ಬೆಂಗಳೂರು | ಬೈಕ್ ವೀಲ್ಹಿಂಗ್ ಮಾಡಿದರೆ ಲೈಸೆನ್ಸ್ ರದ್ದು: ಎಡಿಜಿಪಿ ಅಲೋಕ್ ಕುಮಾರ್

Update: 2023-07-18 18:29 GMT

Photo -Twitter@alokkumar6994

ಬೆಂಗಳೂರು, ಜು.18: ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳ ವ್ಹೀಲಿಂಗ್ ಹಾವಳಿ ಹೆಚ್ಚಾಗಿರುವುದರಿಂದ ಈ ನಿಟ್ಟಿನಲ್ಲಿ ರಾಜ್ಯದ ಉನ್ನತ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆದೇಶಿಸಲು ರಾಜ್ಯ ಸಂಚಾರಿ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಪ್ರಮುಖ ನಗರಗಳ ಹೆದ್ದಾರಿಗಳಲ್ಲಿ ಪೊಲೀಸರು ಎಷ್ಟೇ ಮುನ್ನೆಚ್ಚರಿಕೆ ಕ್ರಮವಹಿಸಿ ಸಾಕಷ್ಟು ನಿಗಾ ಇರಿಸಿದರೂ ವ್ಹೀಲಿಂಗ್ ಹುಚ್ಚಾಟಕ್ಕೆ ಬಿದ್ದ ಯುವಕರ ಪುಂಡಾಟವನ್ನು ಸಂಪೂರ್ಣ ತಡೆಯಲಾಗುತ್ತಿಲ್ಲ. ಆದ್ದರಿಂದ ಸರಕಾರದ ಉನ್ನತ ಅಧಿಕಾರಿಗಳು ಕಠಿಣ ಕ್ರಮದ ಆದೇಶ ಹೊರಡಿಸಬೇಕು ಎಂದು ತಿಳಿಸಿದ್ದಾರೆ.

ವ್ಹೀಲಿಂಗ್ ಹಾವಳಿಗಳ ಮೇಲೆ ನಿಗಾ ಇಟ್ಟು ಪೊಲೀಸರು ಟೆಕ್ನಿಕಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಹೀಲಿಂಗ್ ಬೈಕ್‍ಗಳನ್ನು ಪತ್ತೆ ಮಾಡಲಿದ್ದಾರೆ. ಕೃತ್ಯ ಎಸಗುವ ವ್ಯಕ್ತಿ ಪತ್ತೆ ಹಚ್ಚಿ ಆತನ ಡಿಎಲ್ ಕ್ಯಾನ್ಸಲ್ ಮಾಡಿಸಲಿದ್ದಾರೆ. ಬಳಿಕ ವ್ಹೀಲಿಂಗ್‍ಗೆ ಬಳಸಿದ್ದ ಬೈಕ್‍ನ ಆರ್‍ಸಿ ಕ್ಯಾನ್ಸಲ್ ಮಾಡಲಿದ್ದು, ಐಪಿಸಿ ಸೆಕ್ಷನ್ ಮುಖಾಂತರ ಸವಾರರ ವಿರುದ್ಧ ಎಫ್‍ಐಆರ್ ದಾಖಲಿಸಲಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ನಿರ್ಲಕ್ಷ್ಯದ ಚಾಲನೆಯ ಪ್ರಕಾರವಾಗಿ ಪೊಲೀಸರು ಐಪಿಸಿ ಸೆಕ್ಷನ್ 239, ಮೊಟಾರ್ ವೆಹಿಕಲ್ ಆ್ಯಕ್ಟ್ 184, 189 ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ವ್ಹೀಲಿಂಗ್ ವಿಡಿಯೋ ಅಪ್ಲೋಡ್ ಮಾಡುವವರ ಮೇಲೂ ನಿಗಾ ವಹಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಯುವಕರು ಅತೀ ವೇಗದಲ್ಲಿ ದ್ವಿಚಕ್ರ ವಾಹನವನ್ನು ಒಂದೇ ಚಕ್ರದಲ್ಲಿ ಓಡಿಸುವುದು ಒಂದು ರೀತಿಯ ಹುಚ್ಚಾಟವಾದರೆ, ಜೊತೆಗೆ ಹಿಂಬದಿಯಲ್ಲಿ ಯುವತಿರನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುವುದು ಅತಿರೇಕಕ್ಕೂ ಮೀರಿದ ಪುಂಡಾಟವಾಗಿದೆ. ಇನ್ನು ಈ ರೀತಿಯ ವ್ಹೀಲಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತಿದ್ದು, ಇದೆಲ್ಲದಕ್ಕೂ ಕಡಿವಾಣ ಹಾಕಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News