‘ನವೆಂಬರ್ ಅಂತ್ಯದ ವರೆಗೆ 53,103 ಕೋಟಿ ರೂ.ವಾಣಿಜ್ಯ ತೆರಿಗೆ ಸಂಗ್ರಹ’ : ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

Update: 2024-12-03 15:29 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ವಾಣಿಜ್ಯ ತೆರಿಗೆ ಇಲಾಖೆ: ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ 56,317 ಕೋಟಿ ರೂ.ಇದ್ದು, ಇದುವರೆಗೆ 53,103 ಕೋಟಿ ರೂ.ತೆರಿಗೆ ಸಂಗ್ರಹ ಮಾಡಲಾಗಿದ್ದು, ಶೇ.94 ರಷ್ಟು ಸಾಧನೆ ಮಾಡಲಾಗಿದೆ. 2024-25 ಹಣಕಾಸು ಸಾಲಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಗುರಿ 84,475 ಕೋಟಿ ರೂ.ಇದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದೆ. ಎಲ್ಲ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು. 2023-24ರ ಒಟ್ಟು ತೆರಿಗೆ ಸಂಗ್ರಹಣೆ 70,575 ಕೋಟಿ ರೂ. ಇತ್ತು. ವಿಜಿಲೆನ್ಸ್ ಹೆಚ್ಚಿಸಿ, ತೆರಿಗೆ ಸೋರಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಬೆಂಗಳೂರು ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ವಿಶೇಷ ಅಭಿಯಾನ ಕೈಗೊಂಡು ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿ ಶೇ.100ರಷ್ಟು ಬಜೆಟ್ ಗುರಿಯನ್ನು ಸಾಧಿಸಬೇಕು. ಜಿಎಸ್‍ಟಿ ಸಂಗ್ರಹವನ್ನು ಹೆಚ್ಚಿಸಬೇಕು. ಲೆಕ್ಕಪರಿಶೋಧನೆ ಮತ್ತು ನ್ಯಾಯನಿರ್ಣಯದಿಂದ ಪ್ರಸಕ್ತ ಹಣಕಾಸು ಸಾಲಿನಲ್ಲಿ 4671 ಕೋಟಿ ರೂ.ತೆರಿಗೆ ಸಂಗ್ರಹ ಗುರಿಯಿದ್ದು, ನವೆಂಬರ್ ಅಂತ್ಯದವರೆಗೆ 3,076.86 ಕೋಟಿ ರೂ.ತೆರಿಗೆ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು. ರಾಜ್ಯ ಜಿಎಸ್‍ಟಿ ಸಂಗ್ರಹದಲ್ಲಿ ಶೇ.15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್ ಅಂತ್ಯದವರೆಗೆ 13,722 ಕೋಟಿ ರೂ.ಜಿಎಸ್‍ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಅಬಕಾರಿ ಇಲಾಖೆ: 2024-25 ನೇ ಸಾಲಿನಲ್ಲಿ 38,525 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ ಗುರಿಯಿದ್ದು, ನವೆಂಬರ್ ಅಂತ್ಯದವರೆಗೆ 23,600 ಕೋಟಿ ರೂ. ಸಂಗ್ರಹಿಸಲಾಗಿದ್ದು, ಶೇ.61.26 ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ 1432.23 ಕೋಟಿ ರೂ.ರಾಜಸ್ವ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ಶೇ.6.46 ಬೆಳವಣಿಗೆ ದರ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ 2023-24ರಲ್ಲಿ 34,628 ಕೋಟಿ ರೂ.ಅಬಕಾರಿ ರಾಜಸ್ವ ಸಂಗ್ರಹಿಸಲಾಗಿತ್ತು. ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್ ಸಿ ಹುದ್ದೆಗಳನ್ನು ತುಂಬಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ: 2024-25ನೇ ಸಾಲಿನಲ್ಲಿ 26 ಸಾವಿರ ಕೋಟಿ ರೂ. ಗುರಿ ನಿಗದಿಪಡಿಸಿದ್ದು, ನವೆಂಬರ್ ಕೊನೆಯವರೆಗೆ 15,160.97 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದ್ದು, ಶೇ.58ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜಸ್ವ ಸೋರಿಕೆಯನ್ನು ತಡೆಗಟ್ಟಿ, ರಾಜಸ್ವ ಸಂಗ್ರಹವನ್ನು ಹೆಚ್ಚಿಸಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.21ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾನೂನು ಬಾಹಿರ ನೋಂದಣಿಗಳಿಗೆ ಕಡಿವಾಣ ಹಾಕಿ, ರಾಜಸ್ವ ಸಂಗ್ರಹವನ್ನು ವ್ಯವಸ್ಥಿತಗೊಳಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ: ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಿನ ಬೆಳವಣಿಗೆ ದರ ಸಾಧಿಸಲಾಗಿದೆ. ಈ ವರ್ಷದ ಒಟ್ಟು ರಾಜಸ್ವ ಗುರಿ 9 ಸಾವಿರ ಕೋಟಿ ರೂ. ಇದ್ದು, ನವೆಂಬರ್ ಅಂತ್ಯದವರೆಗೆ 4862 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಖನಿಜ ಹಕ್ಕು ತೆರಿಗೆ ಅಧಿನಿಯಮ ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

2025-26ನೇ ಸಾಲಿನಲ್ಲಿ ಉಪ ಖನಿಜದಿಂದ ಹೆಚ್ಚುವರಿಯಾಗಿ ರಾಜಸ್ವ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಅರಣ್ಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News