ಆಡಳಿತ ಪಕ್ಷದ ಶಾಸಕರಿಂದ ಸರಕಾರಕ್ಕೆ ಛೀಮಾರಿ : ವಿಜಯೇಂದ್ರ
ಬೆಂಗಳೂರು : ರಾಜ್ಯದ ಪರಿಸ್ಥಿತಿ ಬಗ್ಗೆ ‘ಆಲ್ ಈಸ್ ವೆಲ್’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಷಣ ಬಿಗಿಯಬಹುದು. ಆದರೆ, ಸತ್ಯ ಏನೆಂದರೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಹಣಕಾಸಿನ ಕೊರತೆ ಎದ್ದು ಕಾಣುತ್ತಿದೆ. ಸರಕಾರಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.
ಬುಧವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೆ ವರ್ಷದ ಜನ್ಮದಿನದ ಸ್ಮರಣಾರ್ಥ ‘ಸುಶಾಸನ ದಿನ’ದ ನಿಮಿತ್ತ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶಿನಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿನ್ನೆ ಕೂಡ ಆಡಳಿತ ಪಕ್ಷದ ಶಾಸಕ ರಾಜು ಕಾಗೆಯವರು ಈ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ ಎಂದು ಟೀಕಿಸಿದರು.
ಸರಕಾರದ ಬಳಿ ದುಡ್ಡಿಲ್ಲ: ಬೆಳಗಾವಿಯ ಘಟನೆ ನೋಡಿದ್ದೀರಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ. ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರಕಾರವು ಬೆಳೆ ಹಾನಿ ಪರಿಶೀಲಿಸಲು ತಯಾರಿಲ್ಲ. ಪರಿಹಾರ ಕೊಡಲು ಸರಕಾರದ ಬಳಿ ಹಣ ಇಲ್ಲ. ಇಲ್ಲಿನ ಹಣಕಾಸಿನ ದುಸ್ಥಿತಿ ಒಂದೆಡೆ ಇದ್ದರೆ ತೆಲಂಗಾಣದಲ್ಲೂ ಕಾಂಗ್ರೆಸ್ ಮುಖ್ಯಮಂತ್ರಿ ನನ್ನ ಕೈಯಲ್ಲಿ ಗ್ಯಾರಂಟಿ ಈಡೇರಿಸಲು ಅಸಾಧ್ಯ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಅವರು ಗಮನ ಸೆಳೆದರು.
ಒಗ್ಗಟ್ಟಾಗಿ ಸಾಗಬೇಕು: ‘ನಮ್ಮ ಸಮಸ್ಯೆಗಳು, ವ್ಯತ್ಯಾಸಗಳನ್ನು ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ, ಕಾರ್ಯಕರ್ತರ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗಬೇಕು. ವಾಜಪೇಯಿಯವರ ಪಕ್ಷ ಸಂಘಟನೆ, ಉತ್ತಮ ಆಡಳಿತದ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ವಿಜಯೇಂದ್ರ ವಿನಂತಿಸಿದರು.
ಬಿಜೆಪಿ ಕರ್ನಾಟಕದಲ್ಲಿ ಸುಭದ್ರವಾಗಿ ಬೆಳೆದು ನಿಲ್ಲಲು ಯಡಿಯೂರಪ್ಪ, ಅನಂತಕುಮಾರ್ ಆದಿಯಾಗಿ ಹಿರಿಯರ ತಪಸ್ಸೇ ಕಾರಣ. ತನು, ಮನ, ಧನ ಅರ್ಪಿಸಿದ ಲಕ್ಷಾಂತರ ಕಾರ್ಯಕರ್ತರ ಅವಿರತ ಶ್ರಮ ಅದರ ಹಿಂದಿದೆ. ಬಿಜೆಪಿಯ ಕಟ್ಟಡ ನಮಗೆ ಕಾಣುತ್ತಿದೆ. ಪಕ್ಷ ಬೆಳೆದುನಿಂತಿರುವುದು ಗೋಚರಿಸುತ್ತಿದೆ. ಆದರೆ, ಅದರ ಅಡಿಪಾಯ ನಮ್ಮ ಕಣ್ಣಿಗೆ ಕಾಣಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದರು.
ಒಂದು ರೀತಿ ರೋಮಾಂಚನ: ಈ ಹಿಂದೆ ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದರು. ವಿಪಕ್ಷ ನಾಯಕರಾಗಿದ್ದ ಬಿಎಸ್‍ವೈ ಅಧಿಕೃತ ನಿವಾಸಕ್ಕೆ ಹಲವಾರು ಬಾರಿ ವಾಜಪೇಯಿ ಬಂದಿದ್ದರು. ಅಟಲ್‍ಜೀ ಶಾಸಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶಿಕಾರಿಪುರಕ್ಕೆ ಭೇಟಿ ಕೊಟ್ಟಿದ್ದರು. 1999ರಲ್ಲಿ ಜೆ.ಎಚ್.ಪಟೇಲರ ಸರಕಾರದ ವಿರುದ್ಧ ಜನಾಂದೋಲನ ನಡೆದಿತ್ತು ಎಂದು ಸ್ಮರಿಸಿದರು.
‘ವಾಜಪೇಯಿಯವರು ಈ ದೇಶದ ಪ್ರಧಾನಿ ಆಗುತ್ತಾರೆಂದು ನೆಹರೂ ಅವರು ಹೇಳಿದ್ದರು. ಭೌತಿಕವಾಗಿ ಅಟಲ್‍ಜೀ ಈ ದೇಶದಲ್ಲಿ ನಮ್ಮ ಜೊತೆ ಇಲ್ಲದಿದ್ದರೂ ಅವರು ಈ ದೇಶದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ’
-ಬಿ.ಎಸ್.ಯಡಿಯೂರಪ್ಪ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ
‘ವಾಜಪೇಯಿ ಅವರು ಒಬ್ಬ ಕವಿ, ಸಹೃದಯಿ, ಒಬ್ಬ ರಾಜಕಾರಣಿ, ಒಬ್ಬ ಕಾರ್ಯಕರ್ತನಾಗಿ, ಒಬ್ಬ ನಾಯಕನಾಗಿ ಸದಾ ಕಾಲಕ್ಕೂ ಅವರ ನೆನಪುಗಳು ನಮ್ಮ ಜೊತೆ ಇರುವಂತೆ ಜೀವನ ನಡೆಸಿದ್ದಾರೆ. ಪಾಂಚಜನ್ಯದ ಉಪ ಸಂಪಾದಕರಾಗಿದ್ದ ವಾಜಪೇಯಿಯವರು ರಾಜಕೀಯಕ್ಕೆ ಬಂದದ್ದೇ ಆಕಸ್ಮಿಕ.
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ