ತೇವಗೊಂಡಿರುವ ಮೈದಾನ, ಭಾರತ-ಕೆನಡಾ ಪಂದ್ಯ ರದ್ದು
ಫ್ಲೋರಿಡಾ : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮೈದಾನ ತೇವಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಕೆನಡಾ ನಡುವೆ ಸೆಂಟ್ರಲ್ ಬ್ರೊವರ್ಡ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಬೇಕಾಗಿದ್ದ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ.
ಪಂದ್ಯ ರದ್ದಾಗಿರುವ ಕಾರಣ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಭಾರತವು 4 ಪಂದ್ಯಗಳಲ್ಲಿ ಒಟ್ಟು 7 ಅಂಕ ಗಳಿಸಿ ತನ್ನ ಗ್ರೂಪ್ ಹಂತದ ಅಭಿಯಾನ ಮುಗಿಸಿದೆ. ಕೆನಡಾ 4 ಪಂದ್ಯಗಳಲ್ಲಿ 3 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.
ಭಾರತ ಕ್ರಿಕೆಟ್ ತಂಡ ಜೂನ್ 20ರಂದು ಗ್ರೂಪ್-1ರ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬ್ರಿಡ್ಜ್‌ಟೌನ್‌ನಲ್ಲಿ ಎದುರಿಸಲಿದೆ. ಆ ನಂತರ ಜೂನ್ 22(ಬಾಂಗ್ಲಾದೇಶ ಅಥವಾ ನೆದರ್‌ಲ್ಯಾಂಡ್ಸ್) ಹಾಗೂ ಜೂ.24 ರಂದು ಆಸ್ಟ್ರೇಲಿಯ ವಿರುದ್ದ ಸೂಪರ್-8 ಪಂದ್ಯವನ್ನು ಆಡಲಿದೆ.
ಫ್ಲೋರಿಡಾದಲ್ಲಿ ನಿಗದಿಯಾಗಿರುವ ಈ ಹಿಂದಿನ ಎರಡೂ ಪಂದ್ಯಗಳು ಮಳೆಯ ಕಾರಣಕ್ಕೆ ರದ್ದುಗೊಂಡಿದ್ದವು.
ಎ ಗುಂಪಿನ ಪಂದ್ಯ ಆರಂಭವಾಗುವ ಸಮಯ ರಾತ್ರಿ 8 ಗಂಟೆಗೆ ಅಂಪೈರ್‌ಗಳು ಮೈದಾನವನ್ನು ಪರಿಶೀಲಿಸಿದ್ದಾರೆ. ಆ ನಂತರ ರಾತ್ರಿ 9ಕ್ಕೆ ಎರಡನೇ ಬಾರಿ ಮೈದಾನವನ್ನು ಪರಿಶೀಲಿಸಿದ ನಂತರ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಎ ಗುಂಪಿನಲ್ಲಿ ಆಡಿರುವ ಎಲ್ಲ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಭಾರತವು ಈಗಾಗಲೇ ಟೂರ್ನಮೆಂಟ್‌ನ ಸೂಪರ್-8 ಹಂತಕ್ಕೆ ತೇರ್ಗಡೆಯಾಗಿದೆ. ಮತ್ತೊಂದೆಡೆ ಕೆನಡಾ ಟೂರ್ನಿಯಿಂದಲೇ ನಿರ್ಗಮಿಸಿದೆ. ಹಾಗಾಗಿ ಈ ಪಂದ್ಯ ಔಪಚಾರಿಕತೆಗಷ್ಟೇ ಸೀಮಿತವಾಗಿತ್ತು.
ಕಳೆದ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಅಲ್ಲದೆ ಈಗಾಗಲೇ ಸೂಪರ್-8ರ ಹಂತಕ್ಕೆ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಉಳಿದ ಆಟಗಾರರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಒದ್ದೆಗೊಂಡಿರುವ ಮೈದಾನದಿಂದಾಗಿ ಟಾಸ್ ಚಿಮ್ಮಲು ಸಾಧ್ಯವಾಗಲಿಲ್ಲ.
ಶುಕ್ರವಾರ ಅಮೆರಿಕ-ಐರ್‌ಲ್ಯಾಂಡ್ ನಡುವೆ ನಡೆಯಬೇಕಾಗಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಅಮೆರಿಕ ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಸೂಪರ್-8 ಹಂತಕ್ಕೇರಿದೆ. ಪಾಕಿಸ್ತಾನ ತಂಡ ಸೂಪರ್-8 ಸ್ಪರ್ಧೆಯಿಂದ ಹೊರ ನಡೆದಿತ್ತು.
ರವಿವಾರ ಪಾಕಿಸ್ತಾನ ತಂಡವು ಐರ್‌ಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ಎ ಗುಂಪಿನ ಪಂದ್ಯಗಳು ಮುಕ್ತಾಯವಾಗಲಿವೆ. ಈ ಎರಡು ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಗುಳಿದಿವೆ.