ಲಂಚ ಸ್ವೀಕಾರ ಆರೋಪ: ಕೇರಳದಲ್ಲಿ ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳು ವಶಕ್ಕೆ
ಬೆಂಗಳೂರು, ಆ.3: ಆನ್‍ಲೈನ್ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಆರೋಪಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬೆಂಗಳೂರಿನ ಇನ್ಸ್‍ಪೆಕ್ಟರ್, ಮೂವರು ಸಿಬ್ಬಂದಿಯನ್ನು ಕೊಚ್ಚಿ ಸಮೀಪದ ಕಳಂಚೇರಿ ಠಾಣಾ ಪೊಲೀಸರು ವಶಕ್ಕೆ ಪಡೆದು ನೋಟಿಸ್ ಜಾರಿಗೊಳಿಸಿ ಬಿಡುಗಡೆ ಗೊಳಿಸಿದ್ದಾರೆ.
ಬೆಂಗಳೂರಿನ ವೈಟ್‍ಫೀಲ್ಡ್ ವಿಭಾಗದ (ಸಿಇಎನ್) ಲೀಸ್ ಇನ್ಸ್‍ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‍ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್‍ಟೇಬಲ್ ಸಂದೇಶ್ ಎಂಬುವರು ಕಳಂಚೇರಿ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆನಂತರ, ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ.
ಜೂ.14ರಂದು ವೈಟ್‍ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಉದ್ಯೋಗ ವಿಚಾರವಾಗಿ 26 ಲಕ್ಷ ರೂ. ವಂಚನೆ ಗೈದಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆನಂತರ ತನಿಖೆಯ ವೇಳೆ ಮಡಿಕೇರಿಯ ಐಸಾಕ್ ಎಂಬಾತ ಐಸಿಐಸಿಐ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಜತೆಗೆ, ರಾಜೇಶ್ ಒತ್ತಾಯದಿಂದಾಗಿ ಕೇರಳದ ಪರೇಸ್ ಮತ್ತು ನಿಶಾಂತ್‍ಗೆ ಹಣ ವರ್ಗಾವಣೆ ಮಾಡಿದ್ದೇ ಎಂದು ಐಸಾಕ್ ಬಾಯಿಬಿಟ್ಟಿದ್ದ. ಈ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಕೇರಳದ ಮನ್ನಾಪುರಂನ ನೌಶಾದ್ ಎಂಬಾತನೇ ಮೂಲ ಕಾರಣ ಎಂದು ಆರೋಪಿಗಳು ಹೇಳಿದ್ದರು.
ಇದರನ್ವಯ ವೈಟ್‍ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‍ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‍ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್ ಟೇಬಲ್ ಸಂದೇಶ್ ನೇತೃತ್ವದ ತಂಡವೂ ಜುಲೈ 31ರಂದು ನೌಶಾದ್ ಪತ್ತೆಗೆ ಕೇರಳಕ್ಕೆ ತೆರಳಿದರು. ಆನಂತರ, ಮರುದಿಂದ ಆ.1ರಂದು ನೌಶಾದ್‍ನನ್ನು ವೆಂಗಾರಾದಲ್ಲಿ ಕರೆದುಕೊಂಡು ಹೋಗಿ, ಈತನ ಪರಿಚಯಸ್ಥರಾದ ಎರ್ನಾಕುಲಂ ಮೂಲದ ನಿಖಿಲ್ ಮತ್ತು ಅಖಿಲ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಬಳಿಕ ನಿನ್ನೆ (ಬುಧವಾರ) ವೈಟ್‍ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‍ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‍ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್‍ಟೇಬಲ್ ಸಂದೇಶ್ ತನ್ನಿಂದ 3 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಶಂಕಿತ ಆರೋಪಿ ಅಖಿಲ್ ತನ್ನ ವಕೀಲರ ಮೂಲಕ ಕಳಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಇದರನ್ವಯ ವಿಚಾರಣೆ ನಡೆಸಿದಾಗ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ವೈಟ್‍ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‍ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್‍ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್‍ಟೇಬಲ್ ಸಂದೇಶ್ ವಿರುದ್ಧ ಸುಲಿಗೆ ಆರೋದಪಡಿ ಮೊಕದ್ದಮೆ ದಾಖಲಿಸಿ, ವಿಚಾರಣೆ ನಡೆಸಿ, ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ.
"ಪೊಲೀಸರು ಬಂಧಿಸಿಲ್ಲ, ಬಿಡುಗಡೆ ಮಾಡಿದ್ದಾರೆ'ʼ
ಲಂಚಕ್ಕೆ ಬೇಡಿಕೆ ಆರೋಪ ಸಂಬಂಧ ವೈಟ್‍ಫೀಲ್ಡ್ ವಿಭಾಗದ ಪೊಲೀಸರನ್ನು ವಿಚಾರಣೆಯ ನಂತರ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ. ಆದರೆ, ಬಂಧಿಸಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಗಿರೀಶ್, ವೈಟ್‍ಫೀಲ್ಡ್ ಡಿಸಿಪಿ