ಕಾಣೆಯಾಗಿದ್ದ ಮಹಿಳೆ 23 ವರ್ಷಗಳ ನಂತರ ಕುಟುಂಬಕ್ಕೆ ಸೇರ್ಪಡೆ

Update: 2024-12-25 14:19 GMT

ಬೆಂಗಳೂರು : ಸುಮಾರು 23 ವರ್ಷಗಳ ಹಿಂದೆ ಕಾಣೆಯಾಗಿದ್ದ 50 ವರ್ಷದ ಮಹಿಳೆ ಸಾಕಮ್ಮ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನೆರವಿನಿಂದ ತನ್ನ ಕುಟುಂಬಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23 ವರ್ಷಗಳ ಹಿಂದೆ ವಿಜಯನಗರ ಜಿಲ್ಲೆ ಹೊಸಪೇಟೆಯ ದಣನಾಯಕನಕೆರೆಯ ಸಾಕಮ್ಮ ಕಾಣೆಯಾಗಿದ್ದರು. ಕರ್ನಾಟಕದಿಂದ ರೈಲಿನ ಮೂಲಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ತಲುಪಿ, ಕುಟುಂಬದವನ್ನು ಸೇರಲು ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ತಿಳಿಸಿದರು.

ಹಿಮಾಚಲ ಪ್ರದೇಶದಲ್ಲಿರುವ ವಿಚಾರವನ್ನು ಕರ್ನಾಟಕ ಮೂಲದ ಉತ್ತರಾಖಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ರವಿನಂದನ್ ಮೂಲಕ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಜಿ. ಎಂಬುವವರು ಮಾಹಿತಿ ಪಡೆದುಕೊಂಡರು. ಡಿ.19ರಂದು ವಿಜಯಕುಮಾರ ಜಿ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್‍ರನ್ನು ಟ್ಯಾಗ್ ಮಾಡಿ ಸಹಾಯ ಕೋರಿದ್ದರು ಎಂದು ಸಚಿವರು ವಿವರಿಸಿದರು.

ಮೇಜರ್ ಪಿ. ಮಣಿವಣ್ಣನ್ ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಟ್ಯಾಗ್ ಮಾಡಿ, ಮಹಿಳೆಯನ್ನು ಮರಳಿ ಕರ್ನಾಟಕಕ್ಕೆ ಕರೆತರುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿರುತ್ತಾರೆ. ಸಾಕಮ್ಮ ವಿಷಯವು ನನ್ನ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ, ಅಧಿಕಾರಿಗಳ ತಂಡವನ್ನು ವಿಮಾನದ ಮೂಲಕ ಕಳುಹಿಸಿ ಸಾಕಮ್ಮನವರನ್ನು ವಿಮಾನದಲ್ಲೇ ಸುರಕ್ಷಿತವಾಗಿ ಕರೆತರುವಂತೆ ಆದೇಶಿಸಿದೆ ಎಂದು ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದರು.

ಸರಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಅವರಿಗೆ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರೊಂದಿಗೆ ಉತ್ತಮ ಓಡನಾಟ ಇರುವುದರಿಂದ ಅವರನ್ನು ಸಂಪರ್ಕಿಸಿ, ಈ ವಿಚಾರವನ್ನು ಮುಂದಿನ ಕ್ರಮಕ್ಕಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಹಾಯವಾಣಿಗೆ ಅನುಕೂಲವಾಗುವಂತೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದರು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಯು ವಿಷಯವನ್ನು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಾಗೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅವರನ್ನು ಸಂರ್ಪಕಿಸಿತು. ಎರಡು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರೊಂದಿಗೆ ಸಮನ್ವಯ ಸಾಧಿಸಿ, ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಅವರ ನಿರ್ದೇಶನದಂತೆ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು ಎಂದು ಅವರು ಹೇಳಿದರು.

ಹಗರಿಬೊಮ್ಮನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ, ಬಳ್ಳಾರಿ ಜಿಲ್ಲೆಯ ಎನ್.ಪಿ.ಕೆ ಕೇಂದ್ರದ ವಾರ್ಡನ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿಯವರು ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ಸಚಿವರು ತಿಳಿಸಿದರು.

ಈ ತಂಡವು ಡಿ.21ರಂದು ಚಂಡೀಗಢವನ್ನು ತಲುಪಿ, ಸಾಕಮ್ಮ ಅವರು ಇದ್ದ ಹಿಮಾಚಲ ಪ್ರದೇಶದ ಮಂಡಿ ಜಲ್ಲೆಯ ಬಾಲ್ವಲಿ ಕಲ್ಯಾಣ ಸಭಾ (ವೃದ್ದಾಶ್ರಮ)ವನ್ನು ತಲುಪಿದರು. ವಿಮಾನದ ಮೂಲಕ ಇಲ್ಲಿಗೆ ಕರೆತಂದು ಸಾಕಮ್ಮ ಅವರನ್ನು ಅವರ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಣದೀಪ್ ಡಿ. ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News