ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲು ಮಾಡಬೇಕು: ಶಾಸಕ ರಿಝ್ವಾನ್
ಬೆಳಗಾವಿ: ಹೊಸ ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ಎಸೆದ ವ್ಯಕ್ತಿಯು ಪಡೆದಿರುವ ಪ್ರೇಕ್ಷಕರ ಪಾಸ್ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯದ್ದೆ ಆಗಿದ್ದರೆ ಮೊದಲು ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಶದ್ ಆಗ್ರಹಿಸಿದರು.
ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಗಂಭೀರ ಭದ್ರತಾ ವೈಫಲ್ಯ ಆಗಿದೆ. ಸುಮಾರು 20 ವರ್ಷಗಳ ಹಿಂದೆ ಇದೇ ರೀತಿ ದಾಳಿಯಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಸಂಸತ್ ಅಧಿವೇಶನ ನಡೆಯುವಾಗ ಒಳಗೆ ಬಂದು ಸ್ಮೋಕ್ ಬಾಂಬ್ ತೆರೆದು ಸಭಾ ಭವನದ ಎಸೆಯುತ್ತಾರೆ ಎಂದರೆ ಇದು ಪ್ರಧಾನಿ ಮೋದಿ ಸರಕಾರದ ವೈಫಲ್ಯವೇ ಕಾರಣ ಎಂದರು.
56 ಇಂಚು ಎದೆ ಇದೆ, ಶಕ್ತಿ ಇದೆ. ಎಲ್ಲರಿಗೂ ಭದ್ರತೆ ಕೊಡುತ್ತೇವೆ ಎಂದು ಮೋದಿ ಹೇಳುತ್ತಾರೆ. ಆದರೆ, ಇಂತಹ ಲೋಪದ ಸರಕಾರ ನಾನು ನೋಡಿಯೇ ಇಲ್ಲ. ಒಂದು ವೇಳೆ ನಮ್ಮವರ ಪಾಸ್ ಪಡೆದು ಯಾರಾದರೂ ಈ ರೀತಿ ಮಾಡಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರಾ? ಎಂದು ರಿಝ್ವಾನ್ ಅರ್ಶದ್ ಪ್ರಶ್ನಿಸಿದರು.