ಬರ ಎದುರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ: ಕೋಟ ಶ್ರೀನಿವಾಸ ಪೂಜಾರಿ

State govt complete failure to deal with drought: Kota

Update: 2023-11-06 10:44 GMT

ಉಡುಪಿ, ನ.5: ರಾಜ್ಯದ ಸುಮಾರು 216 ತಾಲೂಕುಗಳು ಬರ ಪೀಡಿತ ವಾಗಿದ್ದು, ಬರದ ಭೀಕರತೆಯನ್ನು ಎದುರಿಸಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ರಾಜ್ಯದಲ್ಲಿ ಅಂದಾಜು 33 ಸಾವಿರ ಕೋಟಿ ನಷ್ಟ ಆಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ 5ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದು ಬಿಟ್ಟು, ಆಂತರಿಕ ಜಗಳ, ಡಿನ್ನರ್ ಪಾರ್ಟಿ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ. ರೈತರು, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇವರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದರು.

ಇವರು ತಮ್ಮ ಮುಖ, ಗೌರವ ಉಳಿಸಿಕೊಳ್ಳಲು ಕೇಂದ್ರವನ್ನು ದೂರುತ್ತಿದ್ದಾರೆ. ಪ್ರಧಾನ ಮಂತ್ರಿ ಭೇಟಿ ನೀಡಿಲ್ಲ, ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ ಎಂಬ ತಪ್ಪು ಮಾಹಿತಿಯನ್ನು ರಾಜ್ಯದ ಜನತೆ ಮುಂದೆ ಹೇಳುತ್ತಿದ್ದಾರೆ. ಈ ಮೂಲಕ ಇವರು ಕೇಂದ್ರ ಸರಕಾರವನ್ನು ದೂರುವುದರಲ್ಲಿ ಮಗ್ನರಾಗಿದ್ದಾರೆ ಎಂದು ಅವರು ಟೀಕಿಸಿದರು.

ಬರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ 17 ತಂಡಗಳನ್ನು ರಚಿಸಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಅಧ್ಯಯನ ಮಾಡಲಾಗುವುದು. ಆದುದರಿಂದ ರಾಜ್ಯ ಸರಕಾರ ತಕ್ಷಣವೇ 5000ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆಗೊಳಿಸಿ ರೈತರ ನೆರವಿಗೆ ಧಾವಿಸಬೇಕೆಂದು ಅವರು ಒತ್ತಾಯಿಸಿದರು.

ಸರಕಾರ ಅಸ್ಥಿರ: ವಿಪಕ್ಷ ನಾಯಕನ ಆಯ್ಕೆ ವಿಳಂಬ

ರಾಜ್ಯ ಸರಕಾರ ಸದ್ಯ ಅಸ್ಥಿತರವಾಗಿದೆ. ಆದುದರಿಂದ ವಿಪಕ್ಷ ನಾಯಕನ ಆಯ್ಕೆಯಲ್ಲಿ ನಮ್ಮ ಹೈಕಮಾಂಡ್ ವಿಳಂಬ ಮಾಡುತ್ತಿರಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಷ್ಟ್ರೀಯ ಪಕ್ಷಕ್ಕೆ ಹೈಕಮಾಂಡ್ ಎಂಬುದು ಇರುತ್ತದೆ. ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಪ್ರಜಾಪ್ರಪಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕ ಎಂಬುದು ಅತೀ ಅಗತ್ಯ. ಬೇರೆ ಬೇರೆ ಕಾರಣಕ್ಕೆ ವಿಪಕ್ಷ ನಾಯಕರ ಆಯ್ಕೆ ವಿಳಂಬವಾಗಿದೆ. ಅದರ ಅರ್ಥ ನಮ್ಮಲ್ಲಿ ನಾಯಕನೇ ಇಲ್ಲ ಎಂಬುದು ಅಲ್ಲ. ಆದಷ್ಟು ಬೇಗ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News