ನಾಳೆ (ಸೆ.11) ಬೆಂಗಳೂರು ಬಂದ್ ಗೆ ಕರೆ: ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ

Update: 2023-09-10 12:41 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 10: ಸರಕಾರ ಜಾರಿಗೊಳಿಸಿರುವ ‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ನಾಳೆ(ಸೆ.11)ಬೆಂಗಳೂರು ಬಂದ್‍ಗೆ ಕರೆ ನೀಡಿದ್ದು, ಆಟೋ, ಖಾಸಗಿ ಬಸ್, ಕ್ಯಾಬ್ ಸೇರಿ ಖಾಸಗಿ ವಾಹನ ಸೇವೆ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಬಂದ್‍ನ ಬಿಸಿ ತಟ್ಟುವ ಸಾಧ್ಯತೆಗಳಿವೆ.

ಅಲ್ಲದೇ, ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಹ ಬಂದ್ ಬೆಂಬಲಿಸಿದ್ದಾರೆ. ಆದ್ದರಿಂದ ಬಿಎಂಟಿಸಿ ಪ್ರಯಾಣಿಕರ ನೆರವಿಗೆ ಬಂದಿದೆ.

ʼʼಬಂದ್‍ನಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಎಂಟಿಸಿ ಮುನ್ನೆಚರಿಕೆ ಕ್ರಮ ಕೈಕೊಂಡಿದೆ. ಕೆಂಪೇಗೌಡ ಏರ್ಪೋರ್ಟ್ ನಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಟ್ರಿಪ್ ಮಾಡಲು ಚಾಲಕರಿಗೆ ಸೂಚಿಸಲಾಗಿದೆ. ರವಿವಾರ ಮಧ್ಯರಾತ್ರಿಯಿಂದಲೇ ವಿಮಾನ ನಿಲ್ದಾಣದಿಂದ ಬಿಎಂಟಿಸಿ ವಾಯುವಜ್ರ ಬಸ್‍ಗಳ ಸಂಚಾರ ಆರಂಭವಾಗಲಿದೆ. ಪ್ರತಿನಿತ್ಯ 500ಕ್ಕೂ ಅಧಿಕ ಟ್ರಿಪ್‍ಗಳನ್ನ ಬಿಎಂಟಿಸಿ ಓಡಿಸುತ್ತಿದ್ದು, ಬಂದ್ ಇರುವ ಹಿನ್ನೆಲೆ ಹೆಚ್ಚುವರಿಯಾಗಿ 100 ಟ್ರಿಪ್ ಓಡಿಸಲು ಸೂಚಿಸಲಾಗಿದೆʼʼ ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ. 

ʼನಗರದಲ್ಲಿ ಭದ್ರತೆ ಹೆಚ್ಚಳʼ

‘ಆಟೋ, ಖಾಸಗಿ ಬಸ್ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಬಂದ್‍ನಲ್ಲಿ ಪಾಲ್ಗೊಳ್ಳುವಂತೆ ಕ್ಯಾಬ್, ಆಟೋ ಹಾಗೂ ಖಾಸಗಿ ಬಸ್ ಚಾಲಕರ ಮೇಲೆ ಬಲವಂತ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’

-ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News