ಬಾರ್ಡರ್-ಗವಾಸ್ಕರ್ ಟ್ರೋಫಿ | ಮುಂದುವರಿದ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ
ಪರ್ತ್: ಇಲ್ಲಿ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿಯ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದ ಭಾರತ ತಂಡವು, ಇತ್ತೀಚಿನ ವರದಿಗಳ ಪ್ರಕಾರ, ಆರು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು, ಕೇವಲ 5 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಕೆಟ್ ಅನ್ನು ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ನೇಥನ್ ಮೆಕ್ ಸ್ವೀನಿಗೆ ಕ್ಯಾಚಿತ್ತು ಯಾವುದೇ ರನ್ ಗಳಿಸದೆ ಅವರು ನಿರ್ಗಮಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್ 23 ಬಾಲ್ ಗಳನ್ನು ಎದುರಿಸಿದರೂ, ಯಾವುದೇ ರನ್ ಗಳಿಸಲಾಗದೆ, ಜೋಶ್ ಹೇಝಲ್ ವುಡ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಭಾರತದ ಭರವಸೆಯ ಬ್ಯಾಟರ್ ವಿರಾಟ್ ಕೊಹ್ಲಿ ಕೂಡಾ ಹೆಚ್ಚು ಹೊತ್ತು ನಿಲ್ಲದೆ, ಕೇವಲ ಐದು ರನ್ ಗಳಿಸಿ ಔಟಾದರು.
ಮತ್ತೊಂದೆಡೆ ತಾಳ್ಮೆಯ ಆಟವಾಡುತ್ತಿದ್ದ ಕೆ.ಎಲ್.ರಾಹುಲ್ ಕೂಡಾ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ಪೆವಿಲಿಯನ್ ಗೆ ಮರಳಿದರು. ಅವರು 74 ಬಾಲ್ ಗಳನ್ನು ಎದುರಿಸಿ, 26 ರನ್ ಗಳಿಸಲಷ್ಟೆ ಶಕ್ತರಾದರು.
ಸದ್ಯ ಕ್ರೀಸಿನಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 25 ರನ್ ಗಳಿಸಿ ಆಡುತ್ತಿದ್ದಾರೆ. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ 10 ರನ್ ಗಳಿಸಿದ್ದಾರೆ.