ನಕಲಿ ಗಾಂಧಿಗಳು ಯಾವ ನೈತಿಕತೆಯಿಂದ ಶತಮಾನೋತ್ಸವ ಆಚರಿಸುತ್ತಿದ್ದಾರೆ? : ಆರ್.ಅಶೋಕ್

Update: 2024-12-26 13:33 GMT

 ಆರ್.ಅಶೋಕ್

ಬೆಂಗಳೂರು : ‘ಸ್ವಾತಂತ್ರ್ಯ ಸಿಕ್ಕಿದೆ, ಇನ್ಮುಂದೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ’ ಎಂದು ಹೇಳಿದ್ದ ಮಹಾತ್ಮಾ ಗಾಂಧೀಜಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು, ಇವತ್ತು ಯಾವ ನೈತಿಕತೆಯಿಂದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದಾರೆ? ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವ ಆಚರಣೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ ಪೂರ್ವದ ಕಾಂಗ್ರೆಸ್ ಅಂದರೆ ಅದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡುತ್ತಿದ್ದ ದೇಶಭಕ್ತರ ಒಕ್ಕೊರಲಿನ ವೇದಿಕೆಯಾಗಿತ್ತು ಎಂದಿದ್ದಾರೆ.

ಆದರೆ, ಸ್ವತಂತ್ರ ಬಂದ ನಂತರ ಮಹಾತ್ಮಾ ಗಾಂಧೀಜಿ ಅವರ ಮಾತನ್ನು ಧಿಕ್ಕರಿಸಿ, ಕೇವಲ ಅಧಿಕಾರಕ್ಕಾಗಿ, ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಆಸ್ತಿ ಮಾಡಿಕೊಂಡ ನಕಲಿ ಗಾಂಧಿಗಳು ಮತ್ತು ಅವರ ಅನುಯಾಯಿಗಳು ಈಗ ‘ಗಾಂಧಿ ಭಾರತ’ ಹೆಸರಿನಲ್ಲಿ ಬೆಳಗಾವಿ ಅಧಿವೇಶನ ಆಚರಿಸುತ್ತಿರುವುದು ವಿಪರ್ಯಾಸ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.

ಗಾಂಧೀಜಿ ಮಾತ್ರವಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಅವರೂ ಸಹ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ‘ಕಾಂಗ್ರೆಸ್ ಪಕ್ಷ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ’ ಎಂದು ಅಂಬೇಡ್ಕರರು ಸಲಹೆ ನೀಡಿದ್ದರು. ಸ್ವತಂತ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಗಾಂಧಿ, ಸರ್ದಾರ್ ಪಟೇಲ್ ಅಂತಹ ಮೇರು ನಾಯರನ್ನು ಒಳಗೊಂಡಿದ್ದ ಸ್ವಾತಂತ್ಯ ಪೂರ್ವ ಕಾಂಗ್ರೆಸ್‍ಗೂ, ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ನಡೆಸುತ್ತಿರುವ ಈಗಿನ ನಕಲಿ ಕಾಂಗ್ರೆಸ್‍ಗೂ ಸಂಬಂಧವೇ ಇಲ್ಲ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ದೇಶದ ಜನರಿಂದ ಪದೇ ಪದೇ ತಿರಸ್ಕಾರಗೊಳ್ಳುತ್ತಿರುವ ನಕಲಿ ಗಾಂಧಿಗಳನ್ನು ಮತ್ತೊಮ್ಮೆ ರೀಲಾಂಚ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ 20 ಕೋಟಿ ರೂ. ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News