ನಿರ್ಮಾಪಕ ಎಂ. ಎನ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಸುದೀಪ್; ಅರ್ಜಿ ವಿಚಾರಣೆ ಆ.17ಕ್ಕೆ
ಬೆಂಗಳೂರು, ಜು.15: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿರುವ ಸಿನೆಮಾ ನಿರ್ಮಾಪಕ ಎನ್.ಎಂ. ಕುಮಾರ್ ಹಾಗೂ ಸುರೇಶ್ ವಿರುದ್ಧ ನಟ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಈ ಸಂಬಂಧ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಆಗಸ್ಟ್ 17ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಶನಿವಾರ ನಗರದ ಕಾರ್ಪೊರೇಷನ್ ಬಳಿ ಇರುವ ಎಸಿಎಂಎಂ ನ್ಯಾಯಾಲಯಕ್ಕೆ ಖುದ್ದಾಗಿ ಆಗಮಿಸಿದ ನಟ ಸುದೀಪ್, ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು. ಆನಂತರು ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಆಗಸ್ಟ್ 17ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
ಈ ಕುರಿತು ಪ್ರತಿಕ್ರಿಯಿಸಿದ ಸುದೀಪ್, ‘ನಾನು ಕಲಾವಿದನಾಗಬೇಕು ಎಂದುಕೊಂಡವನು. ಎಲ್ಲರ ಕಷ್ಟ ಪರಿಹರಿಸುವ ಚಾರಿಟೇಬಲ್ ಟ್ರಸ್ಟ್ ತೆರೆದವನಲ್ಲ. ಒಬ್ಬರ ತಪ್ಪು ಆರೋಪದಿಂದ ನಾನು ಇಲ್ಲಿ ಬಂದಿದ್ದೇನೆ, ಪುನಃ ಬರಬೇಕಾಗಿ ಬಂದಲ್ಲಿ ಬರುತ್ತೇನೆ. ಆದರೆ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಎಂದು ಹೇಗೆ ಬೇಕು ಹಾಗೆ ಮಾತನಾಡಬಾರದು’ ಎಂದರು.
‘ಯಾರು ಏನೇ ಆರೋಪ ಮಾಡಿದರೂ ಸಹ ಕೋರ್ಟ್ ನಿಂದ ಸರಿಯಾದ ಉತ್ತರ ಸಿಗುತ್ತದೆ. ಯಾವುದೇ ಸುಳ್ಳಿರಲಿ, ಸತ್ಯವಿರಲಿ ಬಹಿರಂಗವಾಗಿ ಹೊರ ಬರಲೇಬೇಕು. ಎಲ್ಲಿ ಇತ್ಯರ್ಥ ಆಗಬೇಕು ಅಲ್ಲಿ ಇತ್ಯರ್ಥ ಆಗುತ್ತದೆ. ಅದಕ್ಕಾಗಿಯೇ ನಾನು ನ್ಯಾಯಾಲಯದ ಮುಂದೆ ಬಂದಿದ್ದೇನೆ. ಎಲ್ಲರ ಆರೋಪಕ್ಕೆ ನಾನು ಉತ್ತರ ನೀಡುವುದಿಲ್ಲ’ ಎಂದು ನುಡಿದರು.
‘ತನ್ನ ಜೊತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದ ಸುದೀಪ್‍ಮುಂಗಡಹಣ ಪಡೆದು ಬಳಿಕ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಇತ್ತೀಚೆಗೆ ನಿರ್ಮಾಪಕ ಕುಮಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿನಡೆಸಿ ಆರೋಪಮಾಡಿದ್ದರು. ಇದಾದ ಬಳಿಕ ಸುದೀಪ್ ಅವರು ಕಾನೂನು ಹೋರಾಟ ಸಂಬಂಧ ನೋಟೀಸ್ ನೀಡಿದ್ದರು.