ಹುಬ್ಬಳ್ಳಿ ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ | ʼಆರೋಪಿಯ ಮೃತದೇಹ ದಹನ ಮಾಡುವುದಿಲ್ಲʼ; ಹೈಕೋರ್ಟ್‌ಗೆ ಸರಕಾರ ಮಾಹಿತಿ

Update: 2025-04-15 17:13 IST
ಹುಬ್ಬಳ್ಳಿ ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ | ʼಆರೋಪಿಯ ಮೃತದೇಹ ದಹನ ಮಾಡುವುದಿಲ್ಲʼ; ಹೈಕೋರ್ಟ್‌ಗೆ ಸರಕಾರ ಮಾಹಿತಿ
  • whatsapp icon

ಬೆಂಗಳೂರು: ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಆರೋಪಿ ರಿತೇಶ್ ಮೃತದೇಹ ದಹನ ಮಾಡದಂತೆ ಸರಕಾರಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಕೆಯಾಗಿದೆ.

ಇಡೀ ಪ್ರಕರಣಕ್ಕೆ ಆರೋಪಿಯ ಮೃತದೇಹವು ಪ್ರಮುಖ ಸಾಕ್ಷ್ಯವಾಗಿದ್ದು, ಮೃತದೇಹವನ್ನು ದಹನ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಮತ್ತು ಡಾ.ಮಧು ಭೂಷಣ್‌ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರಕಾರ, ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ರಿತೇಶ್ ಮೃತದೇಹವನ್ನು ಮುಂದಿನ ತನಿಖೆಗೆ ಲಭ್ಯವಾಗುವಂತೆ ಮಾಡುವ ಸಲುವಾಗಿ ದಹನ ಮಾಡದೆ ಸಮಾಧಿ ಮಾಡಲಾಗುವುದು ಎಂದು ಹೈಕೋರ್ಟ್​​ಗೆ ತಿಳಿಸಿದೆ.

ಅರ್ಜಿ ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಡ್ವೋಕೇಟ್ ಜನರಲ್‌ ಶಶಿಕಿರಣ್‌ ಶೆಟ್ಟಿ, ಈ ರೀತಿಯ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಆದರೆ, ಮುಂದಿನ ತನಿಖೆಗೆ ನೆರವಾಗಬೇಕು ಎಂಬ ಕಾರಣದಿಂದ ಸಮಾಧಿ ಮಾಡಲಾಗುವುದು. ಆಗ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.

ಈ ವಾದ ದಾಖಲಿಸಿಕೊಂಡ ಹೈಕೋರ್ಟ್ ಸಂಪೂರ್ಣ ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಹುಬ್ಬಳ್ಳಿ ಬಾಲಕಿಯ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲಿಸಲು ಆದೇಶಿದೆ. ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಆರೋಪಿಯ ಮರಣೋತ್ತರ ಪರೀಕ್ಷೆಯ ವಿಡಿಯೋಗ್ರಾಫ್ ಮಾಡಲು ಸೂಚನೆ ನೀಡಿರುವ ಹೈಕೋರ್ಟ್, ಮರಣೋತ್ತರ ಪರೀಕ್ಷೆ ವೇಳೆ ಸಂಗ್ರಹಿಸಿದ ಭಾಗ ರಕ್ಷಿಸಿಡಲು ಆದೇಶಿದೆ.

ವಿಚಾರಣೆ ವೇಳೆ ಎಜಿ ಶಶಿಕಿರಣ್ ಶೆಟ್ಟಿ ಆರೋಪಿಯ ದೇಹವನ್ನು ಇನ್ನೂ ಪೋಷಕರು ಗುರುತಿಸಿಲ್ಲ. ಹೀಗಾಗಿ ತಕ್ಷಣಕ್ಕೆ ಅಂತ್ಯಕ್ರಿಯೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಮರಣೋತ್ತರ ಪರೀಕ್ಷೆ ಮಾಡುವಾಗ ಅಗತ್ಯ ಭಾಗ ಸಂರಕ್ಷಿಸಿಡಲಾಗುವುದು ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಇಬ್ಬರು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲು ಆದೇಶಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News