಬರುವುದಕ್ಕೆ ಮೇಲಿನ ಅಂಶಗಳೂ ಕಾರಣವಾಗಿವೆ.

ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆಯೆಂಬ ಹೆಗ್ಗಳಿಕೆಗೆ ನರೇಗಾ ಪಾತ್ರವಾಗಿದೆ. ಯುಪಿಎ ಕಾಲದಲ್ಲಿ ಈ ಯೋಜನೆ ಜಾರಿಗೊಂಡಾಗ ಬಿಜೆಪಿ ಅದನ್ನು ವ್ಯಂಗ್ಯವಾಡಿತ್ತು. ಆದರೆ ಅಧಿಕಾರಕ್ಕೆ ಬಂದು ಹೊಸ ಬಜೆಟ್ ಮಂಡಿಸುವ ಸಂದರ್ಭದಲ್ಲಿ ನರೇಗಾ ಯೋಜನೆಯನ್ನು ಶ್ಲಾಘಿಸಿತ್ತಲ್ಲದೆ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿತ್ತು. ಕೊರೋನ, ಲಾಕ್‌ಡೌನ್ ಕಾಲದಲ್ಲಿ ನಗರ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು ಮರಳಿ ಗ್ರಾಮಕ್ಕೆ ತೆರಳುವ ಸನ್ನಿವೇಶ ನಿರ್ಮಾಣವಾದಾಗ ಅವರನ್ನು ಕೈ ಹಿಡಿದದ್ದು ನರೇಗಾ ಯೋಜನೆ. ಗ್ರಾಮೀಣ ಪ್ರದೇಶವನ್ನು ಹಸಿವು, ಅಪೌಷ್ಟಿಕತೆಯಿಂದ ರಕ್ಷಿಸಲು ನರೇಗಾ ಯೋಜನೆ ಭಾರೀ ಕೊಡುಗೆಯನ್ನು ನೀಡಿದೆ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು ಬಣ್ಣಿಸಿದ್ದಾರೆ. ವಿಶ್ವಸಂಸ್ಥೆಯೂ ನರೇಗಾ ಯೋಜನೆಯ ಯಶಸ್ಸನ್ನು ಶ್ಲಾಘಿಸಿದೆ. ಈ ದೇಶದ ನಿರುದ್ಯೋಗ ಸಮಸ್ಯೆಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಈ ಯೋಜನೆಗೆ ಸರಕಾರ ಹೆಚ್ಚು ಅನುದಾನಗಳನ್ನು ನೀಡುವ ಅಗತ್ಯವಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರವೇ ಈ ಯೋಜನೆಯನ್ನು ಮುಗಿಸುವುದಕ್ಕೆ ಸಂಚು ರೂಪಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಎಬಿಪಿಎಸ್ ಆ ಸಂಚಿನ ಮುಂದುವರಿದ ಭಾಗ ಎನ್ನುವುದು ನರೇಗಾ ಕಾರ್ಯಕರ್ತರ ಆತಂಕವಾಗಿದೆ.

ಹಿಂದೊಮ್ಮೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದರು. ನರೇಗಾ ಯೋಜನೆಯಲ್ಲಿ ಸರಕಾರದ ವೈಫಲ್ಯವನ್ನು ಮುಚ್ಚಿಡುವುದಕ್ಕಾಗಿ ವಿತ್ತ ಸಚಿವರು ನೀಡಿರುವ ಗೊಂದಲಕಾರಿ ಹೇಳಿಕೆಯಿದು. ವಿತ್ತ ಸಚಿವರ ಹೇಳಿಕೆಯ ಸತ್ಯಾಸತ್ಯಾತೆಯನ್ನು ಫ್ಯಾಕ್ಟ್‌ಚಕ್ ಡಾಟ್ ಇನ್ ಪರಿಶೀಲಿಸಿದಾಗ ಅವರ ಮಾತಿನ ಪೊಳ್ಳುಗಳು ಬಯಲಾದವು. ಈ ವೆಬ್‌ಸೈಟ್ 2018-2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಇರುವ ಬೇಡಿಕೆಯ ಕುರಿತು ನರೇಗಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಶೀಲಿಸಿದಾಗ ಬೇರೆಯೇ ಮಾಹಿತಿಗಳು ದೊರಕಿದವು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿರುವುದು ಇದರಿಂದ ಬೆಳಕಿಗೆ ಬಂತು. 2018ರಲ್ಲಿ 5.78 ಕೋಟಿ ಕುಟುಂಬಗಳಿಂದ ಅಂದರೆ ಸುಮಾರು 9.11 ಕೋಟಿ ಜನರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಯು 2019-20ರಲ್ಲಿ 6.16 ಕೋಟಿ ಕುಟುಂಬಗಳಿಗೆ ಅಂದರೆ ಸುಮಾರು 9.33 ಕೋಟಿ ಜನರಿಗೆ ಏರಿಕೆಯಾಗಿದೆ. ಕೋವಿಡ್ ಕಾಲದಲ್ಲಿ ಈ ಬೇಡಿಕೆ ಸಹಜವಾಗಿಯೇ ಇನ್ನಷ್ಟು ಏರಿಕೆಯಾಯಿತು. ಯಾಕೆಂದರೆ ಅದಾಗಲೇ ನಗರಗಳಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ಕಾರ್ಮಿಕರು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಮರಳಿದ್ದರು. 2020-21ರಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನರೇಗಾದಡಿ ಕೆಲಸಕ್ಕೆ ಬೇಡಿಕೆ 38.7ರಷ್ಟು ಏರಿಕೆಯಾಗಿತ್ತು ಎನ್ನುವ ಅಂಶವನ್ನು ಸರಕಾರಿ ವೆಬ್‌ಸೈಟ್ ಹೇಳುತ್ತದೆ.

ಸರಕಾರದ ಅಂಕಿ-ಅಂಶಗಳ ಪ್ರಕಾರವೇ ಕೇಂದ್ರ ಸರಕಾರ ನರೇಗಾ ಯೋಜನೆಗೆ 5,000 ಕೋಟಿ ರೂ.ಗೂ ಅಧಿಕ ಬಾಕಿಯಿರಿಸಿಕೊಂಡಿದೆ. ಹಲವು ರಾಜ್ಯಗಳಲ್ಲಿ ಸಮಯಕ್ಕೆ ಸರಿಯಾಗಿ ಹಣ ಒದಗಿಸದೇ ಇರುವುದರಿಂದ ಕಾಮಕಾರಿ ಸ್ಥಗಿತಗೊಂಡಿವೆ. ವೇತನದ ತಾರತಮ್ಯದಿಂದಾಗಿಯೂ ಕಾರ್ಮಿಕರು ನರೇಗಾ ಯೋಜನೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಜನರು ನರೇಗಾ ಯೋಜನೆಯ ಫಲಾನುಭವಿಗಳಾಗಲು ಇಚ್ಛಿಸುತ್ತಿಲ್ಲ ಎನ್ನುವುದಕ್ಕಿಂತ, ನರೇಗಾ ಯೋಜನೆಯಲ್ಲಿ ಜನರು ಭಾಗೀದಾರರಾಗುವುದು ಸರಕಾರಕ್ಕೆ ಬೇಕಾಗಿಲ್ಲ ಎನ್ನುವುದೇ ಸರಿಯಾದುದು. ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸಲು ಸರಕಾರಕ್ಕೆ ಇಷ್ಟವಿಲ್ಲ. ಆದುದರಿಂದಲೇ ಬೇರೆ ಬೇರೆ ಒತ್ತಡಗಳ ಮೂಲಕ ನರೇಗಾ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಇಳಿಸುವ ಪ್ರಯತ್ನದಲ್ಲಿದೆ ಕೇಂದ್ರ ಸರಕಾರ. ಇದೀಗ ಎಬಿಪಿಎಸ್ ಪಾವತಿಯನ್ನು ಜಾರಿಗೆ ತಂದಿರುವುದು ಕಾರ್ಮಿಕರಿಗೆ ಇನ್ನಷ್ಟು ಕಿರುಕುಳ ನೀಡುವುದಕ್ಕೇ ಹೊರತು, ನರೇಗಾ ಯೋಜನೆಯನ್ನು ಯಶಸ್ವಿಗೊಳಿಸುವುದಕ್ಕಲ್ಲ. ದಿನಗೂಲಿ ಕಾರ್ಮಿಕರು ತಮ್ಮ ಕೆಲಸವನ್ನು ಬಿಟ್ಟು ಆಧಾರ್ ಕಾರ್ಡ್‌ಗೆ ಅಲೆದಾಡುವಂತೆ ಮಾಡುವುದು, ಬೇರೆ ಬೇರೆ ಕಾರಣಗಳನ್ನು ನೀಡಿ ಹಣ ಪಾವತಿಯಲ್ಲಿ ತೊಡಕನ್ನುಂಟು ಮಾಡುವುದು ಹೀಗೆ...ಹಂತ ಹಂತವಾಗಿ ಜನರಿಗೆ ಈ ಯೋಜನೆಯ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾಡಿ ನರೇಗಾದಿಂದ ದೂರ ಮಾಡುವುದು ಸರಕಾರದ ಉದ್ದೇಶವೆಂದು ಅನುಮಾನಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಧಾರನ್ನು ಮುಂದಿಟ್ಟುಕೊಂಡು ಇನ್ನಷ್ಟು ಕಾರ್ಮಿಕರು ನರೇಗಾ ಯೋಜನೆಯಿಂದ ಹೊರದಬ್ಬಲ್ಪಡಲಿದ್ದಾರೆ ಎನ್ನುವ ಭೀತಿ ತಲೆಯೆತ್ತಿದೆ. ಈಗಾಗಲೇ ಆರ್ಥಿಕ ಹಿಂಜರಿತದಿಂದ ನಿರುದ್ಯೋಗಗಳು ಹೆಚ್ಚಿವೆ. ಹಸಿವು , ಅಪೌಷ್ಟಿಕತೆ ಅಧಿಕವಾಗಿದೆ. ಇಂತಹ ಹೊತ್ತಿನಲ್ಲಿ ನರೇಗಾ ಯೋಜನೆಯ ನೂರು ದಿನದ ಉದ್ಯೋಗ ಆಧಾರವನ್ನು ಕೂಡ ಆಧಾರ್ ಹೆಸರಿನಲ್ಲಿ ನಿರಾಧಾರವಾಗಿಸುವುದು ಎಷ್ಟು ಸರಿ? ಸರಕಾರ ಈ ಆದೇಶವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News