ಸಾಗರ | ಅಪಘಾತದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡದ ಕೆಎಸ್ಸಾರ್ಟಿಸಿ ; ಬಸ್ ಜಪ್ತಿಗೆ ಕೋರ್ಟ್ ಆದೇಶ

ಸಾಗರ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಸಾಗರ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿದ ಘಟನೆ ನಡೆದಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯದ ಆದೇಶದಂತೆ ಕೆಎಸ್ಸಾರ್ಟಿಸಿ ಶಿರಸಿ ಡಿಪೋ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಸ್ಸನ್ನೇ ಜಪ್ತಿ ಮಾಡಲಾಗಿದೆ.
2022ನೇ ಸಾಲಿನ ಜುಲೈ 7ರಂದು ಬೆಳಿಗ್ಗೆ 5:30ರ ವೇಳೆಗೆ ಗಣೇಶ್ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಪ್ರವಾಸಿ ಮಂದಿರದ ಎದುರು ಕೆಎಸ್ಸಾರ್ಟಿಸಿ ಬಸ್ ಸೈಕಲ್‌ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಮೃತ ಗಣೇಶನ ಪೋಷಕರು ಅಪಘಾತಕ್ಕೆ ಪರಿಹಾರ ಕೋರಿ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಗಣೇಶ್ ಅವರ ಪೋಷಕರಿಗೆ ಮೂರು ತಿಂಗಳಿನೊಳಗೆ ಪರಿಹಾರ ನೀಡುವಂತೆ 2024ರ ಜುಲೈ 8ರಂದು ನ್ಯಾಯಾಲಯ ಆದೇಶಿಸಿತ್ತು. ಮೂರು ತಿಂಗಳು ಕಳೆದರೂ ಕೆಎಸ್ಸಾರ್ಟಿಸಿ ಪರಿಹಾರ ನೀಡದ ಹಿನ್ನಲೆಯಲ್ಲಿ ಗಣೇಶನ ತಾಯಿ ಉಮಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ನೋಟಿಸ್ ಜಾರಿ ಅದ ನಂತರವೂ ಕೆಎಸ್ಸಾರ್ಟಿಸಿ ಪರಿಹಾರದ ಹಣ ಪಾವತಿಸದ ಕಾರಣ ಶಿರಸಿ ಡಿಪೋಗೆ ಸೇರಿದ ಬಸ್ಸನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಬಸ್ಸನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.