ಕೌಶಲ್ಯ ಅಭಿವೃದ್ಧಿ | ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಎಂಜನಿಯರಿಂಗ್ ಕಾಲೇಜುಗಳು ದತ್ತು: ಸಚಿವ ಪ್ರಿಯಾಂಕ್ ಖರ್ಗೆ

Update: 2023-11-10 16:40 GMT

ಬೆಂಗಳೂರು, ನ.10: ರಾಜ್ಯದ 100 ವಿವಿಧ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ವಿವಿಧ 100 ಎಂಜನಿಯರಿಂಗ್ ಕಾಲೇಜುಗಳನ್ನು ಜೋಡಿಸಿ ಕೌಶಲ್ಯ ಅಭಿವೃದ್ಧಿಯಲ್ಲಿ ತರಬೇತಿ ನೀಡುವ ಮೂಲಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಬೇಡಿಕೆಯಿರುವ ಉದ್ಯೋಗಗಳಿಗೆ ಸೂಕ್ತವಾಗಿ ಯುವ ಜನಾಂಗವನ್ನು ಸಜ್ಜುಗೊಳಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 

ಶುಕ್ರವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ನಡೆಸಿದ ಮಾಹಿತಿ ತಂತ್ರಜ್ಞಾನ ಕೌಶಲ್ಯ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೌಶಲ್ಯ ನಿಪುಣತೆಯಿರುವ ಅಭ್ಯರ್ಥಿಗಳ ಅವಶ್ಯಕತೆಯಿದೆ, ಅನಿಮೇಷನ್, ಗೇಮಿಂಗ್, ಕೃತಕ ಬುದ್ಧಿಮತ್ತೆ, ರೊಬೋಟ್ಸ್, ಆಟೋಮೆಷಿನ್, ದ್ರೋಣ್ ಮುಂತಾದ ಕ್ಷೇತ್ರಗಳಲ್ಲಿ ಈಗ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂದು ಅವರು ಹೇಳಿದರು.

ಅಂತಹ ಹುದ್ದೆಗಳಿಗೆ ಯುವಕ ಯುವತಿಯರನ್ನು ಕುಶಲಿಗಳನ್ನಾಗಿ ಸಿದ್ಧ ಮಾಡಲು ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸರಕಾರದ ಐಟಿಐ ತರಬೇತಿ ಸಂಸ್ಥೆಗಳು ಸ್ಥಳೀಯ ಉದ್ಯೋಗಕ್ಕೆ ಅನುಗುಣವಾಗಿ ವೃತ್ತಿ ತರಬೇತಿ ನೀಡುವಂತೆ ಮಾರ್ಪಾಟು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಭೆಯಲ್ಲಿ ಭಾಗಿಗಳಾಗಿದ್ದ ಪ್ರತಿಷ್ಠಿತ ಕಂಪೆನಿಗಳ ಉನ್ನತ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹುದ್ದೆಗಳ ಬೇಡಿಕೆಯಿದೆಯಾದರೂ, ಅಭ್ಯರ್ಥಿಗಳಲ್ಲಿ ಕೌಶಲ್ಯ ಪರಿಣತಿ ಇಲ್ಲದಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿಲ್ಲ, ಸರಕಾರದ ವತಿಯಿಂದ ತಾಂತ್ರಿಕ ವಿದ್ಯಾರ್ಹತೆ ಇರುವ ಯುವಕ, ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಸಜ್ಜುಗೊಳಿಸಿದಲ್ಲಿ ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳಿಗೆ ಪೂರಕವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೌಶಲ್ಯ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಅಧ್ಯಕ್ಷರಾದ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News