ನಂದಿನಿ ಹಾಲಿನ ದರ ಲೀ. 5 ರೂ.ಹೆಚ್ಚಳಕ್ಕೆ ಪ್ರಸ್ತಾವ | ಸಂಕ್ರಾಂತಿ ಬಳಿಕ ಸಭೆ ನಡೆಸಿ ತೀರ್ಮಾನ : ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

Update: 2024-12-26 13:31 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಈ ಸಂಬಂಧ ಸಭೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್)ದ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಇನ್ನೂ ದರ ಏರಿಕೆ ಬಗ್ಗೆ ನಿರ್ಧಾರವಾಗಿಲ್ಲ. ಸಂಕ್ರಾಂತಿ ಹಬ್ಬದ ನಂತರ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಹೆಚ್ಚುವರಿ ಹಾಲು ವಾಪಸ್: ಈ ಹಿಂದೆ 50 ಎಂ.ಎಲ್. ಹೆಚ್ಚುವರಿ ಹಾಲನ್ನು ನೀಡುವ ಮೂಲಕ ಲೀಟರ್‌ಗೆ 2ರೂ.ಹೆಚ್ಚಳ ಮಾಡಲಾಗಿತ್ತು. ಹೆಚ್ಚುವರಿ ಹಾಲನ್ನು ಹಿಂಪಡೆಯಲು ಉದ್ದೇಶಿಸಲಾಗಿದೆ. ಹಾಲಿನ ದರ ಹೆಚ್ಚಳ ಕುರಿತಂತೆ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚೆಯಾಗಿದ್ದು, ಹೆಚ್ಚಳ ಮಾಡಲು ಪ್ರಸ್ತಾವ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಅಯೋಧ್ಯೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ರಾಜ್ಯದ ನಂದಿನಿ ತುಪ್ಪ 10 ವರ್ಷಗಳಿಂದ ಬಳಕೆಯಾಗುತ್ತಿದೆ. ತಿರುಪತಿ ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಶೇ.10ರಿಂದ 15ರಷ್ಟು ಮಾರಾಟ ಹೆಚ್ಚಳವಾಗಿದೆ. ಶಿರಡಿಯಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಿರಡಿಗೂ ತುಪ್ಪ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಭೀಮಾನಾಯ್ಕ್ ತಿಳಿಸಿದರು.

ಐಪಿಎಲ್ ಪ್ರಾಯೋಜಕತ್ವ: ಕೆಎಂಎಫ್‍ನ ಬಜೆಟ್‍ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‍ಗೆ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭೀಮಾ ನಾಯ್ಕ್ ನುಡಿದರು.

ಬೇಡಿಕೆ ಆಧರಿಸಿ ಮಾರಾಟ: ನಂದಿನಿ ಇಡ್ಲಿ-ದೋಸೆ ಹಿಟ್ಟು ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಇಡ್ಲಿ , ದೋಸೆ ಹಿಟ್ಟಿನ ಮಾರುಕಟ್ಟೆಯಲ್ಲಿ ಶೇ.15ರಿಂದ 20ರಷ್ಟು ನಾವು ಪಾಲು ಪಡೆಯಬೇಕೆಂಬ ಉದ್ದೇಶ ಹೊಂದಿದ್ದೇವೆ. ಬೇರೆ ಕಂಪೆನಿಯವರು ಪ್ರತಿದಿನ 3 ಸಾವಿರ ಮೆಟ್ರಿಕ್ ಟನ್‍ನಷ್ಟು ಮಾರಾಟ ಮಾಡುತ್ತಿದ್ದು, ನಾವು 5ಸಾವಿರ ಮೆಟ್ರಿಕ್ ಟನ್ ಮಾರಾಟ ಮಾಡುವ ಗುರಿ ಹೊಂದಿದ್ದೇವೆ ಎಂದು ಭೀಮಾನಾಯ್ಕ್ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News