ಬೆಳಗಾವಿಯಲ್ಲಿ ಬಾಣಂತಿ ಮೃತ್ಯು : ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ
ಬೆಂಗಳೂರು : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿ ಸಾವಿನ ಬಗ್ಗೆ ಆರೋಗ್ಯ ಇಲಾಖೆಯು ಗುರುವಾರದಂದು ಸ್ಪಷ್ಟನೆ ನೀಡಿದೆ.
ಬೆಳಗಾವಿಯ ಬಿಐಎಂಎಸ್ ಮೆಡಿಕಲ್ ಕಾಲೇಜಿನಲ್ಲಿ ಪೂಜಾ ಅಡಿವೆಪ್ಪ ಎಂಬುವರು ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ. 25 ವರ್ಷದ ಪೂಜಾ ಅಸಹಜ ರೋಗದಿಂದ ಬಳಲುತ್ತಿದ್ದರು. ಅವರು ಡಿ.24ರಂದು ಬಿಐಎಂಎಸ್ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. ದಾಖಲಾದ ಸಂದರ್ಭದಲ್ಲಿ ರೋಗಿಯ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗುತ್ತಿತ್ತು. ಇದು ಪೂಜಾ ಅವರ ಐದನೆ ಬಾರಿಯ ಪ್ರಗ್ನೆನ್ಸಿಯಾಗಿತ್ತು. ಹೆರಿಗೆಯ ದಿನಾಂಕ ಇನ್ನೂ ಒಂದು ತಿಂಗಳು ಮುಂದೆ ಇತ್ತು. ಆದರೆ ಗರ್ಭಿಣಿ ಪೂಜಾ ಸ್ಥಿತಿ ಗಂಭೀರವಾಗಿದ್ದರಿಂದ ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ಸಹಜ ಹೆರಿಗೆ ಮಾಡಿಸಲಾಗಿದೆ. ಪೂಜಾ ಅವರು ನಿಧನರಾಗಿದ್ದು, ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.