ಬೆಂಗಳೂರು: ಪ್ರಿಯಕರನಿಗೆ ಚಾಕುವಿನಿಂದ ಇರಿದ ಮಹಿಳೆ
ಬೆಂಗಳೂರು, ಜು.23: ಪ್ರೇಯಸಿಯೇ ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಜೋಗೇಶ್(26) ಇರಿತಕ್ಕೊಳಗಾದ ಯುವಕ ಎಂದು ತಿಳಿದು ಬಂದಿದೆ.
ಆರೋಪಿ ಮಹಿಳೆ ಬರೂತಿಯನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೋಗೇಶ್ ಮತ್ತು ಮಹಿಳೆ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಮಹಿಳೆ ಡೇ ಕೇರ್ ನಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಜೋಗೇಶ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈ ಮೊದಲೇ ಒಂದು ಮದುವೆಯಾಗಿ ಗಂಡನಿಂದ ಮಹಿಳೆ ದೂರವಾಗಿದ್ದಳು. ಆ ಬಳಿಕ ಜೋಗೇಶ್ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರೂ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.
ಪ್ರೇಯಸಿಯ ಬಳಿ ಪ್ರಿಯಕರ ಜೋಗೇಶ್ ಸಾಕಷ್ಟು ಹಣ ಪಡೆದುಕೊಂಡಿದ್ದ. ಇತ್ತೀಚೆಗೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಪ್ರಿಯಕರನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಜಗಳ ತೆಗೆದಿದ್ದಾಳೆ. ಈ ಜಗಳ ಅತಿರೇಕಕ್ಕೆ ಹೋದ ವೇಳೆ ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಕರನಿಗೆ ಚಾಕು ಇರಿದ ಮಹಿಳೆ ಪರಾರಿಯಾಗಲು ಯತ್ನಿಸಿದ್ದಳು. ಆದರೆ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ಘಟನೆಯಲ್ಲಿ ಪ್ರಿಯಕರ ಜೋಗೇಶ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.