ಬೆಳಗಾವಿ ಕಾಂಗ್ರೆಸ್ ಅಧಿವೇಶನ | ದೇಶದಾದ್ಯಂತ ಸಂವಿಧಾನ ರಕ್ಷಿಸಿ ರಾಷ್ಟ್ರೀಯ ಪಾದಯಾತ್ರೆ ನಡೆಸಲು ಕಾರ್ಯಕಾರಿಣಿ ಸಭೆ ತೀರ್ಮಾನ

Update: 2024-12-26 16:43 GMT

PC : x/@kcvenugopalmp

ಬೆಳಗಾವಿ : ಭಾರತ್ ಜೋಡೋ, ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಾದರಿಯಲ್ಲಿ ದೇಶದಾದ್ಯಂತ 'ಸಂವಿಧಾನ ರಕ್ಷಿಸಿ ಪಾದಯಾತ್ರೆ'ನಡೆಸಲು ಕಾಂಗ್ರೆಸ್ ಕಾರ್ಯಕಾರಿಣಿಯ ವಿಸ್ತೃತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ ತಿಲಕವಾಡಿಯಲ್ಲಿರುವ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ವಿಸ್ತೃತ ಕಾರ್ಯಕಾರಿಣಿ ಸಭೆ "ನವ ಸತ್ಯಾಗ್ರಹ ಬೈಠಕ್" ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಾರ್ಯಕಾರಿಣಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎರಡು ನಿರ್ಣಯಗಳು ಕೈಗೊಂಡಿದ್ದೇವೆ. ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಾಳೆ ಚಾಲನೆ ನೀಡಲಿರುವ "ಜೈ ಬಾಪು, ಜೈ ಭೀಮ್, ಜೈ ಸಂವಿಧಾನ" ರ್ಯಾಲಿಯನ್ನು 2025ರ ಜನವರಿ 26 ರಿಂದ 2026ರ ಜನವರಿ 26ರವರೆಗೆ ಸಂವಿಧಾನ ರಕ್ಷಿಸಿ ರಾಷ್ಟ್ರೀಯ ಪಾದಯಾತ್ರೆಯು ದೇಶದ ಎಲ್ಲ ಭಾಗಗಳಲ್ಲಿ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಹಾಗೂ ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಪಾದಯಾತ್ರೆ ಸಂದರ್ಭದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಆರ್ಥಿಕ ವ್ಯವಸ್ಥೆ, ಚುನಾವಣಾ ವ್ಯವಸ್ಥೆ, ಅದಾನಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ. ಜನ ಜಾಗೃತಿ ಮೂಡಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

2025ನೇ ವರ್ಷ ಕಾಂಗ್ರೆಸ್ ಪಕ್ಷದ ಸಂಘಟನೆಯ ವರ್ಷವಾಗಿದೆ. ಬೂತ್ ಮಟ್ಟದಿಂದ ರಾಷ್ಟ್ರದ ಮಟ್ಟದ ವರೆಗೆ ಬದಲಾವಣೆಗಳು ಆಗಲಿವೆ. ನಾಯಕತ್ವದ ಮೌಲ್ಯಮಾಪನ ಆಗಲಿದೆ ಎಂದು ವೇಣುಗೋಪಾಲ್ ಹೇಳಿದರು.

2025ರ ಎಪ್ರಿಲ್ ತಿಂಗಳಲ್ಲಿ ಗುಜರಾತ್ ನಲ್ಲಿ ಎಐಸಿಸಿ ಅಧಿವೇಶನ ನಡೆಸಲು ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಕಾರ್ಯಕಾರಿಣಿ ಸಭೆಯಲ್ಲಿ132 ಸದಸ್ಯರು ಭಾಗವಹಿಸಿದ್ದರು. 50 ಜನ ತಮ್ಮ ವಿಚಾರಗಳನ್ನು ಮಂಡಿಸಿದರು. ಸುಮಾರು 4 ಗಂಟೆಗಳ ಕಾಲ ಉತ್ತಮವಾಗಿ ಚರ್ಚೆ ನಡೆಯಿತು ಎಂದರು.

2025 ಫೆಬ್ರವರಿಯಿಂದ ನವೆಂಬರ್ ವರೆಗೆ ಯಾವುದೇ ಚುನಾವಣೆ ನಡೆಯುವುದಿಲ್ಲ. ಆದುದರಿಂದ, ಈ‌ ವರ್ಷ ಕಾಂಗ್ರೆಸ್ ಪಕ್ಷದ ಸಂಘಟನ್, ಸೃಜನ್ ಕಾರ್ಯಕ್ರಮ ಮಾಡುತ್ತೇವೆ. ಆ ಮೂಲಕ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಕಟ್ಟುವ ಸಂಕಲ್ಪ ಮಾಡಿದ್ದೇವೆ ಎಂದು ಅವರು ಹೇಳಿದರು.

ಜೈಬಾಪು, ಜೈ ಭೀಮ್, ಜೈ ಸಂವಿಧಾನ ರ್ಯಾಲಿ ನಾಳೆ ಆರಂಭವಾಗಲಿದೆ. ಜನವರಿ 26ರಂದು ಈ ರ್ಯಾಲಿ ಅಂಬೇಡ್ಕರ್ ಅವರ ಜನ್ಮ ಸ್ಥಳದಲ್ಲಿಯೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಎಪ್ರಿಲ್ ನಲ್ಲಿ ಗುಜರಾತ್ ನಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನದಲ್ಲಿ ಸುಮಾರು 2000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮಹಾತ್ಮ ಗಾಂಧಿ ನಮಗೆ ಕಲಿಸಿರುವ ತತ್ವಗಳ ಮೇಲೆ ನಡೆಯುತ್ತಿರುವ ದಾಳಿಗೆ ನಾಳೆಯ ರ್ಯಾಲಿ ಉತ್ತರ ನೀಡಲಿದೆ ಎಂದು ಜೈ ರಾಮ್ ರಮೇಶ್ ತಿಳಿಸಿದರು.

ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು ಹಾಗೂ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಲಾಗಿದೆ. ಒಂದು ದೇಶ ಒಂದು ಚುನಾವಣೆಗೆ ಈಗಾಗಲೇ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪವನ್ ಖೇರಾ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ.ಎಂ.ವಿ.ರಾಜೀವ್ ಗೌಡ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News