ಫಾಕ್ಸ್ ಕಾನ್‍ನಿಂದ ರಾಜ್ಯದಲ್ಲಿ 5 ಸಾವಿರ ಕೋಟಿ ರೂ.ಹೂಡಿಕೆ, 13 ಸಾವಿರ ಉದ್ಯೋಗ ಸೃಷ್ಟಿ
ಬೆಂಗಳೂರು, ಆ.2: ಕರ್ನಾಟಕದಲ್ಲಿ 5ಸಾವಿರ ಕೋಟಿ ರೂ.ಮೊತ್ತದ ಬಂಡವಾಳ ಹೂಡುವ ಸಂಬಂಧ ರಾಜ್ಯ ಸರಕಾರದೊಂದಿಗೆ ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಫಾಕ್ಸ್‍ಕಾನ್ ಸಹಿ ಮಾಡಿದೆ. ಈ ಯೋಜನೆಗಳಿಂದ 13 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಚೆನ್ನೈನ ಖಾಸಗಿ ಹೊಟೇಲ್‍ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಫೋನ್ ಎನ್‍ಕ್ಲೋಸರ್ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಸೆಮಿಕಾನ್ ಉಪಕರಣಗಳ ಯೋಜನೆ ಜಾರಿ ಸಂಬಂಧ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿದ ಫಾಕ್ಸ್‍ಕಾನ್ ಅಧ್ಯಕ್ಷ ಯಂಗ್ ಲಿಯು ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮತ್ತು ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಉದ್ದೇಶಿತ ಹೂಡಿಕೆ ಒಪ್ಪಂದದ ಬಗ್ಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, “ಫಾಕ್ಸ್‍ಕಾನ್ ಮತ್ತು ಕರ್ನಾಟಕ ಸರಕಾರದ ನಡುವಿನ ಈ ಒಪ್ಪಂದವು ತಂತ್ರಜ್ಞಾನದ ಪ್ರಗತಿ ಮತ್ತು ರಾಜ್ಯದ ಒಟ್ಟಾರೆ ಸಾಮಾಜಿಕ-ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಮುಖ್ಯವಾಗಿ ಸಾವಿರಾರು ನುರಿತ ಕೆಲಸಗಾರರಿಗೆ ಉದ್ಯೋಗ ದೊರೆಯುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಲಿರುವ ಫಾಕ್ಸ್‍ಕಾನ್‍ಗೆ ಎಲ್ಲ ರೀತಿಯ ಬೆಂಬಲ ಒದಗಿಸಲು ನಮ್ಮ ಸರಕಾರ ಬದ್ಧ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಫಾಕ್ಸ್‍ಕಾನ್ ಮುಂದೆ ಬಂದಿರುವುದು ಸಂತೋಷದ ವಿಷಯ. ಬಂಡವಾಳ ಆಕರ್ಷಣೆ ಮತ್ತು ಕಂಪೆನಿಗಳಿಗೆ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸಲು ನಮ್ಮ ನೀತಿಗಳು ಪೂರಕವಾಗಿವೆ ಎಂದರು.
ಕರ್ನಾಟಕ ಸರಕಾರದ ಜತೆ ಯೋಜಿತ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಮ್ಮ ಹೈಟೆಕ್ ಉದ್ಯಮಗಳಿಗೆ ರಾಜ್ಯ ಆಕರ್ಷಕ ತಾಣವಾಗಿದೆ. ಉದ್ಯಮಕ್ಕೆ ಪೂರಕವಾದ ವಾತಾವರಣವಿದ್ದು, ನುರಿತ ಕೆಲಸಗಾರರ ಲಭ್ಯತೆ ಇಲ್ಲಿನ ವಿಶೇಷ. ಈ 2 ಪ್ರಮುಖ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲಿದ್ದೇವೆ ಎಂದು ಫಾಕ್ಸ್‍ಕಾನ್‍ನ ಅಧ್ಯಕ್ಷ ಯಂಗ್ ಲಿಯು ಹೇಳಿದ್ದಾರೆ.
ಪ್ರಮುಖ ಯೋಜನೆಗಳ ವಿವರ:
ಫೋನ್ ಎನ್‍ಕ್ಲೋಸರ್: ಐಫೋನ್‍ಗಳ ಮೆಕ್ಯಾನಿಕಲ್ ಎನ್‍ಕ್ಲೋಸರ್‍ನಂತಹ ಸ್ಮಾರ್ಟ್‍ಫೆÇೀನ್‍ನ ಉಪ ಘಟಕಗಳನ್ನು ತಯಾರಿಸುವ ಸಂಸ್ಥೆಯ ಯೋಜಿತ ಯೋಜನೆಯ ಹೂಡಿಕೆ ಮೊತ್ತ 350 ದಶಲಕ್ಷ ಡಾಲರ್ (3,000 ಕೋಟಿ ರೂ.) ಯೋಜನೆಯಡಿ 12 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಎಫ್‍ಐಐ ಉದ್ದೇಶಿಸಿದೆ.
ಸೆಮಿಕಾನ್ ಉಪಕರಣಗಳು-ಅಪ್ಲೈಡ್ ಮೆಟೀರಿಯಲ್ಸ್ ಸಹಯೋಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳ ತಯಾರಿಸುವ ಸಂಸ್ಥೆಯ ಯೋಜಿತ ಯೋಜನೆಯ ಹೂಡಿಕೆ ಮೊತ್ತ 250 ದಶಲಕ್ಷ ಡಾಲರ್(2,000 ಕೋಟಿ ರೂ.). ಇದರಿಂದ 1000 ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್-2ನೆ ಹಂತದಲ್ಲಿ ಈ ಯೋಜನೆಗಾಗಿ 35 ಎಕರೆ ಭೂಮಿಯನ್ನು ಅಂತಿಮಗೊಳಿಸಲಾಗಿದೆ.