ಬಾರ್ಡರ್-ಗವಾಸ್ಕರ್ ಟ್ರೋಫಿ | ಶುಕ್ರವಾರದಿಂದ ಮೊದಲ ಟೆಸ್ಟ್ ಆರಂಭ : ಭಾರತ-ಆಸ್ಟ್ರೇಲಿಯ ಹಣಾಹಣಿ
ಪರ್ತ್ :ಬಹುನಿರೀಕ್ಷಿತ ಭಾರತ-ಆಸ್ಟ್ರೇಲಿಯ ಕ್ರಿಕೆಟ್ ತಂಡಗಳ ನಡುವೆ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯು ಪರ್ತ್‌ನಲ್ಲಿ ಶುಕ್ರವಾರ ಆರಂಭವಾಗಲಿದೆ.
ಆಸ್ಟ್ರೇಲಿಯ ತಂಡ ತನ್ನ ತವರು ನೆಲದಲ್ಲಿ ಭಾರತ ವಿರುದ್ಧ ಸತತ ಮೂರನೇ ಸರಣಿಯಲ್ಲಿ ಸೋಲು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಸ್ವದೇಶದಲ್ಲಿ 2012ರ ನಂತರ ಮೊದಲ ಬಾರಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಟೆಸ್ಟ್ ಸರಣಿಯನ್ನು ಸೋತ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಬಂದಿರುವ ಭಾರತ ತನ್ನ ತಪ್ಪು ತಿದ್ದಿಕೊಳ್ಳುವ ವಿಶ್ವಾಸದಲ್ಲಿದೆ.
ಇತ್ತೀಚೆಗೆ ಕಿವೀಸ್ ವಿರುದ್ಧ ಹೀನಾಯವಾಗಿ ಸೋತಿದ್ದರೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಪುಟಿದೇಳುವ ಛಾತಿ ಹೊಂದಿರುವ ಭಾರತ ತಂಡವು ಉತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸುವ ವಿಶ್ವಾಸದಲ್ಲಿದೆ.
2014-15ರಲ್ಲಿ ಕೊನೆಯ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಜಯಿಸಿರುವ ಆಸ್ಟ್ರೇಲಿಯ ತಂಡವು ಆನಂತರ ಭಾರತ ವಿರುದ್ಧ ಸ್ವದೇಶದಲ್ಲಿ ಸತತ ಎರಡು ಸರಣಿಗಳನ್ನು ಕಳೆದುಕೊಂಡಿತ್ತು. ಇದೀಗ ಪ್ಯಾಟ್ ಕಮಿನ್ಸ್ ಪಡೆ 20 ವರ್ಷಗಳ ನಂತರ ಪ್ರಶಸ್ತಿಯನ್ನು ಮರಳಿ ಪಡೆಯುವ ಕನಸು ಕಾಣುತ್ತಿದೆ.
ಈ ಸರಣಿಯು ಭಾರತದ ಹಲವು ಆಟಗಾರರಿಗೆ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕೊಹ್ಲಿ ಅವರು ಆಸ್ಟ್ರೇಲಿಯದಲ್ಲಿ ಉತ್ತಮ ದಾಖಲೆ ಹೊಂದಿದ್ದು, 2014ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ 4 ಶತಕಗಳನ್ನು ಸಿಡಿಸಿದ್ದರು. ರೋಹಿತ್ ಶರ್ಮಾ ವೈಯಕ್ತಿಕ ಕಾರಣಕ್ಕೆ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಜಸ್‌ಪ್ರಿತ್ ಬುಮ್ರಾ ತಂಡದ ನಾಯಕತ್ವವಹಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತವು ಹಲವು ಆಟಗಾರರಿಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಅವರು ಯಶಸ್ವಿ ಜೈಸ್ವಾಲ್‌ರೊಂದಿಗೆ ಇನಿಂಗ್ಸ್ ಅರಂಭಿಸುವ ನಿರೀಕ್ಷೆ ಇದೆ. ಅಭ್ಯಾಸದ ಪಂದ್ಯದ ವೇಳೆ 3ನೇ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಹೆಬ್ಬೆರಳಿಗೆ ಗಾಯವಾಗಿದ್ದು, ಸರಣಿಯ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
ಕಳೆದ ಎರಡು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ವಿರುದ್ಧ ಸೋತಿರುವ ಆಸ್ಟ್ರೇಲಿಯ ತಂಡ ಮರು ಹೋರಾಟ ನೀಡಲು ಯೋಚಿಸುತ್ತಿದೆ. ಆಸ್ಟ್ರೇಲಿಯ ತಂಡವು ಜಸ್‌ಪ್ರಿತ್ ಬುಮ್ರಾ ನೇತೃತ್ವದ ಭಾರತದ ಬಲಿಷ್ಠ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗಿದೆ.
ಎರಡೂ ತಂಡಗಳ ಬ್ಯಾಟಿಂಗ್ ವಿಭಾಗಗಳು ಅಸ್ಥಿರ ಪ್ರದರ್ಶನ ನೀಡುತ್ತಿವೆ. ಹಲವು ಆಟಗಾರರು ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಪರದಾಟ ನಡೆಸುತ್ತಿದ್ದಾರೆ.
ಮುಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ವೇಗದ ಬೌಲಿಂಗ್‌ನಲ್ಲಿ ಬುಮ್ರಾಗೆ ಸಾಥ್ ನೀಡುವ ಸಾಧ್ಯತೆ ಇದೆ. ಪ್ರಸಿದ್ಧ ಕೃಷ್ಣ ಹಾಗೂ ಹರ್ಷಿತ್ ರಾಣಾ ಕೂಡ ಆಡುವ ಬಳಗಕ್ಕೆ ಸೇರುವ ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉಸ್ಮಾನ್ ಖ್ವಾಜಾ ಹಾಗೂ ಅಲೆಕ್ಸ್ ಕ್ಯಾರಿ ಹೊರತುಪಡಿಸಿ ಉಳಿದವರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಭಾರತ ತಂಡವು ಅನುಭವಿ ಬ್ಯಾಟರ್‌ಗಳಾದ ರಿಷಭ್ ಪಂತ್ ಹಾಗೂ ಕೆ.ಎಲ್.ರಾಹುಲ್ ಜೊತೆಗೆ ಭರವಸೆಯ ಯುವ ಪ್ರತಿಭೆಗಳಾದ ಯಶಸ್ವಿ ಜೈಸ್ವಾಲ್, ದೇವದತ್ತ ಪಡಿಕ್ಕಲ್ ಹಾಗೂ ಧ್ರುವ ಜುರೆಲ್ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಒಂದು ವೇಳೆ, ಈ ಎಲ್ಲ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ನೀಡಿದರೆ ಆಸ್ಟ್ರೇಲಿಯದ ಬೌಲಿಂಗ್ ದಾಳಿಗೆ ಭಾರತ ಹೆಚ್ಚು ಸವಾಲಾಗಬಹುದು.
ಒಟ್ಟಾರೆ ಈ ಸರಣಿಯು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದ್ದು, ಎರಡೂ ತಂಡಗಳು ಪ್ರಾಬಲ್ಯವನ್ನು ಮೆರೆದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿವೆ. ಭಾರತ ಡಬ್ಲ್ಯುಟಿಸಿ ಫೈನಲ್ ನಲ್ಲಿ ಸ್ಥಾನ ಪಡೆಯಲು ಪ್ರಸಕ್ತ ಸರಣಿಯನ್ನು 4-0 ಅಂತರದಿಂದ ಗೆಲ್ಲುವುದು ಅನಿವಾರ್ಯವಾಗಿದೆ.
ಎರಡನೇ ಟೆಸ್ಟ್ ಪಂದ್ಯವು ಅಡಿಲೇಡ್ ಓವಲ್‌ನಲ್ಲಿ ಡಿ.6ರಿಂದ 10ರ ತನಕ ನಡೆಯಲಿದೆ. ಬ್ರಿಸ್ಬೇನ್‌ನ ಗಾಬಾ ಸ್ಟೇಡಿಯಮ್‌ನಲ್ಲಿ ಡಿ.14ರಿಂದ 18ರ ತನಕ 3ನೇ ಟೆಸ್ಟ್ ನಿಗದಿಯಾಗಿದೆ.
ಪ್ರತಿಷ್ಠಿತ ಬಾಕ್ಸಿಂಗ್ ಡೇ ಟೆಸ್ಟ್ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಡಿ.26ರಿಂದ 30ರ ತನಕ ನಡೆಯಲಿದೆ. 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನವರಿ 3ರಿಂದ 7ರ ತನಕ ನಡೆಯುವುದು.
ತಂಡಗಳು
ಭಾರತ: ಯಶಸ್ವಿ ಜೈಶ್ವಾಲ್, ಕೆ.ಎಲ್.ರಾಹುಲ್, ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತಿಶ್ ರೆಡ್ಡಿ, ಆರ್.ಅಶ್ವಿನ್, ಆಕಾಶ್ ದೀಪ್, ಜಸ್‌ಪ್ರಿತ್ ಬುಮ್ರಾ(ನಾಯಕ), ಮುಹಮ್ಮದ್ ಸಿರಾಜ್, ಸರ್ಫರಾಝ್ ಖಾನ್, ಪ್ರಸಿದ್ಧ ಕೃಷ್ಣ, ರವೀಂದ್ರ ಜಡೇಜ, ಹರ್ಷಿತ್ ರಾಣಾ, ವಾಶಿಂಗ್ಟನ್ ಸುಂದರ್, ಅಭಿಮನ್ಯು ಈಶ್ವರನ್.
ಆಸ್ಟ್ರೇಲಿಯ: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್(ನಾಯಕ), ನಾಥನ್ ಲಿಯೊನ್, ಜೋಶ್ ಹೇಝಲ್‌ವುಡ್, ಜೋಶ್ ಇಂಗ್ಲಿಸ್, ಸ್ಕಾಟ್ ಬೋಲ್ಯಾಂಡ್.
ಪಂದ್ಯ ಆರಂಭದ ಸಮಯ: ಬೆಳಗ್ಗೆ 7:50 (ಭಾರತದ ಕಾಲಮಾನ)
ಭಾರತದಲ್ಲಿ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಡಿಡಿ ಸ್ಪೋರ್ಟ್ಸ್.