ʼಯುವನಿಧಿʼ| ರಾಜ್ಯದಲ್ಲಿ 61,700 ಅಭ್ಯರ್ಥಿಗಳಿಂದ ನೋಂದಣಿ: ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-01-10 12:38 GMT

ಶಿವಮೊಗ್ಗ: ಯುವನಿಧಿ ಯೋಜನೆಗೆ  ರಾಜ್ಯದಲ್ಲಿ ಪ್ರಸ್ತುತ 61,700 ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ʼ2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ. ನೋಂದಣಿ ಪ್ರಕ್ರಿಯೆ ಆನ್‍ಲೈನ್‍ನಲ್ಲಿ ಉಚಿತ ಮತ್ತು ಸರಳವಾಗಿದೆʼ ಎಂದರು.

ಸ್ವಾಮಿ ವಿವೇಕಾನಂದರ ಜಯಂತಿ-ರಾಷ್ಟ್ರೀಯ ಯುವದಿನವಾದ ಜ.12 ರಂದು ರಾಜ್ಯ ಸರ್ಕಾರದ 5 ನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚಾಲನೆ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು, ಯುವಜನತೆ, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

2023 ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ನಿರುದ್ಯೊಗ ಭತ್ಯೆ ನೀಡಲಾಗುವುದು. ಹಾಗೂ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು, ಉದ್ಯೋಗವನ್ನು ಒದಗಿಸಲು ಸಹಕರಿಸುವುದು ಮತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ʼಯುವನಿಧಿ ಯೋಜನೆ ಅನುಷ್ಠಾನದ ಕುರಿತಾದ ವ್ಯವಸ್ಥೆಗಳು ಉತ್ತಮವಾಗಿ ನಡೆಯುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಕಾರವಾರ, ಚಿತ್ರದುರ್ಗದಿಂದ ಸಹ ಯುಜನತೆ ಆಗಮಿಸಲಿದ್ದು, 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಷ್ಟದಲ್ಲಿರುವವರಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೂ ಇತರೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುತ್ತಲಿದೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News