ಡೆನ್ಮಾರ್ಕ್ ಓಪನ್: ಮಾತಿನ ಚಕಮಕಿಯಲ್ಲಿ ತೊಡಗಿದ ಪಿ.ವಿ. ಸಿಂಧು, ಮರಿನ್‌ಗೆ ಹಳದಿ ಕಾರ್ಡ್

Update: 2023-10-21 16:17 GMT

Screeshot X/ThongWeeDaphne

ಹೊಸದಿಲ್ಲಿ: ಭಾರತದ ಶಟ್ಲರ್ ಪಿ.ವಿ. ಸಿಂಧು ತನ್ನ ಹಳೆಯ ಎದುರಾಳಿ ಸ್ಪೇನ್‌ನ ಕರೊಲಿನಾ ಮರಿನ್ ವಿರುದ್ಧ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಮೆಂಟ್‌ನ ಸೆಮಿ ಫೈನಲ್‌ನಲ್ಲಿ ಮೂರು ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಪಂದ್ಯದ ವೇಳೆ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಇಬ್ಬರು ಆಟಗಾರ್ತಿಯರಿಗೆ ಹಳದಿ ಕಾರ್ಡ್ ನೀಡಲಾಗಿದೆ.

ಒಂದು ಗಂಟೆ, 13 ನಿಮಿಷಗಳ ಕಾಲ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಮರಿನ್ ವಿರುದ್ಧ 18-21, 21-19, 7-21 ಗೇಮ್‌ಗಳ ಅಂತರದಿಂದ ಸಿಂಧು ಸೋತಿದ್ದಾರೆ. ಸಿಂಧು ಸತತ 5ನೇ ಬಾರಿ ಮರಿನ್‌ ವಿರುದ್ಧ ಸೋತಿದ್ದಾರೆ.

ತಮ್ಮಿಬ್ಬರ ನಡುವೆ ಉತ್ತಮ ಒಡನಾಟವಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಈ ಇಬ್ಬರು ಆಟಗಾರ್ತಿಯರು ಸೆಮಿ ಫೈನಲ್ ಪಂದ್ಯದುದ್ದಕ್ಕೂ ಮಾತಿನ ಚಕಮಕಿಯಲ್ಲಿ ತೊಡಗಿದರು. ಈ ವೇಳೆ ಅವರಿಬ್ಬರ ಉತ್ತಮ ಒಡನಾಟ ಎಲ್ಲೂ ಪ್ರದರ್ಶಿತವಾಗಲಿಲ್ಲ.

ಇಬ್ಬರೂ ಆಟಗಾರ್ತಿಯರಿಗೆ ಹಳದಿ ಕಾರ್ಡ್ ನೀಡುವ ಮೊದಲು ಅಂಪೈರ್‌ಗಳು ಹಲವು ಬಾರಿ ಅಶಿಸ್ತಿನಿಂದ ವರ್ತಿಸದಂತೆ ಮೌಖಿಕ ಎಚ್ಚರಿಕೆಯನ್ನು ನೀಡಿದ್ದರು. ಅಂಕಗಳನ್ನು ಗೆದ್ದ ನಂತರ ಸಂಭ್ರಮಾಚರಣೆಯನ್ನು ಕಡಿಮೆ ಮಾಡುವಂತೆ ಅಂಪೈರ್ ಮೊದಲಿಗೆ ಇಬ್ಬರಿಗೂ ತಿಳಿಸಿದ್ದರು. ಆದರೆ, ಮರಿನ್ ಕಿರಿಚುತ್ತಾ ಸಂಭ್ರಮಿಸುವುದನ್ನು ಮುಂದುವರಿಸಿದರು.

ಮತ್ತೊಂದೆಡೆ ಸರ್ವ್‌ಗಳನ್ನು ಸ್ವೀಕರಿಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಸಿಂಧುಗೆ ಎರಡು ಬಾರಿ ಎಚ್ಚರಿಕೆ ನೀಡಲಾಯಿತು. ಮೊದಲ ಗೇಮ್‌ನ್ನು 21-18ರಿಂದ ಗೆದ್ದುಕೊಂಡ ನಂತರ ಮರಿನ್ ಹೆಚ್ಚು ಸಂಭ್ರಮಿಸಿದರು. ಆಗ ಅವರಿಗೆ 2 ಬಾರಿ ಎಚ್ಚರಿಕೆ ನೀಡಲಾಯಿತು. ನಿರ್ಣಾಯಕ ಗೇಮ್‌ನಲ್ಲಿ ತ್ವರಿತವಾಗಿ ಸರ್ವ್ ಸ್ವೀಕರಿಸಲು ಸಿದ್ಧರಾಗುವಂತೆ ಅಂಪೈರ್ ಅವರು ಸಿಂಧುಗೆ ಛೀಮಾರಿ ಹಾಕಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಂಧು, ಅವರಿಗೆ(ಮರಿನ್)ಕೂಗಾಡಲು ಅವಕಾಶ ಮಾಡಿ ಕೊಟ್ಟಿದ್ದೀರಿ. ನೀವು ಅವರಿಗೆ ಎಚ್ಚರಿಕೆ ನೀಡಿ, ನಾನು ಆಮೇಲೆ ರೆಡಿಯಾಗುತ್ತೇನೆ ಎಂದು ಹೇಳಿದರು.

ಆನಂತರ ಶಟಲ್ ಸಿಂಧುವಿನ ಕೋರ್ಟ್‌ನಲ್ಲಿ ಬಿತ್ತು. ಅದನ್ನು ಹೆಕ್ಕಿಕೊಳ್ಳಲು ಇಬ್ಬರೂ ಧಾವಿಸಿದರು. ಆಗ ಇಬ್ಬರ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆಯಿತು. ಚೇರ್ ಅಂಪೈರ್ ಇಬ್ಬರನ್ನು ಕರೆದು ಹಳದಿ ಕಾರ್ಡ್ ನೀಡಿದರು. ಸಿಂಧು ಕೋರ್ಟ್‌ನಲ್ಲಿದ್ದ ಶಟಲ್ ಹೆಕ್ಕಿಕೊಳ್ಳದಂತೆ ಮರಿನ್‌ಗೆ ತಿಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News