ಮೊದಲ ಟೆಸ್ಟ್ | ಬ್ಯಾಟಿಂಗ್ ವೈಫಲ್ಯದ ನಂತರ ಪುಟಿದೆದ್ದ ಭಾರತ

Update: 2024-11-22 18:23 GMT

PC : PTI 

ಪರ್ತ್: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟವಾದ ಶುಕ್ರವಾರ 17 ವಿಕೆಟ್‌ಗಳು ಪತನಗೊಂಡಿದ್ದು, ಬೌನ್ಸಿ ಪಿಚ್ ಹೊಂದಿರುವ ಪರ್ತ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಮೊದಲ ಇನಿಂಗ್ಸ್ 150 ರನ್‌ಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯ ತಂಡವು ಕೇವಲ 27 ಓವರ್‌ಗಳಲ್ಲಿ 67 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.

ನಾಯಕ ಹಾಗೂ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ 17 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿ ಭಾರತೀಯ ಬೌಲಿಂಗ್ ದಾಳಿಯ ನೇತೃತ್ವವಹಿಸಿದ್ದರೆ, ಸಹ ವೇಗದ ಬೌಲರ್ ಮುಹಮ್ಮದ್ ಸಿರಾಜ್ 17 ರನ್‌ಗೆ 2 ವಿಕೆಟ್‌ಗಳನ್ನು ಪಡೆದರು.

ಎಡಗೈ ಬ್ಯಾಟರ್‌ಗಳಾದ ಅಲೆಕ್ಸ್ ಕ್ಯಾರಿ ಹಾಗೂ ಮಿಚೆಲ್ ಸ್ಟಾರ್ಕ್ ಕ್ರಮವಾಗಿ 19 ಹಾಗೂ 6 ರನ್‌ನಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಸದ್ಯ ಆಸ್ಟ್ರೇಲಿಯ ಭಾರತದ ಮೊದಲ ಇನಿಂಗ್ಸ್‌ಗಿಂತ 83 ರನ್ ಹಿನ್ನಡೆಯಲ್ಲಿದೆ.

ಬುಮ್ರಾ ಅವರು ಚೊಚ್ಚಲ ಪಂದ್ಯವನ್ನಾಡಿದ ನಾಥನ್ ಮೆಕ್‌ಸ್ವೀನಿ(10 ರನ್)ವಿಕೆಟ್ ಉರುಳಿಸುವ ಮೂಲಕ ಕಾಂಗರೂ ಪಡೆಯ ಬೇಟೆಗೆ ಚಾಲನೆ ನೀಡಿದರು. 2 ಓವರ್‌ಗಳ ನಂತರ ಮತ್ತೆ ದಾಳಿಗಿಳಿದ ಬುಮ್ರಾ ಅವರು ಹಿರಿಯ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ(8 ರನ್)ಹಾಗೂ ಸ್ಟೀವನ್ ಸ್ಮಿತ್(0)ಅವರನ್ನು ಬೆನ್ನುಬೆನ್ನಿಗೆ ಪೆವಿಲಿಯನ್‌ಗೆ ಕಳುಹಿಸಿದರು. ಖ್ವಾಜಾ ಅವರು 2ನೇ ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರೆ, ಸ್ಮಿತ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಅವರು ಬುಮ್ರಾಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದರು. 11 ರನ್ ಗಳಿಸಿದ ಹೆಡ್ ಚೊಚ್ಚಲ ಪಂದ್ಯವನ್ನಾಡಿದ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು. ಆಲ್‌ರೌಂಡರ್ ಮಿಚೆಲ್ ಮಾರ್ಷ್(6 ರನ್)ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ರಾಹುಲ್‌ಗೆ ಕ್ಯಾಚ್ ನೀಡಿದಾಗ ಆಸ್ಟ್ರೇಲಿಯ 38 ರನ್‌ಗೆ 5ನೇ ವಿಕೆಟ್ ಕಳೆದುಕೊಂಡಿತು.

ಕೊಹ್ಲಿ ಅವರಿಂದ ಜೀವದಾನ ಪಡೆದಿದ್ದ ಲ್ಯಾಬುಶೇನ್ 52 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಸಿರಾಜ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಾಯಕ ಬುಮ್ರಾ ತನ್ನ ಎರಡನೇ ಸ್ಪೆಲ್‌ನಲ್ಲಿ ಕಮಿನ್ಸ್ (3 ರನ್) ವಿಕೆಟನ್ನು ಪಡೆದು ಆಸ್ಟ್ರೇಲಿಯಕ್ಕೆ ಒತ್ತಡ ಹೇರಿದರು.

*ಭಾರತ 150 ರನ್‌ಗೆ ಆಲೌಟ್

ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕ ಬುಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲೆರಡು ಅವಧಿಯಲ್ಲಿ ವೇಗದ ಬೌಲರ್ ಜೋಶ್ ಹೇಝಲ್‌ವುಡ್(4-29)ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಸ್ವಿಂಗ್ ಬೌಲರ್‌ಗಳಾದ ಸ್ಟಾರ್ಕ್(2-24) , ಕಮಿನ್ಸ್(2-67) ಹಾಗೂ ಮಾರ್ಷ್(2-12)ತಲಾ ಎರಡು ವಿಕೆಟ್‌ಗಳನ್ನು ಪಡೆದು ಹೇಝಲ್‌ವುಡ್‌ಗೆ ಸಾಥ್ ನೀಡಿದರು.

ಭೋಜನ ವಿರಾಮದ ವೇಳೆಗೆ ಭಾರತ ತಂಡವು 73 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ರಿಷಭ್ ಪಂತ್ ಹಾಗೂ ಮೊದಲ ಪಂದ್ಯವನ್ನಾಡಿದ ನಿತಿಶ್ ಕುಮಾರ್ ರೆಡ್ಡಿ(41 ರನ್)8ನೇ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 150ಕ್ಕೆ ತಲುಪಿಸಿದರು.

ಬೌನ್ಸ್ ಆಗುತ್ತಿದ್ದ ಪಿಚ್‌ನಲ್ಲಿ ರನ್ ಗಳಿಸುವುದು ಸುಲಭವಾಗಿರಲಿಲ್ಲ. ಹೇಝಲ್‌ವುಡ್ ಹಾಗೂ ಸ್ಟಾರ್ಕ್ ಒಟ್ಟಿಗೆ 400 ಟೆಸ್ಟ್ ವಿಕೆಟ್‌ಗಳನ್ನು ಉರುಳಿಸಿದ ಆಸ್ಟ್ರೇಲಿಯದ ಮೊದಲ ಹೊಸ ಚೆಂಡಿನ ಬೌಲರ್ ಎಂಬ ಸಾಧನೆ ಮಾಡಿದ್ದಾರೆ.

21ರ ಹರೆಯದ ನಿತಿಶ್ ರೆಡ್ಡಿ ಭಾರತದ ಪರ ಸರ್ವಾಧಿಕ ಸ್ಕೋರ್(41 ರನ್) ಗಳಿಸಿದ್ದು, ತನ್ನ 59 ಎಸೆತಗಳ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯೊನ್ ಬೌಲಿಂಗ್‌ನ್ನು ಅವರು ದಿಟ್ಟವಾಗಿ ಎದುರಿಸಿದರು. ನಾಯಕ ಕಮಿನ್ಸ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದರು.

ತಂಡವು ಸಂಕಷ್ಟದಲ್ಲಿದ್ದಾಗ ಮತ್ತೊಮ್ಮೆ ಆಸರೆಯಾದ ಪಂತ್ ಅವರು ಕಮಿನ್ಸ್‌ಗೆ ವಿಕೆಟ್ ಒಪ್ಪಿಸುವ ಮೊದಲು 78 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 37 ರನ್ ಗಳಿಸಿದರು.

ಭಾರತ ತಂಡವು 51 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಾಗ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರ ತಿರುಗುಬಾಣವಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್(0), ರಾಹುಲ್(26 ರನ್), ದೇವದತ್ತ ಪಡಿಕ್ಕಲ್(0)ಹಾಗೂ ಸ್ಟಾರ್ ಬ್ಯಾಟರ್ ಕೊಹ್ಲಿ(5 ರನ್)ಲಂಚ್ ವಿರಾಮಕ್ಕೆ ಮೊದಲೇ ವಿಕೆಟ್ ಕೈಚೆಲ್ಲಿದರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಹುಲ್ 19 ರನ್ ಗಳಿಸಿದ್ದಾಗ ತನ್ನ 54ನೇ ಟೆಸ್ಟ್ ಪಂದ್ಯದಲ್ಲಿ 3,000 ಟೆಸ್ಟ್ ರನ್ ಪೂರೈಸಿದರು. ಸ್ಟಾರ್ಕ್ ಮೊದಲ ಐದು ಓವರ್ ಸ್ಪೆಲ್‌ನಲ್ಲಿ ಭಾರತದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಬಲಗೈ ಬ್ಯಾಟರ್ ಜೈಸ್ವಾಲ್ ರನ್ ಖಾತೆ ತೆರೆಯುವ ಮೊದಲೇ ಸ್ಟಾಕ್ ಬೌಲಿಂಗ್‌ನಲ್ಲಿ ನಾಥನ್ ಮೆಕ್‌ಸ್ವೀನಿಗೆ ಕ್ಯಾಚ್ ನೀಡಿದರು.

ಹೇಝಲ್‌ವುಡ್ 15 ಎಸೆತಗಳಲ್ಲಿ ಅಂತರದಲ್ಲಿ ದೇವದತ್ ಪಡಿಕ್ಕಲ್ ಹಾಗೂ ಕೊಹ್ಲಿ ವಿಕೆಟ್‌ಗಳನ್ನು ಉರುಳಿಸಿದರು. ಪಡಿಕ್ಕಲ್ 23 ಎಸೆತಗಳನ್ನು ಎದುರಿಸಿದರೂ ಶೂನ್ಯ ಸಂಪಾದಿಸಿದರು.

ಪರ್ತ್ ಸ್ಟೇಡಿಯಮ್‌ನಲ್ಲಿ ಮೊದಲ ದಿನದಾಟದಲ್ಲಿ ನೆರೆದಿದ್ದ ದಾಖಲೆಯ 31,302 ಪ್ರೇಕ್ಷಕರ ಭಾರೀ ಕರತಾಡನದೊಂದಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕೊಹ್ಲಿ ಅವರು 12 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿ ನಿರಾಶೆಗೊಳಿಸಿದರು.

ಭಾರತ ತಂಡವು ನಿತಿಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ನೀಡಿತು.

*ಮೊದಲ ದಿನದಾಟದ ಅಂಕಿ-ಅಂಶಗಳು

*ಆಸ್ಟ್ರೇಲಿಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಸ್ಕೋರ್

ಭಾರತ ತಂಡ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 150 ರನ್‌ಗೆ ಆಲೌಟಾಗಿದ್ದು, 24 ವರ್ಷಗಳ ನಂತರ ಆಸ್ಟ್ರೇಲಿಯ ನೆಲದಲ್ಲಿ ಕಡಿಮೆ ಸ್ಕೋರ್ ಗಳಿಸಿದೆ. ಈ ಹಿಂದೆ 2000ರಲ್ಲಿ ಸಿಡ್ನಿಯಲ್ಲಿ 150 ರನ್ ಗಳಿಸಿತ್ತು. ಆಸ್ಟ್ರೇಲಿಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಆರನೇ ಬಾರಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ.

*10 ವರ್ಷಗಳಲ್ಲಿ ಮೊದಲ ಸಲ ಕಡಿಮೆ ಓವರ್‌ಗಳನ್ನು ಎದುರಿಸಿದ ಭಾರತ

ಭಾರತ ತಂಡವು ವಿದೇಶಿ ಟೆಸ್ಟ್ ಸರಣಿಯಲ್ಲಿ ಮೊದಲ ದಿನದಾಟದಲ್ಲಿ 9ನೇ ಬಾರಿ ಸರ್ವಪತನಗೊಂಡಿದೆ. 2011ರ ನಂತರ ಮೊದಲ ಬಾರಿ 49.4 ಓವರ್‌ಗಳಲ್ಲಿ ತನ್ನಲ್ಲೇ ವಿಕೆಟ್ ಕಳೆದುಕೊಂಡಿದೆ.

*8ನೇ ಕ್ರಮಾಂಕದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ಸ್ಕೋರ್

ಬ್ಯಾಟಿಂಗ್ ಕ್ರಮಾಂಕ 8 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಚೊಚ್ಚಲ ಪಂದ್ಯ ಆಡಿರುವ ಹಲವು ಆಟಗಾರರು ಭಾರತದ ಪರ ಟಾಪ್ ಸ್ಕೋರರ್ ಎನಿಸಿದ್ದರು. ನಿತಿಶ್ ಕುಮಾರ್ ರೆಡ್ಡಿ ಈ ಅಪರೂಪದ ಸಾಧಕರ ಪಟ್ಟಿಗೆ ಸೇರಿದ್ದಾರೆ. ರೆಡ್ಡಿ ತನ್ನ ಮೊದಲ ಪಂದ್ಯದಲ್ಲಿ 41 ರನ್ ಗಳಿಸಿ ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಮಿಂಚಿದ್ದಾರೆ. ಈ ಮೂಲಕ ಅಮರ್ ಸಿಂಗ್, ದತ್ತು ಫಡ್ಕರ್, ಗೋಪಿನಾಥ್, ಬಲ್ವಿಂದರ್ ಸಂಧು ಹಾಗೂ ಸ್ಟುವರ್ಟ್ ಬಿನ್ನಿ ಅವರಿದ್ದ ಪಟ್ಟಿಗೆ ಸೇರಿದ್ದಾರೆ.

*ಬುಮ್ರಾ ಅಪರೂಪದ ಸಾಧನೆ

ಸ್ಟೀವ್ ಸ್ಮಿತ್‌ರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಶೂನ್ಯಕ್ಕೆ ಔಟ್ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿರುವ ಜಸ್‌ಪ್ರಿತ್ ಬುಮ್ರಾ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯದ ಹಿರಿಯ ಆಟಗಾರ ಸ್ಮಿತ್ ತಾನೆದುರಿಸಿದ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. 2014ರ ನಂತರ ಕ್ರಿಕೆಟ್‌ನಲ್ಲಿ ಈ ಸಾಧನೆ ಕಂಡುಬಂದಿದೆ. ಪೋರ್ಟ್ ಎಲಿಝಬೆತ್‌ನಲ್ಲಿ ದ.ಆಫ್ರಿಕಾದ ಡೇಲ್ ಸ್ಟೇಯ್ನ್ ಈ ಸಾಧನೆ ಮಾಡಿದ್ದರು.

*1980ರ ನಂತರ 2ನೇ ಬಾರಿ ಬೇಗನೆ 5 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯ

ಆಸ್ಟ್ರೇಲಿಯ ತಂಡವು 1980ರ ನಂತರ ಎರಡನೇ ಬಾರಿ ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 40 ರನ್ ಗಳಿಸುವ ಮೊದಲೇ ತನ್ನ ಮೊದಲ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. 2016ರಲ್ಲಿ ಹೊಬರ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 17 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

*1952ರ ನಂತರ ಒಂದೇ ದಿನ ಗರಿಷ್ಠ ವಿಕೆಟ್ ಪತನ

ಆಸ್ಟ್ರೇಲಿಯ ನೆಲದಲ್ಲಿ 1952ರ ನಂತರ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ 17 ವಿಕೆಟ್‌ಗಳು ಪತನಗೊಂಡಿವೆ.

*ಈ ವರ್ಷ ಐದನೇ ಬಾರಿ 160ರೊಳಗೆ ಆಲೌಟ್ ಆದ ಭಾರತ

ಭಾರತ ತಂಡ ಈ ವರ್ಷ ಆಡಿರುವ ಟೆಸ್ಟ್ ಪಂದ್ಯದಲ್ಲಿ 5ನೇ ಬಾರಿ 160 ರನ್‌ನೊಳಗೆ ಆಲೌಟಾಗಿದೆ. ಶುಕ್ರವಾರ ಗಳಿಸಿರುವ 150 ರನ್ ಕೂಡ ಇದರಲ್ಲಿ ಸೇರಿದೆ.

*ಮೊದಲ ಇನಿಂಗ್ಸ್‌ನಲ್ಲಿ ಜಂಟಿ ಕನಿಷ್ಠ ಸ್ಕೋರ್ ಗಳಿಸಿದ ಭಾರತ

ಭಾರತ ತಂಡವು ಪರ್ತ್‌ನಲ್ಲಿ 150 ರನ್ ಗಳಿಸಿದ್ದು, ಇದು ಮೊದಲ ಇನಿಂಗ್ಸ್‌ನಲ್ಲಿ ಜಂಟಿ ಕನಿಷ್ಠ ಸ್ಕೋರಾಗಿದೆ. 2000ರಲ್ಲಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು 150 ರನ್‌ಗೆ ಆಲೌಟಾಗಿತ್ತು. ಭಾರತ ತಂಡ 1947ರಲ್ಲಿ ಬ್ರಿಸ್ಬೇನ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಮೊದಲ ಬಾರಿ ಕನಿಷ್ಠ ಮೊತ್ತ(58 ರನ್)ಗಳಿಸಿ ಆಲೌಟಾಗಿತ್ತು.

*ಆಸ್ಟ್ರೇಲಿಯದಲ್ಲಿ ಗರಿಷ್ಠ ರನ್ ಗಳಿಸಿದ ರಿಷಭ್ ಪಂತ್

ರಿಷಭ್ ಪಂತ್ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಈ ತನಕ 661 ರನ್ ಗಳಿಸಿದ್ದು, ಆಸ್ಟ್ರೇಲಿಯ ನೆಲದಲ್ಲಿ ಗರಿಷ್ಠ ರನ್ ಗಳಿಸಿದ ಪ್ರವಾಸಿ ತಂಡದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಅಲನ್ ನಾಟ್ಸ್(643 ರನ್)ದಾಖಲೆಯನ್ನು ಮುರಿದಿದ್ದಾರೆ.

*ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸೊನ್ನೆ ಸುತ್ತಿದ ಭಾರತದ ಬ್ಯಾಟರ್‌ಗಳು

2024ರಲ್ಲಿ ಭಾರತದ 18 ಬ್ಯಾಟರ್‌ಗಳು ಶೂನ್ಯ ಸಂಪಾದಿಸಿದ್ದು, ದೇವದತ್ತ ಪಡಿಕ್ಕಲ್ ಹೊಸ ಸೇರ್ಪಡೆಯಾಗಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಬ್ಯಾಟರ್‌ಗಳು ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. 1983 ಹಾಗೂ 2008ರಲ್ಲಿ ತಲಾ 17 ಬಾರಿ ಶೂನ್ಯಕ್ಕೆ ಔಟಾಗಿದ್ದರು.

*ಕೆಳ ಕ್ರಮಾಂಕದಲ್ಲಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡ 7ನೇ ಬ್ಯಾಟರ್ ನಿತಿಶ್ ರೆಡ್ಡಿ

ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 8ನೇ ಇಲ್ಲವೇ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಭಾರತದ 7 ಬ್ಯಾಟರ್‌ಗಳು ಇನಿಂಗ್ಸ್‌ವೊಂದರಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ನಿತಿಶ್ ಕುಮಾರ್ ರೆಡ್ಡಿ ಹೊಸ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಸ್ಟುವರ್ಟ್ ಬಿನ್ನಿ ಇಂಗ್ಲೆಂಡ್ ವಿರುದ್ದ ಈ ಸಾಧನೆ ಮಾಡಿದ್ದರು.

*3,000 ರನ್ ಪೂರೈಸಿದ ಕೆ.ಎಲ್.ರಾಹುಲ್

ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ್ದು, ಈ ಸಾಧನೆ ಮಾಡಿದ ಭಾರತದ 26ನೇ ಬ್ಯಾಟರ್ ಎನಿಸಿಕೊಂಡರು.

*ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಪಂತ್ ವಿಕೆಟ್ ಪಡೆದ ಕಮಿನ್ಸ್

ಆಸ್ಟ್ರೇಲಿಯದ ವೇಗದ ಬೌಲರ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ರಿಷಭ್ ಪಂತ್‌ರನ್ನು ಔಟ್ ಮಾಡಿದ್ದಾರೆ. ಪಂತ್ ಅವರು 12 ಇನಿಂಗ್ಸ್‌ಗಳಲ್ಲಿ ಕಮಿನ್ಸ್‌ರನ್ನು ಎದುರಿಸಿದ್ದು, 168 ಎಸೆತಗಳಲ್ಲಿ 140 ರನ್ ಗಳಿಸಿದ್ದರು.

*50 ಎಸೆತಗಳನ್ನು ಎದುರಿಸಿ ಕನಿಷ್ಠ ಸ್ಕೋರ್ ಗಳಿಸಿದ ಲ್ಯಾಬುಶೇನ್

ಆಸ್ಟ್ರೇಲಿಯದ ಬ್ಯಾಟರ್ ಲ್ಯಾಬುಶೇನ್ 50 ಎಸೆತಗಳನ್ನು ಎದುರಿಸಿ ಕನಿಷ್ಠ ಸ್ಕೋರ್(2 ರನ್)ಗಳಿಸಿದರು. ಈ ಹಿಂದೆ 2023ರಲ್ಲಿ ಇಂಗ್ಲೆಂಡ್ ವಿರುದ್ಧ 5 ರನ್ ಗಳಿಸಿದ್ದರು.

*ಮೊದಲ ದಿನದಾಟದಲ್ಲಿ ಗರಿಷ್ಠ ಪ್ರೇಕ್ಷಕರ ಆಗಮನ

ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ಮೊದಲ ದಿನದಾಟದಲ್ಲಿ 31,302 ಪ್ರೇಕ್ಷಕರು ಹಾಜರಾಗಿದ್ದಾರೆ. ಇದೊಂದು ದಾಖಲೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News