ರಾಜ್ಯದೆಲ್ಲೆಡೆ ಮಹಾತ್ಮಾ ಗಾಂಧಿ ವಿಚಾರಧಾರೆ ಪ್ರಚಾರ ಕಾರ್ಯಕ್ಕೆ ಒತ್ತು : ಸಿಎಂ ಸಿದ್ದರಾಮಯ್ಯ
ಬೆಳಗಾವಿ : ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಮಹಾತ್ಮ ಗಾಂಧೀಜಿ ವಿಚಾರಧಾರೆಯನ್ನು ಪ್ರಚುರಪಡಿಸಲು ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಪೂರೈಸಿದ್ದು, ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ(ಡಿ.26) ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣ ವಿಧಾನಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮವಿದ್ದು, ಡಿ.27ರಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದರು.
ಬದಲಾವಣೆ ನಿರಂತರ ಪ್ರಕ್ರಿಯೆ: ಕಾಂಗ್ರೆಸ್ ಅಧಿವೇಶನದಿಂದ ಪಕ್ಷದಲ್ಲಿ ಬದಲಾವಣೆ ಪರ್ವ ಆರಂಭವಾಗುವುದೇ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಬದಲಾವಣೆ ನಿರಂತರವಾದ ಪ್ರಕ್ರಿಯೆ. ನೂರು ವರ್ಷಗಳ ಹಿಂದಿದ್ದ ಸ್ಥಿತಿ ಈಗಿಲ್ಲ. ರಾಜಕೀಯ ಬದಲಾವಣೆ ಹಾಗೂ ಬೆಳವಣಿಗೆಗಳು ಆಗುತ್ತಿರುತ್ತವೆ’ ಎಂದರು.
ತಪ್ಪು ಮರೆಮಾಚಲು ರಾಜ್ಯಪಾಲರಿಗೆ ದೂರು: ಸರಕಾರದ ವಿರುದ್ದ ರಾಜ್ಯಪಾಲರಿಗೆ ಪರಿಷತ್ ಸದಸ್ಯ ಸಿ.ಟಿ. ರವಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಿ.ಟಿ.ರವಿ ತಮ್ಮ ತಪ್ಪನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದು, ಅವರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಸಭೆಗೆ ಅವಕಾಶ ನೀಡಿದ್ದು ತಪ್ಪು: ಸಿ.ಟಿ.ರವಿ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಭೆ ನಡೆಸಲು ಅವಕಾಶ ಕೊಟ್ಟ ಕಾರಣಕ್ಕಾಗಿ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ. ಪೊಲೀಸ್ ಠಾಣೆಯೊಂದರಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಲು ಅವಕಾಶ ನೀಡಿದ್ದು ತಪ್ಪು. ಸಿ.ಟಿ.ರವಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅವರನ್ನು ಬೇರೆಡೆಗಳಿಗೆ ಕರೊದೊಯ್ಯಲಾಗಿತ್ತು ಎಂದು ಈಗಾಗಲೇ ಬೆಳಗಾವಿ ಆಯುಕ್ತರು ಸ್ಪಷ್ಟಣೆ ನೀಡಿದ್ದಾರೆ ಎಂದರು.
ಪೊಲೀಸ್ ತನಿಖೆ: ‘ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೊಟ್ಟೆ ಯಾರು ಎಸೆದವರು? ಹಾಗೂ ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆಯ ಬಳಿಕ ಗೊತ್ತಾಗಲಿದೆ’
-ಸಿದ್ಧರಾಮಯ್ಯ, ಮುಖ್ಯಮಂತ್ರಿ