ರದ್ದಾದ ಖಾತೆಗೆ ಶರಣಬಸಪ್ಪ ದರ್ಶನಾಪುರ ಅವರ ನೇಮಕ ಆರೋಪ: ರಾಜ್ಯಪಾಲರಿಗೆ ʼನೈಜ ಹೋರಾಟಗಾರರ ವೇದಿಕೆʼ ದೂರು

Update: 2023-08-25 05:35 GMT

 ಥಾವರ್‌ ಚಂದ್‌ ಗೆಹ್ಲೋಟ್‌ | ಎಚ್.ಎಂ ವೆಂಕಟೇಶ್ | ಸಚಿವ ದರ್ಶನಾಪುರ

ಬೆಂಗಳೂರು, ಆ.25: ʼʼಹಿಂದಿನ ಸರಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದರೂ, ಆ ಖಾತೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ನೇಮಕಗೊಳಿಸಲಾಗಿದೆʼʼ ಎಂದು ʼನೈಜ ಹೋರಾಟಗಾರರ ವೇದಿಕೆʼ ಆರೋಪ ಮಾಡಿದೆ. 

ಈ ಕುರಿತು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿರುವ ʼನೈಜ ಹೋರಾಟಗಾರರ ವೇದಿಕೆʼಯ ಎಚ್.ಎಂ ವೆಂಕಟೇಶ್, ʼʼರಾಜ್ಯ ಸರಕಾರದ ಸಚಿವರುಗಳ ಖಾತೆ ಹಂಚಿಕೆಯ ಸಂದರ್ಭದಲ್ಲಿ  ರಾಜ್ಯಪಾಲರಿಗೆ ಸಲ್ಲಿಸಿದ ಖಾತೆ ಹಂಚಿಕೆಯ ವಿವರಗಳಲ್ಲಿ ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿ ಶರಣಬಸಪ್ಪ ದರ್ಶನಪುರ ಅವರನ್ನು ಸಾರ್ವಜನಿಕ ಉದ್ದಿಮೆ ಖಾತೆಯ ಸಚಿವರಾಗಿ ನೇಮಿಸಿ ಪಟ್ಟಿ ಕಳಿಸಿದ್ದು, ಈ ಬಗ್ಗೆ ರಾಜ್ಯಪಾಲರು ಸರಕಾರದ ಸಚಿವರ ಖಾತೆ ಹಂಚಿಕೆಯ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಪ್ರಕಾರ ಶರಣಬಸಪ್ಪ ದರ್ಶನಾಪುರ ಅವರು ವಿಧಾನಸೌಧದ ಅಧಿಕೃತ ಕಚೇರಿಯರಲ್ಲಿಸಾರ್ವಜನಿಕ ಉದ್ದಿಮೆಗಳ ಸಚಿವರು ಎಂದು ನಮೂದಿಸಿ ಫಲಕವನ್ನು ಹಾಕಿದ್ದಾರೆ. ವಾಸ್ತವವಾಗಿ ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನೇ ರದ್ದುಪಡಿಸಿದ್ದಾರೆ ಎಂಬ ವಿಷಯವನ್ನು ಮರೆಮಾಚಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದಿದ್ದಾರೆʼʼ ಎಂದು ದೂರಿದ್ದಾರೆ. 

ʼʼಸಚಿವರಾದ ಶರಣ ಬಸಪ್ಪ ದರ್ಶನಾಪುರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಾರ್ವಜನಿಕ ಉದ್ದಿಮೆ ಖಾತೆಯನ್ನು ಹಣಕಾಸು ಖಾತೆಯೊಂದಿಗೆ ವಿಲೀನ ಮಾಡಿರುವುದಾಗಿ, ಆದುದರಿಂದ ನಾನು ಈ ಖಾತೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳ ಸಭೆಯನ್ನು ಕರೆಯಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಾರ್ವಜನಿಕ ಉದ್ದಿಮೆ ಖಾತೆಯು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯ ಮಂತ್ರಿಯವರಿಗೆ ಸೇರಿದ್ದಾಗಿರುತ್ತದೆ . ಸಾರ್ವಜನಿಕರಲ್ಲಿಈ ವಿಷಯದ ಬಗ್ಗೆಗೊಂದಲವಿದ್ದು ಸಾರ್ವಜನಿಕ ಉದ್ದಿಮೆಗಳ ಖಾತೆಯು ಸರ್ಕಾರದಲ್ಲಿಇದೆಯೋ? ಅಥವಾ ರದ್ದಾಗಿದೆಯೋ? ಅಥವಾ ಹಣಕಾಸು ಇಲಾಖೆಯೊಂದಿಗೆ ವಿಲೀನವಾಗಿದೆಯೋ? ಎಂಬುದು ಗೊಂದಲಮಯವಾಗಿದೆ. ಆದುದರಿಂದ ಗೌರವಾನ್ವಿತ ರಾಜ್ಯಪಾಲರಾದ ತಾವುಗಳು ಸಾರ್ವಜನಿಕ ಉದ್ದಿಮೆಗಳ ಖಾತೆಯ ಸಚಿವರಾಗಿ ಶರಣಬಸಪ್ಪ ದರ್ಶನಪುರವರನ್ನು ನೇಮಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು ತಕ್ಷಣ ತಪ್ಪುಗಳನ್ನು ಸರಿಪಡಿಸಿ ಅಧಿಸೂಚನೆಯನ್ನು ಹೊರಡಿಸಬೇಕುʼʼ ಎಂದು ಅವರು ಆಗ್ರಹಿಸಿದ್ದಾರೆ. 

ʼʼ ಕರ್ನಾಟಕ ಸರ್ಕಾರದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿನ ಸಚಿವ ಶರಣಬಸಪ್ಪ ದರ್ಶನಪುರ ಅವರ ಅಧಿಕೃತ ಕೊಠಡಿಯ ಬಾಗಿಲಿಗೆ ಅಳವಡಿಸಿದ್ದ ಫಲಕವನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಬೇಕುʼʼ ಎಂದು ವೆಂಕಟೇಶ್ ತ್ರಪದಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News