ಕೆನಡವನ್ನು 12-0 ಗೋಲಿನಿಂದ ಸೋಲಿಸಿದ ಭಾರತ

Update: 2023-11-30 16:41 GMT

Image credit: gsport4girls

ಸಾಂಟಿಯಾಗೊ (ಚಿಲಿ): ಚಿಲಿ ದೇಶದ ಸಾಂಟಿಯಾಗೊದಲ್ಲಿ ನಡೆಯುತ್ತಿರುವ ಎಫ್ಐಎಚ್ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್ನಲ್ಲಿ ಭಾರತ ಭರ್ಜರಿ ಆರಂಭವನ್ನು ದಾಖಲಿಸಿದೆ. ಬುಧವಾರ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಅದು ಕೆನಡವನ್ನು 12-0 ಗೋಲುಗಳಿಂದ ಸೋಲಿಸಿದೆ.

ಭಾರತದ ಪರವಾಗಿ ಅನು 4, 6 ಮತ್ತು 39ನೇ ನಿಮಿಷಗಳಲ್ಲಿ, ದೀಪಿ ಮೋನಿಕ ಟೊಪ್ಪೊ 21ನೇ ನಿಮಿಷದಲ್ಲಿ, ಮಮ್ತಾಝ್ ಖಾನ್ 26, 41, 54 ಮತ್ತು 60ನೇ ನಿಮಿಷಗಳಲ್ಲಿ, ದೀಪಿಕಾ ಸೊರೆಂಗ್ 34, 50 ಮತ್ತು 54ನೇ ನಿಮಿಷಗಳಲ್ಲಿ ಮತ್ತು ನೀಲಮ್ 45ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ಭಾರತವು ಆಕ್ರಮಣಶೀಲತೆಯೊಂದಿಗೆ ಪಂದ್ಯವನ್ನು ಆರಂಭಿಸಿತು ಹಾಗೂ ಬೇಗನೇ ಅದರ ಪ್ರಯೋಜನವನ್ನು ಪಡೆದುಕೊಂಡಿತು. ಅನು ಪೆನಾಲ್ಟಿ ಕಾರ್ನರ್ಗಳ ಮೂಲಕ ಎರಡು ಕ್ಷಿಪ್ರ ಗೋಲುಗಳನ್ನು ಬಾರಿಸಿದರು.

ನಂತರವೂ ಭಾರತವು ತನ್ನ ಆಕ್ರಮಣಶೀಲತೆಯನ್ನು ಮುಂದುವರಿಸಿತು, ಕೆನಡದ ಮೇಲೆ ನಿರಂತರವಾಗಿ ಒತ್ತಡ ಹೇರಿತು. ಆದರೂ ಮೊದಲ ಕ್ವಾರ್ಟರ್ನಲ್ಲಿ ಹೆಚ್ಚಿನ ಗೋಲುಗಳನ್ನು ಗಳಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್ 2-0 ಗೋಲಿನೊಂದಿಗೆ ಪೂರ್ಣಗೊಂಡಿತು.

ಮೊದಲ ಕ್ವಾರ್ಟರ್ನ ಗತಿಯನ್ನು ಭಾರತವು ಎರಡನೇ ಕ್ವಾರ್ಟರ್ಗೂ ಒಯ್ದಿತು. ಭಾರತ ತನ್ನ ಪ್ರಭಾವಿ ಆಟವನ್ನು ಮುಂದುವರಿಸಿತು. ದೀಪಿ ಮೋನಿಕ ಟೊಪ್ಪೊ ಮತ್ತು ಮಮ್ತಾಝ್ ಖಾನ್ ತಲಾ ಒಂದು ಗೋಲು ಬಾರಿಸಿದರು.

ಈ ನಡುವೆ, ಕೆನಡ ಒಂದು ಪೆನಾಲ್ಟಿ ಕಾರ್ನರನ್ನು ಗೆದ್ದಿತಾದರೂ, ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಎರಡನೇ ಕ್ವಾರ್ಟರ್ ಮುಕ್ತಾಯಗೊಂಡಾಗ, ಭಾರತ 4-0 ಗೋಲುಗಳ ಮುನ್ನಡೆಯಲ್ಲಿತ್ತು.

ಉತ್ತಮ ಮುನ್ನಡೆಯಲ್ಲಿದ್ದರೂ, ಭಾರತ ತಂಡವು ಮೂರನೇ ಕ್ವಾರ್ಟರ್ನಲ್ಲಿ ನಿಧಾನ ಗತಿಯ ಆಟದ ಸುಳಿವನ್ನೇ ನೀಡಲಿಲ್ಲ. ದೀಪಿಕಾ ಸೊರೆಂಗ್ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸಿದರು. ಅನು ತನ್ನ ಮೂರನೇ ಗೋಲನ್ನು ಬಾರಿಸಿದರು ಮತ್ತು ಮಮ್ತಾಝ್ ಖಾನ್ ಎರಡನೇ ಗೋಲು ಗಳಿಸಿದರು.

ನೀಲಮ್ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. ಮೂರನೇ ಕ್ವಾರ್ಟರ್ ಮುಕ್ತಾಯಗೊಂಡಾಗ ಭಾರತ 8-0 ಗೋಲಿನಿಂದ ಮುಂದಿತ್ತು.

ನಾಲ್ಕನೇ ಕ್ವಾರ್ಟರ್ನಲ್ಲೂ ಭಾರತದ ಪಾರಮ್ಯ ಮುಂದುವರಿಯಿತು. ದೀಪಿಕಾ ಸೊರೆಂಗ್ ಮತ್ತು ಮಮ್ತಾಝ್ ಖಾನ್ ತಮ್ಮ ಹ್ಯಾಟ್ರಿಕ್ಗಳನ್ನು ಪೂರ್ಣಗೊಳಿಸಿದರು.

ಭಾರತವು ಇನ್ನು ಶುಕ್ರವಾರ ಜರ್ಮನಿಯನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News